ಹಿಂಸಾಚಾರಕ್ಕೆ ಕೊನೆ ಎಂದು?
ಇಡೀ ದೇಶಕ್ಕೆ ದೇಶವೇ ಚುನಾವಣೆಯ ಸಿದ್ಧತೆಯಲ್ಲಿ ಮಗ್ನವಾಗಿದ್ದಾಗ, ಚತ್ತೀಸಗಡದ ನಕ್ಸಲ್ ಸಂಘಟನೆಗಳು ಮತ್ತೆ ಅಲ್ಲಿನ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಇಪ್ಪತ್ತು ಯೋಧರನ್ನು ಗುಂಡಿಟ್ಟು ಕೊಂದು ತಮ್ಮ ಅಸ್ತಿತ್ವವನ್ನು ಪ್ರದರ್ಶಿಸಿದ್ದಾರೆ. ಇದೇ ಸ್ಥಳದಲ್ಲೇ ಕಳೆದ ಮೇನಲ್ಲಿ ನಕ್ಸಲೀಯರು ರಾಜ್ಯದ ಹಿರಿಯ ಕಾಂಗ್ರೆಸ್ಸಿಗರ ಸಭೆಯ ಮೇಲೆ ದಾಳಿ ನಡೆಸಿ, ಎಲ್ಲ ಪ್ರಮುಖ ನಾಯಕರನ್ನು ಕೊಂದಿದ್ದರು. ಇದು ಹೀಗೇ ಮುಂದುವರಿಯಬೇಕು ಎಂದು ಹೇಳುವವರು ದೇಶದಲ್ಲಿ ಯಾರೂ ಇರಲಿಕ್ಕಿಲ್ಲ. ಆದರೂ ಆ ಪ್ರದೇಶದಲ್ಲಿ ಹಾಗೂ ನೆರೆಹೊರೆಯ ಸೀಮೆಯಲ್ಲಿ ನಕ್ಸಲೀಯರ ಹಿಂಸಾಚಾರ ಮುಂದುವರಿದಿದೆ. ಮಂಗಳವಾರದ ಘೋರ ಘಟನೆ ನಡೆದಿದ್ದು ಆ ಭಾಗದಲ್ಲಿ ಒಂದು ರಸ್ತೆಯ ನಿರ್ಮಾಣದ ಕೆಲಸ ಮುಗಿದಿರುವುದನ್ನು ಗುರ್ತಿಸುವ ಒಂದು ಸನ್ನಿವೇಶದಲ್ಲಿ. ಸುಕ್ಮಾ ಜಿಲ್ಲೆಯಲ್ಲೇ 2010ರ ಏಪ್ರಿಲ್‌ನಲ್ಲಿ 76 ಮಂದಿ ಪೊಲೀಸರು ನಕ್ಸಲ್ ಹಿಂಸಾಚಾರಕ್ಕೆ ಬಲಿಯಾಗಿದ್ದರು. ಮಂಗಳವಾರದ ಘಟನೆಗಳಲ್ಲಿ ನಕ್ಸಲೀಯರಲ್ಲೂ ಅನೇಕರು ಸತ್ತಿರಬೇಕು. ಆದರೆ ಆ ವಿವರಗಳು ಪ್ರಕಟವಾಗಲು ಸಮಯ ಬೇಕು.
ಇಂತಹ ಘಟನೆ ನಡೆದಾಗಲೆಲ್ಲ, ಒಂದು ಕಡೆ ಹಿಂಸಾಚಾರವನ್ನು ತಡೆಗಟ್ಟಲೇಬೇಕೆನ್ನುವ ಕೂಗು ಜನಸಾಮಾನ್ಯರಿಂದ ಕೇಳಿ ಬರುವುದು, ಸರ್ಕಾರದ ಪರವಾಗಿ ಮಂತ್ರಿಗಳು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡುವುದೂ ಒಂದು ವಾಡಿಕೆಯಾಗಿಬಿಟ್ಟಿದೆ. ಸದ್ಯಕ್ಕೆ ಚುನಾವಣೆ ಮುಗಿಯುವವರೆಗಾದರೂ, ಗಲಭೆ ಪೀಡಿತ ಪ್ರದೇಶಗಳಲ್ಲಿ ಅಗತ್ಯ ಕಂಡು ಬಂದರೆ, ಸೇನೆಯ ಶಕ್ತಿಯನ್ನು ಬಳಸುವುದಕ್ಕೆ ಹಿಂದೆ ಮುಂದೆ ನೋಡಬಾರದು. ಚುನಾವಣೆ ಸಮಯದಲ್ಲಿ ಪೊಲೀಸ್ ಪಡೆಗಳ ಮೇಲೆ ಕೆಲಸದ ಒತ್ತಡ ಜಾಸ್ತಿ.