ತಪ್ಪಾಯ್ತು ತಿದ್ಕೋತೀವಿ
ಬಾಗಲಕೋಟೆ ಜಿಲ್ಲೆ ಇಳಕಲ್ಲದಿಂದ ಶ್ರೀಕಾಂತ ಮುದಗಲ್ಲ ಅವರು ಬರೆಯುತ್ತಾರೆ- 'ಮಾ.1ರ ಸಂಚಿಕೆಯ ಪುಟ 3ರಲ್ಲಿ 'ನೇಕಾರರ ಸಾಲ ಮನ್ನಾ' ಯೋಜನೆ ಸರಳೀಕರಣ ಎಂಬ ತಲೆಬರಹದ ಸುದ್ದಿ ಇದೆ. ಇದರ ಉಪ ತಲೆ ಬರಹದಲ್ಲಿ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಸಮಿತಿ: ರಚನೆ: ಉಮಾಶ್ರೀ ಎಂದಿದೆ. ಅದು 'ಸಮಿತಿ ರಚನೆ: ಉಮಾಶ್ರೀ' ಎಂದಾಗಬೇಕಿತ್ತು.'
'ಇನ್ನು ಅದೇ ಸಂಚಿಕೆಯ ಪುಟ 8ರಲ್ಲಿ 'ಹಾಸನದಲ್ಲಿ ಗೌಡ್ರು: ಚಿಕ್ಕಬಳ್ಳಾಪುರದಲ್ಲಿ ಸೊಸೆ' ಎಂಬ ತಲೆಬರಹದ ಸುದ್ದಿಯಲ್ಲಿನ ಬಾಕ್ಸ್‌ನಲ್ಲಿ 'ನಿಖಿಲ್ ಢ/ಡ ಪ್ರಜ್ವಲ್' ಎಂಬ ಶೀರ್ಷಿಕೆಯ ಸುದ್ದಿ ಪ್ರಕಟವಾಗಿದೆ. ಇಲ್ಲಿ ನಿಖಿಲ್ ಢ/ಡ ಪ್ರಜ್ವಲ್ ಎಂದರೆ ಚುನಾವಣೆಯಲ್ಲಿ ಇಬ್ಬರೂ ಪರಸ್ಪರ ವಿರುದ್ಧವಾಗಿ ಸ್ಪರ್ಧಿಸುತ್ತಿದ್ದಾರೆ ಎಂಬರ್ಥ ಬರುತ್ತದೆ. ಆದರೆ ಮಂದಿ ಸುದ್ದಿ ಓದಿದಾಗ ಅವರು ಬೇರೆ ಬೇರೆ ಕಡೆ (ಬೆಂ. ಗ್ರಾ. ಹಾಗೂ ಮಂಡ್ಯ) ಸ್ಪರ್ಧಿಸುವ ವಿವರ ಇದೆ. ಹೀಗಾಗಿ ನಿಖಿಲ್ ಢ/ಡ ಪ್ರಜ್ವಲ್ ಎಂದು ಬರೆಯುವ ಬದಲು ನಿಖಿಲ್ ಹಾಗೂ ಪ್ರಜ್ವಲ್ ಎಂದು ಶೀರ್ಷಿಕೆ ನೀಡಿದ್ದರೆ ಸರಿಯಾಗುತ್ತಿತ್ತು' ಎಂದಿದ್ದಾರೆ.
ಶ್ರೀಕಾಂತ ಮುದಗಲ್ಲ ಅವರು ಹೇಳಿರುವುದು ಸರಿಯಾಗಿದೆ. ಅವರು ಪರಸ್ಪರ ವಿರುದ್ಧ ಸ್ಪರ್ಧಿಸುತ್ತಿಲ್ಲವಾದ್ದರಿಂದ ಅಲ್ಲಿ ವರ್ಸಸ್ ಬಳಸುವ ಅಗತ್ಯವಿರಲಿಲ್ಲ. ಆದರೆ ದೇವೇಗೌಡರ ಕುಟುಂಬದಲ್ಲಿ ಅವರಿಬ್ಬರಲ್ಲಿ ಯಾರು ಮೊದಲು ರಾಜಕೀಯಕ್ಕೆ ಬರುತ್ತಾರೆ ಎಂಬ ಚರ್ಚೆಯ ಹಿನ್ನೆಲೆಯಲ್ಲಿ ಈ ರೀತಿ ಶೀರ್ಷಿಕೆ ನೀಡಿರಬಹುದು.
ಬಾಗಲಕೋಟೆ ಜಿಲ್ಲೆ ಹುನಗುಂದದಿಂದ ಸಂಗಪ್ಪ ಗಾಣಿಗೇರ ಅವರು ಬರೆಯುತ್ತಾರೆ- 'ಡಿ.19ರಂದು ಪುಟ (7) ರಲ್ಲಿಯ ಲೇಖನ 'ಅಣ್ಣಾರಿಗೇ ಶ್ರೇಯಸ್ಸು, ಕೇಜ್ರಿವಾಲ್ ಠುಸ್ಸು' ಎಂಬಲ್ಲಿ ಕಾಲಮ್ ನಂ.2ರಲ್ಲಿ ಸಾರ್ವಜನಿಕ ಗ್ರಹಿಕೆಯ 'ಔನತ್ಯ' ಎಂಬುದು 'ಔನ್ಯತ್ಯ' ಎಂದಾಗಬೇಕಿತ್ತು. ಅದರಂತೆ ಅದೇ ಕಾಲಮ್ಮಿನ ಕೆಳಗೆ ಅವರ ಈ ಪ್ರಭೆ ಕೇಜ್ರಿವಾಲ್, ಮತ್ತವರ ತಂಡವನ್ನು ಮಸುಕಾಗಿಸಬಹುದು ಎಂತಾಗಬೇಕಿತ್ತಲ್ಲವೇ?' ಎಂದಿದ್ದಾರೆ.
'ಔನತ್ಯ' ತಪ್ಪು ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ 'ಔನ್ಯತ್ಯ' ಸರಿ ಎಂದು ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ. ಅದು 'ಔನ್ನತ್ಯ' ಎಂದಾಗಿದ್ದರೆ ಸಮರ್ಪಕವಾಗುತ್ತಿತ್ತು.
ಈರೋಡು ಜಿಲ್ಲೆ ತಾಳವಾಡಿ ಫಿರ್ಕದಿಂದ ಡಿ. ಗುರುಮಲ್ಲಪ್ಪ ಅವರು ಬರೆಯುತ್ತಾರೆ- 'ಪದಯಾತ್ರೆ 377ಕ್ಕೆಂದು ಕೊಟ್ಟಿರುವ ಉತ್ತರ ದೃಡಕಾಯ. ಒಂದನ್ನು ಬಿಟ್ಟು ಉಳಿದುವೆಲ್ಲಾ ತಪ್ಪು. ಒಂದಕ್ಕೊಂದಕ್ಕೆ ಸಂಬಂಧವಿಲ್ಲ.'
'ಪದಯಾತ್ರೆ 378ರ ಮನೆಗಳಿಗೂ ಅಲ್ಲಿ ಕೇಳಿರುವ ಪ್ರಶ್ನೆಗಳಿಗೂ ಹೊಂದಾಣಿಕೆಯಿಲ್ಲ. 1ನೇ ದು (ಎ.ಬ.) ರೋಗ ಮೂಲ ಗುರುತಿಸುವಿಕೆ (3) ಎಂದಿದೆ. ಆದರೆ ಅಲ್ಲಿ 5 ಮನೆಗಳಿವೆ. ಹೀಗೆ ಎಲ್ಲಾ ವ್ಯತ್ಯಾಸ. 1ನೇದು (ಮೇ.ಕೆ) ದಿನವೂ ನಡೆಸುವ ಉತ್ಸವ (4) ಎಂದಿದೆ. ಅಲ್ಲಿರುವುದು ಎರಡೇ ಮನೆ. ಹೀಗೆ ಎಲ್ಲಾ ವ್ಯತ್ಯಾಸವಾಗಿವೆ' ಎಂದಿದ್ದಾರೆ.
ಪದಯಾತ್ರೆ ಬಗ್ಗೆ ಸಾಕಷ್ಟು ದೂರುಗಳು ಆಗಾಗ ಬರುತ್ತಿವೆ. ತಪ್ಪುಗಳು ಆದಾಗ, ಅದನ್ನು ಗಮನಕ್ಕೆ ತಂದಾಗ ಒಂದೆರಡು ದಿನ ಸರಿಯಾಗಿ ಬರುತ್ತದೆ. ನಂತರ ಮತ್ತೆ ತಪ್ಪುಗಳು ಕಾಣಿಸುತ್ತಿವೆ. ಈ ಬಗ್ಗೆ ಎಚ್ಚರ ಅಗತ್ಯ.
-ವಿಶ್ವೇಶ್ವರ ಭಟ್