ತಪ್ಪಾಯ್ತು ತಿದ್ಕೋತೀವಿ
ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪು ಕುರ್ನಾಡಿನಿಂದ ಎಂ. ಸುಬ್ರಹ್ಮಣ್ಯ ಭಟ್ ಅವರು ಬರೆಯುತ್ತಾರೆ- 'ಶ್ರೀ ನಾರಾಯಣಗುರುಗಳ ಪರಿಚಯದಲ್ಲಿ (ಹಿರಿಯರ ಹಾದಿ, ಕ.ಪ್ರ. ಫೆ.14) ಅವರು 'ಈಳವ ಜನಾಂಗದವ'ರೆಂದು ತಿಳಿಸಿ 'ಈಳವರು ಮದ್ಯವನ್ನಿಳಿಸಿ ಮಾರಾಟ ಮಾಡುತ್ತಿದ್ದರೆಂದು' ಹೇಳಲಾಗಿದೆ. ಆದರೆ 'ಮದ್ಯ'ದ ಜಾಗದಲ್ಲಿ ಹೆಂಡ (ಶೇಂದಿ) ಎಂಬ ಪದ ಸೂಕ್ತವಾಗುತ್ತಿತ್ತೇನೋ.'
'ತಾಳೆ (ಎಣ್ಣೆ ತಾಳೆ ಅಲ್ಲ), ಈಚಲು, ಬೈನೆ, ತೆಂಗುಮರಗಳಿಂದ ಹೆಂಡ ಇಳಿಸಲಾಗುತ್ತದೆ. ದ.ಕ. ಪರಿಸರದಲ್ಲಿ ಈಳವರನ್ನು 'ಪೂಜಾರಿ'ಗಳೆಂದು ಕರೆಯುತ್ತಾರೆ. ಕೆಲವೆಡೆ 'ಈಡಿಗ'ರೆಂಬ ಹೆಸರೂ ಇದೆ. ಮರದಿಂದ ಇಳಿಸಿದ್ದು ಹೆಂಡ (ಶೇಂದಿ)ವಾದರೆ ಭಟ್ಟಿ ಇಳಿಸಿ ಪಡೆದುದು ಮದ್ಯ. (ಸಾರಾಯಿ). ಸಂಸ್ಕೃತದಲ್ಲಿ ಹೆಂಡಕ್ಕೆ ಕಾದಂಬರೀ ಎಂಬ ಹೆಸರಿದೆ. ಅಮರಕೋಶದಲ್ಲಿ ಹೆಂಡಕ್ಕೆ ಸುರಾ, ಹಲಿಪ್ರಿಯಾ (ಬಲರಾಮನಿಗೆ ಪ್ರಿಯವಾದುದು) ಹಾಲಾ, (ಲಲಿತಾ ಸಹಸ್ರನಾಮ-ಹಾಲಮದೋಲ್ಲಸಾ) ಈರಾ, ಕಾದಂಬರೀ, ಮದಿರಾ ಎಂಬಿತ್ಯಾದಿ ಪರ್ಯಾಯ ನಾಮಗಳಿವೆ. ಹಿಪ್ಪೆ ಹೂವಿನ ಮದ್ಯಕ್ಕೆ ಮಧ್ವಾಸವ, ದ್ರಾಕ್ಷಿಯ ಮದ್ಯಕ್ಕೆ ಮಾಧ್ವೀಕ, ಕಬ್ಬಿನಹಾಲಿನ ಮದ್ಯಕ್ಕೆ ಮೈರೇಯ, ಶೀಧು ಇತ್ಯಾದಿ ಹೆಸರುಗಳಿವೆ. ಅಮರಕೋಶದ ಎರಡನೇ ಕಾಂಡದ ಹತ್ತನೆಯ ಅಧ್ಯಾಯದಲ್ಲಿ ಹೆಂಡ ಮತ್ತು ಮದ್ಯಕ್ಕೆ ಸಂಬಂಧಿಸಿದ ನಾಲ್ಕೂವರೆ ಶ್ಲೋಕ (ಒಂಭತ್ತು ಸಾಲು)ಗಳಿವೆ. ಆಸಕ್ತರು ಶಬ್ದಗಳ ಸ್ವಾರಸ್ಯವನ್ನು ಅಲ್ಲಿ ಸವಿಯಬಹುದು' ಎಂದಿದ್ದಾರೆ.
ಬೆಂಗಳೂರಿನ ಎಚ್.ಎ.ಎಲ್ ಬಡಾವಣೆಯಿಂದ ಗಂಗಾಚಾರಿ ಅವರು ಬರೆಯುತ್ತಾರೆ- 'ಮಾ.7ರಂದು ಪುಟ 11ರಲ್ಲಿ ಪ್ರಕಟವಾದ ಮಂಡ್ಯ ಜಿಲ್ಲೆಯ ಸಂಸದೆ ದಿವ್ಯ ಸ್ಪಂದನ (ರಮ್ಯಾ) ಅವರ ಒನ್ ಎಂಪಿ ಒನ್ ಐಡಿಯಾದ ಬಗ್ಗೆ "ಘೋಷಣೆ ಮಾಡಿದ ಬಹುಮಾನ ಸಿಗಲಿಲ್ಲ" ಎಂಬ ಶೀರ್ಷಿಕೆ ಹೊತ್ತ ವರದಿಯಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ ಇನ್ನೊವೇಟೀವ್ ಐಡಿಯಾ ನೀಡಿದ್ದ 115 ಜನ ಸಾರ್ವಜನಿಕರಿಗೆ ಬಹುಮಾನ ನೀಡದಿರುವುದರ ಕುರಿತು ಬರೆದಿರುವ ಸಾಲುಗಳಲ್ಲಿ ತುಂಬಾ ತಪ್ಪುಗಳಿವೆ.'
'1. ಇನ್ನೊವೇಟೀವ್ ಐಡಿಯಾ ಎಂಬುದರ ಕನ್ನಡದ ರೂಪಾಂತರ 'ವಿನೂತನ ಆಲೋಚನೆಯ ಪ್ರಸ್ತಾವನೆ' ಎಂದಾಗಬೇಕಿತ್ತು. ಆದರೆ ಅದು 'ವಿನೂತನ ಆಲೋತನೆಯ ಪ್ರಸ್ತಾವನೆ' ಎಂದಾಗಿದೆ ಮತ್ತು ಇದೇ ಆಲೋತನೆ ಎಂಬ ಪದವು ವರದಿಯ ಸಾರಾಂಶದಲ್ಲಿ ದಪ್ಪಕ್ಷರಗಳಲ್ಲಿಯೂ ಪ್ರಕಟವಾಗಿದೆ.'
'2. ಮುಂದುವರಿದ ಸಾಲುಗಳಲ್ಲಿ 'ಒಂದು ಶಹಭಾಶ್ ಗಿರಿಯೂ ಸಿಗಲಿಲ್ಲ' ಎಂಬುದರ ಬದಲಾಗಿ ಒಂದು 'ಶಷಬಾಶ್' ಗಿರಿಯೂ ಸಿಗಲಿಲ್ಲ ಎಂದು ಮುದ್ರಿತವಾಗಿದೆ.'
'ಇತ್ತೀಚೆಗೆ ಇಂತಹ ಮುದ್ರಣ ದೋಷಗಳು ಹೆಚ್ಚಾಗುತ್ತಿವೆ. ದೋಷಪೂರಿತ ಮುದ್ರಣಗಳನ್ನು ತಪ್ಪಿಸಿ 'ಕನ್ನಡಪ್ರಭ'ವನ್ನು ಮುದ್ರಾರಾಕ್ಷಸನಿಂದ ರಕ್ಷಿಸಿ, ಪತ್ರಿಕೆಯ ಶೋಭೆಯನ್ನು ಹೆಚ್ಚಿಸಬೇಕೆಂದು ಪತ್ರಿಕಾ ಬಳಗದವರಿಗೆ ನನ್ನ ಅರಿಕೆ ಸಲ್ಲಿಸುತ್ತೇನೆ' ಎಂದಿದ್ದಾರೆ.
ವಿಶ್ವೇಶ್ವರ ಭಟ್