ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಆಪ್ ನಿಜವಾಗಿಯೂ ಆಮ್ ಆದ್ಮಿಯಾಗಲಿ

Vishwanath S
Updated On : 21 Mar 2014, 12:16 pm

ನಮ್ಮ ದೇಶದಲ್ಲಿ ರಾಜಕೀಯ ಕ್ಷೇತ್ರ ಹೊಲಸಾಗಿರುವುದು ನಿಜ. ಇದನ್ನು ಉದ್ಧಾರ ಮಾಡಲೆಂದೇ ಆಮ್ ಆದ್ಮಿಯೊಡಲಿಂದ ತಾವು ಎದ್ದು ಬಂದಿರುವುದು ಎಂದು ಅರವಿಂದ ಕೇಜ್ರಿವಾಲ್ ತಿಳಿದುಕೊಂಡಿದ್ದಾರೆ. ಇವರ ಪ್ರಕಾರ ತಮ್ಮ ಪಕ್ಷದವರ ಹೊರತು ಇತರ ಪಕ್ಷಗಳೆಲ್ಲವೂ ಭ್ರಷ್ಟವಾಗಿವೆ ಮತ್ತು ಇವುಗಳಲ್ಲೇ ಭ್ರಷ್ಟಾತಿಭ್ರಷ್ಟರೂ ಇದ್ದಾರೆ. ಈಗ ಚುನಾವಣೆಯ ಭರಾಟೆ. ಎದುರಾಳಿ ಪಕ್ಷಗಳನ್ನು ಹಳಿಯುವುದೊಂದೇ ಎಲ್ಲರ ಗುರಿ. ಆಪ್ ಕೂಡ ಇದಕ್ಕೆ ಅಪವಾದವಲ್ಲ. ಅಥವಾ ಅದರ ಬಳಿ ಇರುವ ಅಸ್ತ್ರ ಅದೊಂದೇ! ಏಕೆಂದರೆ, ಹರಿಹಾಯುವುದನ್ನು ಬಿಟ್ಟರೆ ಆಪ್ ತರಬೇಕೆಂದಿರುವ ಬದಲಾವಣೆಗಳೇನು, ಯೋಜನೆಗಳೇನು, ಅವನ್ನು ಸಾಧಿಸಲು ಅನುಸರಿಸಬೇಕೆಂದಿರುವ ಮಾರ್ಗಗಳೇನು, ದೇಶದ ಭದ್ರತೆ, ವಿದೇಶಾಂಗ ನೀತಿ, ಹಣಕಾಸು ನೀತಿ ಮುಂತಾದ ಮಹತ್ವದ ವಿಷಯಗಳ ಬಗ್ಗೆ ಅದರ ನಿಲುವೇನು ಎನ್ನುವುದು ಜನತೆಗೆ ತಿಳಿಯದು. ಹೋದಲ್ಲಿ ಬಂದಲ್ಲಿ ಭ್ರಷ್ಟಾಚಾರದ ಬಗೆಗೆ ಮಾತು; ಇದಷ್ಟೇ ಅದರ ಬಂಡವಾಳ. ಈಗ ಮಾಧ್ಯಮಗಳ ಮೇಲೆ ಆಪಾದನೆ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಾಧ್ಯಮಗಳ ಅವ್ಯವಹಾರಗಳನ್ನು ತನಿಖೆಗೊಳಪಡಿಸಿ ತಪ್ಪಿತಸ್ಥರನ್ನು ಜೈಲಿಗೆ ಅಟ್ಟುವುದಾಗಿ ಹೇಳಿಬಿಟ್ಟಿದ್ದಾರೆ ಕೇಜ್ರಿವಾಲ್. ಅಧಿಕಾರಕ್ಕೆ ಬಂದರೆ ತಾನೆ ಈ ಪ್ರತಿಜ್ಞೆಯ ಪೂರೈಕೆ. ಇವರು ಸ್ಪರ್ಧಿಸಲು ಬಯಸಿರುವ 300ರಿಂದ 350 ಕ್ಷೇತ್ರಗಳಲ್ಲಿ 272 ಕ್ಷೇತ್ರಗಳು ಇವರ ಪಾಲಾಗುವುದುಂಟೇ? ತಮ್ಮನ್ನು ಬಿಟ್ಟು ಎಲ್ಲಾ ಪಕ್ಷಗಳೂ ಭ್ರಷ್ಟ ಎಂದು ಹೇಳುತ್ತಿರುವ ಆಪ್ ಯಾರ ಜೊತೆ ಕೈಜೋಡಿಸಲಿದೆ?
ಅಂಬೆಗಾಲಿಡುತ್ತಿರುವ ಆಪ್ ಸಮುದ್ರೋಲ್ಲಂಘನೆ ಮಾಡುತ್ತೇನೆಂದು ನೆಗೆದರೆ ಅದರ ಗತಿಯೇನು? ಇವತ್ತಿನ ಮಟ್ಟಿಗೆ ಹೇಳುವುದಾದಲ್ಲಿ ಮತ್ತು ಇತರೆ ಪಕ್ಷಗಳಿಗೆ ಹೋಲಿಸಿದಲ್ಲಿ ಈ ಪಕ್ಷದವರು ಕಳಂಕಿತರಾಗಿಲ್ಲ ಎನ್ನಬಹುದು. ಆಪ್‌ನವರು ಕೇವಲ ಮಾತಿನ ಮಲ್ಲರಾದರಷ್ಟೇ ಸಾಲದು. ಆಮ್ ಆದ್ಮಿ ಪರವಾಗಿರುವವರು ನಿಜ ಅರ್ಥದಲ್ಲಿ ಆಮ್ ಆದ್ಮಿಗಳೊಡನೆ ಒಡನಾಡಲಿ ಮೊದಲು.
- ಸಾಮಗ ದತ್ತಾತ್ರಿ, ಶ್ರೀನಿವಾಸನಗರ, ಬೆಂಗಳೂರು

ಕಳಪೆ ಪ್ರಶ್ನೆ ಪತ್ರಿಕೆ
3.3.14ರಂದು ನಡೆದ ರಾಜ್ಯ ಮಟ್ಟದ ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತೆಯ ಕನ್ನಡ ಪ್ರಶ್ನೆ ಪತ್ರಿಕೆಯನ್ನು ಅವಲೋಕಿಸಿದರೆ, ಅನೇಕ ದೋಷಗಳು ಕಣ್ಣಿಗೆ ರಾಚುತ್ತವೆ. ಮೊದಲನೆಯ ಪ್ರಶ್ನೆಯೇ ಪ್ರತಿಭಾವಂತ ವಿದ್ಯಾರ್ಥಿಗಳೂ ಗೊಂದಲಗೊಳ್ಳುವಂತಿದೆ. ಕೃದಂತಾವ್ಯಯವನ್ನು ಗುರುತಿಸಲು ಪ್ರಶ್ನೆ ಕೇಳಲಾಗಿದೆ. 'ಊಟ ಮಾಡುತ್ತಾ ನೀರು ಕುಡಿಯಬೇಡ' ಎಂಬ ವಾಕ್ಯವನ್ನು ನೀಡಿ ನಾಲ್ಕು ಉತ್ತರಗಳನ್ನು ನೀಡಿದೆ. ಕನಿಷ್ಠ ಪಕ್ಷ 'ಮಾಡುತ್ತಾ' ಪದಕ್ಕೆ ಅಡಿಗೆರೆ ಎಳೆದಿದ್ದರೆ ಸಾಮಾನ್ಯ ವಿದ್ಯಾರ್ಥಿಗಳಿಗೆ ಗೊಂದಲವಾಗುತ್ತಿರಲಿಲ್ಲ. ಏಳನೇ ಪ್ರಶ್ನೆಯಲ್ಲಿ ಒಟ್ಟು ವ್ಯಂಜನಾಕ್ಷರಗಳ ಸಂಖ್ಯೆ ಎಷ್ಟೆಂದು ಪ್ರಶ್ನಿಸಲಾಗಿದೆ. 35, 5, 25, 13 ಎಂದು ಆಯ್ಕೆ ಉತ್ತರಗಳಿವೆ. ಅಸಲಿಗೆ ಸರಿಯಾದ ಉತ್ತರ 34 ಎಂಬುದಾಗಿದೆ. 14ನೇ ಪ್ರಶ್ನೆಯಾಗಿ 'ಜಗಜ್ಜ್ಯೋತಿ' ಪದದ ಸಂಧಿಯ ಹೆಸರನ್ನು ಪ್ರಶ್ನಿಸಲಾಗಿದೆ.  ಪ್ರಶ್ನೆ ಕೇಳಿದ ಗುರುಮಹಾಶಯರಿಗೆ 'ಜಗಜ್ಜ್ಯೋತಿ' ಪದವನ್ನು ಬರೆಯಲು ಬರುತ್ತಿಲ್ಲ. 'ಜಗಜ್ಯೋತಿ' ಎಂದು ಬರೆಯುತ್ತಾರೆ. ಹೀಗೆ ಬರೆದರೆ ಅದನ್ನು ಶ್ಚುತ್ತ್ವ ಸಂಧಿ ಎನ್ನಲು ಸಾಧ್ಯವಾಗದು. 'ಮಣೆಹಾಕು' ಎಂಬ ನುಡಿಗಟ್ಟನ್ನು ಪ್ರಶ್ನಿಸುತ್ತಾ ಉತ್ತರವಾಗಿ 'ಕ್ರಿಯಾಪದ'ವನ್ನೂ ನೀಡಲಾಗಿದೆ. ಮಣೆ ಹಾಕು ಎಂಬುದಕ್ಕೆ ಕ್ರಿಯಾಪದವಲ್ಲ ಎನ್ನಲು ಸಾಧ್ಯವಿಲ್ಲ. ಹೊಂದಿಸಿ ಬರೆಯಲು ಪ್ರಶ್ನಿಸಿದ ಪಟ್ಟಿಗಳಲ್ಲಿ ಅನುಕರಣ ಅವ್ಯಯವನ್ನು ಗುರುತಿಸಲು ಪ್ರಶ್ನಿಸಿದೆ. ದುಃಖವೆಂದರೆ 'ಬ' ಪಟ್ಟಿಯಲ್ಲಿರುವ ಯಾವ ಪದಗಳೂ ಅನುಕರಣ ಪದಗಳಲ್ಲ. ಸಂಸ್ಕೃತ ಎಂಬ ಪದಕ್ಕೆ ಗೋಷ್ಠಿ ಪದವನ್ನು ಹೊಂದಿಸಿದರೆ ತಪ್ಪಾಗಲಾರದು. ಇಂತಹ ಸಂತೆಯ ಸಮಯಕ್ಕೆ ಮೊಳ ಹಾಕುವ ಕಳಪೆ ಮಟ್ಟದ ಪ್ರಶ್ನೆ ಪತ್ರಿಕೆ ತಯಾರಿಸುವ ಗುರುಮಹಾಶಯರಿಗೆ ಏನೆನ್ನಬೇಕು?
- ಕೊಕ್ಕಡ ವೆಂಕಟ್ರಮಣಭಟ್, ಮಂಡ್ಯ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement