ಮದ್ಯದಂಗಡಿಯ ಅವಧಿ
ತಡರಾತ್ರಿಯವರೆಗೂ ದುಡಿಯುವ ಟೆಕ್ಕಿಗಳ ವಿಶೇಷ ಅಗತ್ಯವನ್ನು ಗಮನಿಸಿ, ರಾಜ್ಯ ಸರ್ಕಾರ ರಾತ್ರಿ ಒಂದು ಗಂಟೆಯವರೆಗೂ ಮದ್ಯ ಮಾರಾಟ ನಡೆಯಬಹುದೆನ್ನುವ ಆದೇಶವನ್ನು ಪ್ರಕಟಿಸಿದ್ದು ನಿರೀಕ್ಷಿತ. ಪ್ರಾಯಶಃ ಅನೇಕರು ಅಂತಹ ಕ್ರಮವನ್ನು ಸ್ವಾಗತಿಸಲೂಬಹುದು. ಈ ಆದೇಶ ಶುಕ್ರವಾರ-ಶನಿವಾರಕ್ಕಷ್ಟೇ ಅನ್ವಯ.
ಅದೇ ಆದೇಶದಲ್ಲೇ, ಮದ್ಯದ ವ್ಯಾಪಾರ ಬೆಳಿಗ್ಗೆ 9 ಅಥವಾ 10 ಗಂಟೆಯಿಂದಲೇ ಆರಂಭವಾಗಬಹುದೆನ್ನುವ ಪರವಾನಗಿಯೂ ಪ್ರಕಟವಾಗಿದೆ. ಆದೇಶದ ಉದ್ದೇಶವೂ ಸ್ಪಷ್ಟ; ಕಷ್ಟಪಟ್ಟು ಕೆಲಸ ಮಾಡುವ ಜನವರ್ಗಗಳಿಗೆ, ಅವರವರ ಇಷ್ಟದಂತೆ ಆರಾಮವಾಗಿರಲು ಅವಕಾಶವಿರಬೇಕು. ತಡರಾತ್ರಿ ಮದ್ಯದಂಗಡಿಗಳ ವ್ಯವಹಾರ ಅನೇಕ ಸಂದರ್ಭಗಳಲ್ಲಿ ಕಾಯಿದೆ ಪಾಲನೆ ವ್ಯವಸ್ಥೆಗೇ ಸಮಸ್ಯೆಗಳನ್ನು ತಂದೊಡ್ಡಿದೆ. ತಡರಾತ್ರಿಯ ಮದ್ಯದ ಲಭ್ಯತೆಯನ್ನು ಕೆಲವೇ ವರ್ಗಗಳಿಗೆ ಸೀಮಿತಗೊಳಿಸುವುದು ಸಾಧ್ಯವಿಲ್ಲವಲ್ಲ. ಅಂಗಡಿ ತೆರೆದಮೇಲೆ ಅಲ್ಲಿನ ಸೌಲಭ್ಯವನ್ನು ಯಾರು ಬೇಕಾದರೂ ಕಾಸು ಕೊಟ್ಟು ಪಡೆದುಕೊಳ್ಳಬಹುದು. ಇಲ್ಲಿ ಸಂವಿಧಾನದಲ್ಲಿ ಮದ್ಯಪಾನ ನಿಷೇಧಕ್ಕೆ ಸರ್ಕಾರ ಸಜ್ಜಾಗಬೇಕು ಎಂದು ಹೇಳಿರುವ ವಾಕ್ಯ ಹಾಗೂ ಮಿತಪಾನ ಅಥವಾ ಸಂಯಮದ ಪ್ರವೃತ್ತಿಯ ಪ್ರಚಾರಕ್ಕೆಂದು ಸರ್ಕಾರ ನಗರದ ಅನೇಕ ಕಡೆಗಳಲ್ಲಿ ಕಣ್ಣು ಕುಕ್ಕುವಂತೆ ಜನ ಕುಡಿಯಬಾರದೆನ್ನುವ ಮನವಿಯನ್ನು ಪ್ರಕಟಿಸಿರುವುದು ಪ್ರಸ್ತುತವಾಗುತ್ತದೆ. ಅಬ್ಕಾರಿ ಆದಾಯದ ಹೆಚ್ಚಳದ ಆಮಿಷಕ್ಕೆ ಒಳಗಾಗಿ, ಸರ್ಕಾರ, ಅದರಲ್ಲೂ ಕಾಂಗ್ರೆಸ್ ಸರ್ಕಾರ, ಮದ್ಯದಂಗಡಿಗಳ ವ್ಯಾಪಾರದ ಅವಧಿಯ ವಿಚಾರದಲ್ಲಿ ವಾಸ್ತವತೆಗೆ ಹೊಂದಿಕೊಳ್ಳುವಂತೆ, ಸಿದ್ಧಾಂತಕ್ಕೂ ಬೆಲೆ ಕೊಟ್ಟು ಆದೇಶಗಳನ್ನು ಹೊರಡಿಸುವುದು ಸೂಕ್ತ. ಮದ್ಯವ್ಯಸನಿಗಳ ಅಭಿಪ್ರಾಯದ ಜತೆಯಲ್ಲೇ ಇತರ ಜನವರ್ಗಗಳ ಅಭಿಪ್ರಾಯವನ್ನೂ ಪರಿಗಣಿಸಲೇಬೇಕು.