ಸಲ್ಲದ ಸಿಬಿಐ ಸುದ್ದಿ ಸೋರಿಕೆ
ಕಳೆದ ಕೆಲವು ದಿನಗಳಿಂದಲೂ ವಿತ್ತಮಂತ್ರಾಲಯ, ಹಾಗೂ ಸೆಕ್ಯೂರಿಟೀಸ್ ಅಂಡ್ ಎಕ್ಸ್‌ಛೇಂಜ್‌ಸ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ವಲಯಗಳಲ್ಲಿ ನಡೆದಿರುವ ಒಂದು ಗಂಭೀರ ಸ್ವರೂಪದ ವಾದ - ವಿವಾದ, ಈಗ ದೊಡ್ಡ ರೀತಿಯಲ್ಲೇ ಸ್ಫೋಟವಾಗುವ ಲಕ್ಷಣಗಳು ಕಂಡುಬರುತ್ತಿವೆ.
ಸೆಬಿಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಐ.ಎ.ಎಸ್. ಅಧಿಕಾರಿ ಸಿ.ಬಿ. ಭಾವೆ ಅವರು 2008-11ರ ಅವಧಿಯಲ್ಲಿ ಎಂ.ಸಿ.ಎಸ್. ಸ್ಟಾಕ್ ಎಕ್ಸ್‌ಛೇಂಜ್ ತೊಂದರೆಯಲ್ಲಿದ್ದ ಇತರ ಸ್ಟಾಕ್ ಎಕ್ಸ್‌ಛೇಂಜ್‌ಗಳಲ್ಲಿ ಷೇರುಗಳನ್ನು ಕೊಳ್ಳಲು ಅನುಮತಿ ನೀಡಿದ್ದೇ ವಾದ - ವಿವಾದದ ಕೇಂದ್ರ. ಆ ವಿಚಾರದಲ್ಲಿ ಕೇಂದ್ರ ತನಿಖಾದಳ - ಸಿಬಿಐ ತನಿಖೆ ನಡೆಸುತ್ತಿದೆ.
ಈ ಪ್ರಕರಣದಲ್ಲಿ ಫೈನಾನ್ಷಿಯಲ್ ಟೆಕ್ನಾಲಜೀಸ್ ಸಂಸ್ಥೆಯ ಪ್ರಾಯೋಜಕ ಶಹ ಅವರ ವಿಚಾರದಲ್ಲಿ ಸೆಬಿ ಪಕ್ಷಪಾತವನ್ನು ಪ್ರದರ್ಶಿಸಿದೆ ಎನ್ನುವುದೇ ತನಿಖೆಗೆ ವಸ್ತು.
ಆದರೆ ಈ ವಿಚಾರದ ತನಿಖೆಯ ಸಂಬಂಧದಲ್ಲಿ ಅನಧಿಕೃತವಾಗಿ ಕೆಲವು ಪತ್ರಿಕೆಗಳಿಗೆ ತನಿಖೆಯ ಕೆಲವು ವಿವರಗಳು ಲಭ್ಯವಾಗಿದ್ದು, ಅದಕ್ಕೆ ಸಿಕ್ಕಿರುವ ಪ್ರಚಾರದಿಂದ ಸಹಜವಾಗಿಯೇ ಸಿ.ಬಿ. ಭಾವೆ ಅವರ ತೇಜೋವಧೆ ಆಗಿದೆ.
ಅಧಿಕೃತವಾಗಿ ಈಗ ಸಿಬಿಐ ಅಧಿಕಾರಿಗಳು ತನಿಖೆಯ ಸ್ವರೂಪ ನಿಜವಾಗಲೂ ಪೂರ್ವಭಾವಿ ತನಿಖೆಯ ರೀತಿಯಿದ್ದು. ಸಿಬಿಐಗೆ ಬಂದಿರುವ ದೂರುಗಳಲ್ಲಿ ಏನಾದರೂ ಹುರುಳಿದೆಯೇ ಅಥವಾ ಸೆಬಿಯ ನಿರ್ಧಾರಗಳ ಹಿಂದೆ ದುರುದ್ದೇಶದ ಸುಳಿವು ಇದೆಯೇ ಎನ್ನುವುದನ್ನು ತಿಳಿಯುವ ಪ್ರಯತ್ನ ಇದು. ಇಲ್ಲಿ ಯಾರ ಮೇಲೂ ದಾಳಿಯಾಗಿಲ್ಲ. ಯಾರನ್ನೂ ಬಂಧಿಸಿಲ್ಲ ಎನ್ನುವ ವಿವರಣೆ ನೀಡಿದ್ದಾರೆ.
ಆದರೆ ಮಾಧ್ಯಮ ಪ್ರಪಂಚದ ಕೆಲವು ವಲಯಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಗಮನಿಸಿದರೆ ಭಾವೆ ಅವರ ವಿರೋಧಿಗಳ ಪ್ರೇರಣೆ ಎದ್ದು ಕಾಣುತ್ತಿರುವುದೂ ನಿಜ. ಕೆಲವು ಪತ್ರಿಕೆಗಳು ಅನಧಿಕೃತವಾಗಿ ಸಿಬಿಐ ಮೂಲಗಳಿಂದ "ಮಾಹಿತಿಯನ್ನು" (ಅದು ಸರಿ - ತಪ್ಪು ಎನ್ನುವುದು ಬೇರೆ ಮಾತು) ಆಧಾರವಾಗಿಟ್ಟುಕೊಂಡು, ಸೆಬಿಯ ಸೇವೆಯಿಂದ ಈಗಷ್ಟೇ ನಿವೃತ್ತರಾದ ಅಧಿಕಾರಿಗಳ (ಅನಾಮಧೇಯ) ಸಂದರ್ಶನದ ರೂಪದಲ್ಲಿ ಪ್ರಕಟಿಸಿರುವ ವರದಿಗಳೇ ವಾಸ್ತವದಲ್ಲಿ ವಿವಾದವನ್ನು ಸೃಷ್ಟಿಸಿರುವುದು.
ಈ ವಿಚಾರದಲ್ಲಿ ಇತ್ತೀಚೆಗೆ ವಿತ್ತ ಮಂತ್ರಿ ಚಿದಂಬರಮ್ ಹಾಗೂ ಮಾಜಿ ವಿತ್ತಮಂತ್ರಿ ಜಸವಂತ ಸಿಂಗ್ ಅವರು ಪ್ರತ್ಯೇಕ ಹೇಳಿಕೆಗಳಲ್ಲಿ ಭಾವೆ ಅವರಂತಹ ಸಜ್ಜನ ಅಧಿಕಾರಿಗಳ ವಿರುದ್ಧ ತನಿಖೆ ಪೂರ್ಣವಾಗುವುದಕ್ಕೆ ಮುಂಚೆಯೇ ವರದಿಗಳನ್ನು ಪ್ರಕಟಿಸುವುದು ವಿಷಾದನೀಯ ಎಂದಿದ್ದಾರೆ. ವಿತ್ತ ಮಂತ್ರಾಲಯದಲ್ಲಿ ಭಾವೆ ಆಯಕಟ್ಟಿನ ಜವಾಬ್ದಾರಿ ಸ್ಥಾನದಲ್ಲಿ ಕೆಲಸ ಮಾಡಿದಾಗ ಅವರಿಗೆ ಜಸವಂತ ಸಿಂಗ್ - ಚಿದಂಬರಮ್ ಅವರ ಸಂಪರ್ಕವೂ ಇತ್ತು. ಭಾವೆ ಅವರ ವಿಚಾರದಲ್ಲಿ ಮಾಜಿ ಆಡಿಟರ್ ಜನರಲ್ ವಿನೋದ ರಾಯ್ ಅವರೂ ಒಳ್ಳೆಯ ಮಾತನ್ನೇ ಆಡಿದ್ದಾರೆ.
ಒಂದು ಟಿ.ವಿ. ಸಂದರ್ಶನ ಹಾಗೂ ವಿಚಾರ ಸಂಕಿರಣದಲ್ಲಿ ನಾಡಿನ ಹಿರಿಯ ಆರ್ಥಿಕ ವಿಚಾರಗಳ ವಿಶ್ಲೇಷಕರು ಸಿಬಿಐನ ಮುಖ್ಯಸ್ಥರು, ಆರ್ಥಿಕ ನೀತಿ ಕುರಿತ ಆದೇಶಗಳನ್ನು ಪ್ರಕಟಿಸುವ ನಿರ್ಧಾರಕ್ಕೂ, ದುರುದ್ದೇಶದಿಂದ ಹೊರಡಿಸಿದ ಆದೇಶಗಳಿಗೂ ಇರುವ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಾಗಿತ್ತು ಎಂದಿದ್ದಾರೆ.
ಸಿಬಿಐ ವಿರುದ್ಧದ ಪ್ರಕಟಿತ ಟೀಕೆಯಲ್ಲಿ ತನಿಖೆಯ ವಿಚಾರದಲ್ಲಿ ಯಾರ ತಕರಾರೂ ಇಲ್ಲ. ಆದರೆ ತನಿಖೆ ಮುಗಿಯುವ ಮುನ್ನವೇ, ಅರೆ ಬೆಂದ ವಿಚಾರಗಳನ್ನು ನಿರ್ದಿಷ್ಟ ಪತ್ರಿಕೆಗಳನ್ನು ಆರಿಸಿಕೊಂಡು ಅವಕ್ಕೆ "ಸೋರಿಕೆ ಮಾಡುವ ತಂತ್ರ ತೀರ ಕೆಟ್ಟದ್ದು. ಅದರಿಂದ ಹಲವರ ದಶಕಗಳ ಸಾಧನೆಯೇ ಮಣ್ಣು ಗೂಡುವುದರ ವಿಚಾರದಲ್ಲಿ ಪ್ರಜ್ಞಾವಂತರ ಕಾಳಜಿ ಇದೆ.
ಇದೇ ರೀತಿಯ ಅಭಿಪ್ರಾಯ ಕಲ್ಲಿದ್ದಲ ಗಣಿಗಳ ಹಂಚಿಕೆಯ ಸಂಬಂಧದಲ್ಲಿ ಪ್ರಧಾನಿ ಕಾರ್ಯಾಲಯದ ಹಿರಿಯ ಅಧಿಕಾರಿಯ ಸಂಭವನೀಯ ವಿಚಾರಣೆಯ ಸುದ್ದಿಯ ವಿಚಾರದಲ್ಲೂ ಪ್ರಕಟವಾಗಿದೆ. ಇಂತಹ ಕಾರ್ಯಾಚರಣೆಗೆ ಅವಕಾಶವಿರಬಾರದು.