ತಪ್ಪಾಯ್ತು ತಿದ್ಕೋತೀವಿ
ಗೌರಿಬಿದನೂರಿನಿಂದ ಕೆ.ಎ. ರವೀಂದ್ರನಾಥ್ ಅವರು ಬರೆಯುತ್ತಾರೆ- 'ಮಾ.7ರಂದು ಪ್ರಕಟವಾದ (ಪುಟ8) ಕೋಲಾರ ವಿಭಾಗದ ಒಂದು ವರದಿಯಲ್ಲಿ 'ಅಂಡರ್ಪಾಸ್ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ' ಛಾಯಾ ಚಿತ್ರದ ಕೆಳಗೆ 'ಕೋಲಾರದ ಚೊಕ್ಕ ಕನ್ವೆಂಷನ್ ಹಾಲ್ ಬಳಿ ಅಂಡರ್ ಪಾಸ್ ನಿರ್ಮಿಸಲು ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ಹಾಗೂ ಕಾಲೇಜು ವಿದ್ಯಾರ್ಥಿಗಳು ರಸ್ತೆ ಮಾಡಿದರು ಎಂದಿದೆ. ಇದು ತಪ್ಪಲ್ಲವೇ?'
'1. ಕನ್ವೆಂಷನ್ ಬದಲು-'ಕನ್ವೆನ್ಷನ್' ಎಂದಿರಬೇಕಾಗಿತ್ತು.'
'2. ರಸ್ತೆ ಮಾಡಿದರು ಬದಲು-ರಸ್ತೆ ತಡೆ ಮಾಡಿದರು ಎಂದಿರಬೇಕಾಗಿತ್ತು.'
'3. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಿ.ಕೆ. ರವಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಅರಘಾತಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂದಕ್ಕೆ ಪಡೆದರು ಎಂದಿದೆ. ಅರಘಾತದ ಬದಲು ಅಪಘಾತ ಎಂದಿರಬೇಕಾಗಿತ್ತಲ್ಲವೇ?' ಎಂದಿದ್ದಾರೆ.
ಮೈಸೂರಿನಿಂದ ಸಿ. ದಿನಮಣಿರಾವ್ ಅವರು ಬರೆಯುತ್ತಾರೆ- 'ನಡುಹಗಲಿನಲ್ಲಿಯೂ ನಕ್ಷತ್ರಗಳನ್ನು ನೋಡಬಹುದು. (ಅದೂ ಅರುಂಧತಿಯಂತಹ ಸಣ್ಣ ನಕ್ಷತ್ರವನ್ನು) ಇಂತಹ ಸಂಶೋಧನೆಯನ್ನು ನಿಮ್ಮ ಪತ್ರಿಕೆಯಲ್ಲಿ 'ಓಲಗ' ಅಂಕಣದಲ್ಲಿ ಪ್ರಕಟಿಸುತ್ತೀದ್ದಿರಿ. ಈ ಬಗ್ಗೆ ನಾನು ಈ ಹಿಂದೆಯೇ (ಸುಮಾರು ನಾಲ್ಕೈದು ತಿಂಗಳ ಹಿಂದೆಯೇ) ನನ್ನ 2 ಪತ್ರಗಳಲ್ಲಿ ವಿವರವಾಗಿ ವಿಶ್ಲೇಷಿಸಿದ್ದೆ. ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈಗ ನಾನು ಮತ್ತೆ ಈ ವಿಷಯ ಎತ್ತಲು ಕಾರಣ ಫೆ.19ರಂದು 14ರ ಓಲಗ ಅಂಕಣದಲ್ಲಿ ಬಂದ ಚಿತ್ರ. ಇದರಲ್ಲಿ ಮದುವೆಗೆ ಸಂಬಂಧಿಸಿದಂತೆ ಚಿತ್ರವಿದ್ದು ವರನೊಬ್ಬ ಮಧುವಿಗೆ ಅರುಂಧತಿ ನಕ್ಷತ್ರವನ್ನು ತೋರಿಸುತ್ತಿದ್ದಾರೆಂಬ ವಿವರ ಇದೆ. ಸಣ್ಣ ಪುಟ್ಟ ಮುದ್ರಣ ದೋಷ, ಅಕ್ಷರ ಪಲ್ಲಟಗಳ ಬಗ್ಗೆ ಪ್ರತಿಕ್ರಿಯಿಸುವ ನೀವು 'ಹಗಲಿನಲ್ಲಿ ನಕ್ಷತ್ರ ಕಾಣುವುದು ಅಸಾಧ್ಯ' ಎಂಬ ಅರಿವಿದ್ದರೂ ಅರುಂಧತಿ ನಕ್ಷತ್ರ ತೋರಿಸುತ್ತಿದ್ದಾರೆಂಬ ವಿವರಣೆ ನೀಡಿ ಚಿತ್ರಸಹಿತ ವರದಿ ಪ್ರಕಟಿಸುವುದು ಅಸಂಬದ್ಧವಲ್ಲವೇ?' ಎಂದಿದ್ದಾರೆ.
ಮದುವೆಯಾದ ಹೊಸತರಲ್ಲಿ ಎಲ್ಲಿ ನೋಡಿದರೂ ನಕ್ಷತ್ರಗಳೇ ಕಾಣುತ್ತವೆ ಎಂಬ ರಮ್ಯ ಕಲ್ಪನೆಯವರು ಮಾಡಿದ ಕಿತಾಪತಿಯಿರಬೇಕು. ಈ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆಯಲಾಗುವುದು.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಆರ್.ಕೆ. ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರಾಗಿರುವ ಸಂದೇಶ್ ಎಚ್. ನಾಯ್ಕ್ ಅವರು ಬರೆಯುತ್ತಾರೆ- 'ಮಾರ್ಚ್ 17ರ ಬೆಂಗಳೂರು ಆವೃತ್ತಿಯ ಮಂಡ್ಯದ ಸ್ಥಳೀಯ ಸುದ್ದಿಗಳು ಪುಟ 2ರಲ್ಲಿ ಪ್ರಕಟವಾಗಿದ್ದು, ಆ ಪುಟದ ಕೆಳಭಾಗದಲ್ಲಿ ಹೆಚ್ಚಿನ ಸುದ್ದಿಗಳು 8ನೇ ಪುಟದಲ್ಲಿ ಎಂದು ನಮೂದಿಸಲಾಗಿದೆ. ಅದರಂತೆ 8ನೇ ಪುಟ ತೆರೆದು ನೋಡಿದರೆ ಅಲ್ಲಿ ಮಂಡ್ಯದ ಸ್ಥಳೀಯ ಸುದ್ದಿಗಳಿಗೆ ಬದಲಾಗಿ ತುಮಕೂರು ಜಿಲ್ಲೆಯ ಬಿಡಿ ಸುದ್ದಿಗಳು ಜಾಗಪಡೆದುಕೊಂಡಿವೆಯಲ್ಲ? ಹೀಗೆ ಕಣ್ತಪ್ಪಿನಿಂದ ಸುದ್ದಿಗಳು ಪರಸ್ಪರ ಅದಲುಬದಲಾಗಿ ತುಮಕೂರು ಜಿಲ್ಲಾ ಪುಟದಲ್ಲಿ ಮಂಡ್ಯದ ಸುದ್ದಿ ಪ್ರಕಟವಾಗಿರಬೇಕು' ಎಂದಿದ್ದಾರೆ. ತಾಂತ್ರಿಕ ಕಾರಣಗಳಿಗಾಗಿ ಅಂದು ಮಂಡ್ಯ ಮತ್ತು ತುಮಕೂರಿಗೆ ಪ್ರತ್ಯೇಕ ಪುಟಗಳ ಬದಲಿಗೆ ಮಂಡ್ಯ ಮತ್ತು ತುಮಕೂರು ಸುದ್ದಿಗಳನ್ನು ಸೇರಿಸಿ ಒಂದೇ ಪುಟದಲ್ಲಿ ಪ್ರಕಟಿಸಲಾಗಿತ್ತು. ಆದ್ದರಿಂದ ತುಮಕೂರು ಸುದ್ದಿಗಳು ಆ ಪುಟದಲ್ಲಿ ದೊರೆತಿವೆ.
ವಿಶ್ವೇಶ್ವರ ಭಟ್