ಕನ್ನಡ ಸಿನಿಮಾಗಳಿಗೆ ಕನ್ನಡದ್ದೇ ಹೆಸರು
ಕನ್ನಡ ಸಿನಿಮಾಗಳಿಗೆ ಅನ್ಯ ಭಾಷೆಗಳ ಶೀರ್ಷಿಕೆ ನೀಡುವ ಪರಿಪಾಠ ಸದ್ಯದಲ್ಲೇ ನಿಲ್ಲುವ ಸೂಚನೆ ಕಂಡುಬಂದಿದೆ. ಇತ್ತೀಚೆಗೆ...
ಕನ್ನಡ ಸಿನಿಮಾಗಳಿಗೆ ಅನ್ಯ ಭಾಷೆಗಳ ಶೀರ್ಷಿಕೆ ನೀಡುವ ಪರಿಪಾಠ ಸದ್ಯದಲ್ಲೇ ನಿಲ್ಲುವ ಸೂಚನೆ ಕಂಡುಬಂದಿದೆ. ಇತ್ತೀಚೆಗೆ ಗಾಂಧಿನಗರದ ಕೆಲವು ನಿರ್ಮಾಪಕರು, ನಿರ್ದೇಶಕರು ಮತ್ತು ವಿತರಕರು ಅನೌಪಚಾರಿಕ ಸಭೆ ನಡೆಸಿ ಕನ್ನಡ ಸಿನಿಮಾಗಳಿಗೆ ಕನ್ನಡ ಶೀರ್ಷಿಕೆ ನೀಡುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ದಾಖಲೆಗಳ ಪ್ರಕಾರ ಹಿಂದಿ ಮತ್ತು ಇಂಗ್ಲಿಷ್ ಹೆಸರಿನ ಶೇ. 99ರಷ್ಟು ಕನ್ನಡ ಚಿತ್ರಗಳು ನೆಲಕಚ್ಚಿವೆ. ಯಜಮಾನ, ಆಪ್ತಮಿತ್ರ, ಮುಂಗಾರು ಮಳೆ, ಮಿಲನ ಮುಂತಾದ ಕನ್ನಡ ಶೀರ್ಷಿಕೆ ಹೊಂದಿದ್ದ ಚಿತ್ರಗಳು ಸೂಪರ್ ಹಿಟ್ ಆಗಿರುವುದರಿಂದ ಕನ್ನಡ ಚಿತ್ರಗಳಿಗೆ ಬೇರೆ ಭಾಷೆಯ ಶೀರ್ಷಿಕೆ ಆಗಿ ಬರುವುದಿಲ್ಲ. ಅದೊಂದು ಅಪಶಕುನ ಮತ್ತು ದೋಷ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಶಿವಣ್ಣ ಅಭಿನಯದ 'ಅಂದರ್ ಬಾಹರ್' ಸಿನಿಮಾ ವಿಫಲವಾದ ನಂತರ ಕನ್ನಡ ಚಿತ್ರಗಳಿಗೆ ಇತರ ಭಾಷೆಗಳ ಹೆಸರು ಆಗಿ ಬರುವುದಿಲ್ಲ ಎಂಬುದು ಹಲವು ನಿರ್ದೇಶಕರ ಖಚಿತ ಅನಿಸಿಕೆಯಾಗಿದೆ. ಅದೇನೇ ಇರಲಿ, ಮುಂದಿನ ದಿನಗಳಲ್ಲಿ ಕನ್ನಡ ಸಿನಿಮಾಗಳು ಕನ್ನಡದ ಹೆಸರಿನಲ್ಲೇ ರಾರಾಜಿಸಲಿವೆ ಎಂಬುದು ಸಂತಸದ ಸಂಗತಿ.
-ಆರ್. ಗೋವಿಂದರಾಜ್, ಸಹ ನಿರ್ದೇಶಕ, ಬೆಂಗಳೂರು
ಹರಿಬಿಡದಿರಿ ನಾಲಿಗೆಯ...
ಇತ್ತೀಚೆಗೆ ಲೋಕಸಭಾ ಚುನಾವಣೆ ಪ್ರಕಟವಾದ ಮೇಲೆ ಹತ್ತಾರು ವರ್ಷಗಳ ಕಾಲ ಪಕ್ಷಗಳಲ್ಲಿ ದುಡಿದವರು ಕೇವಲ ಟಿಕೆಟ್‌ಗಾಗಿ ಎಲ್ಲವನ್ನೂ ತೊರೆದು ಪಕ್ಷಾಂತರ ಮಾಡುತ್ತಿರುವುದು ನಾಚಿಕೆಗೇಡಿನ ಕೆಲಸ. ಮೊನ್ನೆ ಇವರಿಗಾಗಿಯೇ ವಾಟಾಳ್ ನಾಗರಾಜ್‌ರವರು ನಾಯಿಗಳ ಮೆರವಣಿಗೆ ಮಾಡಿ ಬಿಸಿ ಮುಟ್ಟಿಸಿದರು. ಆದರೂ ಸ್ವಾಭಿಮಾನವಿಲ್ಲದ ರಾಜಕೀಯ ನಾಯಕರು ಪಕ್ಷಾಂತರ ಮಾಡುತ್ತಲೇ ಇದ್ದಾರೆ. ಅವರು ಇವರನ್ನು ಇವರು ಅವರನ್ನು ತೆಗಳುವುದರಲ್ಲಿ ಮುಂದಾಗಿದ್ದಾರೆ. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಭ್ಯತೆಯ ಮೇರೆಯನ್ನು ಮೀರಿ ಮೋದಿಯ ಬಗ್ಗೆ ಹಾಸ್ಯಾಸ್ಪದ ರೀತಿಯಲ್ಲಿ ನಾಲಿಗೆ ಹರಿಬಿಡುತ್ತಿದ್ದಾರೆ. ಕೊಲೆಗಡುಕ, ನರಹಂತಕ, ನರಭಕ್ಷಕ ಇನ್ನೂ ಮುಂತಾದ ಪದಗಳನ್ನು ಬಳಸುತ್ತಾ ಎಂತಹ ಕೀಳು ಮಟ್ಟದ ಮಾತಿಗೂ ರೆಡಿ ಎನ್ನುತ್ತಿದ್ದಾರೆ. 2002ರ ಗೋಧ್ರಾ ಪ್ರಕರಣದ ನರಭಕ್ಷಕ ಎನ್ನುತ್ತಾರೆ. ಹಾಗಾದರೆ 1984ರಲ್ಲಿ ಇಂದಿರಾ ಹತ್ಯೆಯ ನಂತರ ಸುಮಾರು 2500 ಸಿಖ್ಖರನ್ನು ಕಾಂಗ್ರೆಸ್‌ನವರು ಕೊಂದು ಹಾಕಿದರಲ್ಲ ಅವರೆಲ್ಲ ಎಂತಹವರು ತಿಳಿಸಿ ಸಿದ್ದರಾಮಯ್ಯನವರೇ? ಸುಪ್ರಿಂಕೋರ್ಟ್ ಕೂಡ ಇದರಲ್ಲಿ ಮೋದಿ ಪಾತ್ರ ಇಲ್ಲ ಎಂದು ಹೇಳಿದೆ. ನೀವು ಸುಪ್ರೀಂ ಕೋರ್ಟ್‌ಗಿಂತ ದೊಡ್ಡವರೇ? ಅಥವ ಬಿಜೆಪಿ ಎಲ್ಲಿ ಅಧಿಕಾರಕ್ಕೆ ಬರುತ್ತೋ ಎಂಬ ಆತಂಕದಿಂದ ಹೀಗೆ ಹೇಳುತ್ತಿದ್ದೀರಾ? ಅದೇನೇ ಇರಲಿ, ಸಜ್ಜನಿಕೆಗೆ ಹೆಸರಾದ ನೀವು ನೆಹರು ಕುಟುಂಬವನ್ನು ಓಲೈಸಲು ನಿಮ್ಮ ನಾಲಿಗೆ ಕೆಸರು ಮಾಡಿಕೊಳ್ಳಬೇಡಿ. ಅಧಿಕಾರ ಇರುತ್ತೆ, ಹೋಗುತ್ತೆ. ಆದರೆ ಸಜ್ಜನಿಕೆ ಶಾಶ್ವತವಾಗಿರುತ್ತದೆ. ನೆನಪಿರಲಿ.
-ಕೋರಾ ವಿಜಯಕುಮಾರ್, ತುಮಕೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com