ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ದೇವೇಗೌಡರ ಆಸ್ತಿ ಪ್ರಸ್ತಾಪ

Mainashree
Updated On : 30 Mar 2014, 9:21 am

ದೇಶದ ಎಲ್ಲ ಕಡೆಗಳಲ್ಲಿ ಬಿಸಿಲಿನ ತಾಪ ಹೆಚ್ಚಿದಂತೆ ಚುನಾವಣೆ ಪ್ರಚಾರ ಸಮರದಲ್ಲಿ ಪ್ರಕಟವಾಗುತ್ತಿರುವ ಅಭಿಪ್ರಾಯಗಳು ಎದುರಾಳಿಗಳ ವಿರುದ್ಧದ ತೀವ್ರವಾದ ಟೀಕೆಯ ಸ್ವರೂಪ ಪಡೆಯುತ್ತಿರುವುದೂ ನಿಜ. ಆದರೆ ಈ ಪ್ರಕ್ರಿಯೆಗೂ ಮರ್ಯಾದೆಯ ಅಥವಾ ಹೊಣೆಗಾರಿಕೆಯ ಇತಿ-ಮಿತಿ ಬೇಕು.
  ಬಿಜೆಪಿಯ ಪ್ರಧಾನಿ ಪೀಠದ ಅಭ್ಯರ್ಥಿ ನರೇಂದ್ರ ಮೋದಿಯವರನ್ನು "ಪೀಸ್ - ಪೀಸ್‌" ಮಾಡುವ ಹೇಳಿಕೆಯನ್ನು ನೀಡಿರುವ ಅಭ್ಯರ್ಥಿಯನ್ನು ಬಂಧಿಸಲಾಗಿದೆ. ಮುಂದೇನಾಗತ್ತೋ ನೋಡಬೇಕು. ಕಳೆದ ಚುನಾವಣೆಯಲ್ಲಿ ದ್ರೋಹಿಗಳ ಕೈ ಕತ್ತರಿಸುವ ಮಾತಾಡಿದ್ದ ವರುಣ್ ಗಾಂಧಿ, ಅದರ ಪರಿಣಾಮವನ್ನು ತಿಂಗಳುಗಟ್ಟಲೆ ನ್ಯಾಯಾಲಯಗಳಿಗೆ ಅಲೆದಾಡುವುದರಿಂದ ನಿಭಾಯಿಸಿಕೊಂಡರು. ಈ ಬಾರಿ ವರುಣ್ ಗಾಂಧಿ ಕ್ಷೇತ್ರ ಬದಲಾಯಿಸಿ, ಹೋಗಿರುವುದು ರಾಹುಲ ಗಾಂಧಿ ಕ್ಷೇತ್ರದ ಪಕ್ಕದ ಕ್ಷೇತ್ರವಾದ ಸುಲ್ತಾನಪುರಕ್ಕೇ. ಆದರೆ ಅವರ ಭಾಷಣಗಳಲ್ಲಿ ಅವೇಶವಿದ್ದರೂ ಈಗ ಬೈಗುಳ ಕಂಡುಬಂದಿಲ್ಲ.
  ಬೆಂಗಳೂರು ಸೇರಿದಂತೆ ದೇಶದ ಅನೇಕ ಕ್ಷೇತ್ರಗಳಲ್ಲಿ ಆಯಾ ಕ್ಷೇತ್ರಗಳ ಎಲ್ಲ ಸ್ಪರ್ಧಿಗಳನ್ನು ಒಂದೇ ವೇದಿಕೆಯಲ್ಲಿ ಕರೆದು ತಂದು, ಜನರ ಸಮ್ಮುಖದಲ್ಲಿ ಅವರಿಂದ ಪ್ರಶ್ನೆಗಳಿಗೆ ಉತ್ತರ ಪಡೆಯುವ "ನಾಗರಿಕ ಕಾರ್ಯಕ್ರಮದ" ಏರ್ಪಾಟಿನ ಆಂದೋಲನವೇ ನಡೆದಂತಿದೆ.
ಆದರೆ, ಇಂತಹ ಕೂಟಗಳಿಗೆ, ಅಭ್ಯರ್ಥಿಗಳೂ ಗುಂಪು ಗುಂಪಾಗಿ ಬಂದು, ತಮಗೆ ಅಸಹನೀಯವಾದ ಅಭಿಪ್ರಾಯ ಪ್ರಕಟವಾದಾಗ ದಾಂದಲೆಯನ್ನೆಬ್ಬಿಸಿ, "ನಾಗರಿಕ" ಕಾರ್ಯಕ್ರಮದಲ್ಲಿ ಅನಾಗರಿಕರಂತೆ ವರ್ತಿಸಿದ ಉದಾಹರಣೆ ಇದೆ. ಶನಿವಾರ ಬೆಂಗಳೂರಿನಲ್ಲೇ ಹಾಗಾಯಿತು.
ಪ್ರಧಾನಿ ಪೀಠದ ಘೋಷಿತ, ಅಘೋಷಿತ ಅಭ್ಯರ್ಥಿಗಳಾದ ನರೇಂದ್ರ ಮೋದಿ ಹಾಗೂ ರಾಹುಲ ಗಾಂಧಿ ತಮ್ಮ ಮಹಾರ್ಯಾಲಿಗಳಲ್ಲಿ ಉದ್ವೇಗದಿಂದಲೇ ಮಾತಾಡುತ್ತಿರುವುದು ನಿಜ. ಆದರೆ/ ಪರಸ್ಪರ ಹಿಯಾಳಿಕೆಯ ಮಾತುಗಳ ವಿನಿಮಯ ಕಡಿಮೆ. ಆದರೆ ಅದೇ ಮಾತನ್ನು ಅವರ ಪಕ್ಷಗಳ ಇತರ ನಾಯಕರ ವಿಚಾರದಲ್ಲಿ ಹೇಳುವಂತಿಲ್ಲ. ತಮಗೆ ವಿರೋಧವಾಗಿರುವ ಪಕ್ಷ ಹಾಗೂ ಪಕ್ಷಗಳ ನಾಯಕರನ್ನು ತೆಗಳಿದರೆ ತಮ್ಮ "ಪ್ರಚಾರದ ಶ್ರೇಣಿಯ ಮೌಲ್ಯ ಹೆಚ್ಚುತ್ತದೆ" ಎಂದು ಅನೇಕರು ಭಾವಿಸಿರುವಂತಿದೆ. ಹೀಗಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ವಿಚಾರ ಮಥನಕ್ಕೆ ಅವಕಾಶ ಸಿಕ್ಕಾಗ ಗಂಭೀರವಾದ ಸಮಸ್ಯೆಗಳನ್ನು ಕುರಿತ ಅಧ್ಯಯನ ಆಧರಿತ, ಪ್ರಾಂಜಲ ಮನಸ್ಸಿನ ಚರ್ಚೆಗಳೇ ನಡೆಯುತ್ತಿಲ್ಲ ಎನ್ನುವುದು ಒಂದು ದುರಂತವೇ. ಟಿ.ವಿ. ವಾಹಿನಿಗಳ ಚರ್ಚೆಯಲ್ಲಿ ವೀಕ್ಷಕರ ತಿಳಿವಳಿಕೆಯ ಮಟ್ಟವನ್ನು ಹೆಚ್ಚಿಸುವ ಪ್ರಯತ್ನ ನಡೆದಿಲ್ಲ. ಎಲ್ಲ ಮಾಧ್ಯಮಗಳಲ್ಲೂ ಪ್ರಧಾನವಾಗಿ ಕಂಡುಬರುತ್ತಿರುವುದು ರೋಚಕತೆಯತ್ತ ಒಲವೇ.
ಕರ್ನಾಟಕದಲ್ಲಿ ಪ್ರಸ್ತುತ ಅತಿ ಹಿರಿಯ ರಾಜಕಾರಣಿ, ಮಾಜಿ ಪ್ರಧಾನಿ ದೇವೇಗೌಡರ ಆಸ್ತಿ ಪಾಸ್ತಿಯ ವಿವರಗಳು ಎಲ್ಲ ಚುನಾವಣೆಗಳಲ್ಲೂ (1967 ರಿಂದೀಚೆಗೆ) ಪ್ರಸ್ತಾಪವಾಗಿದೆ. ಈಗಂತೂ ಕರ್ನಾಟಕ ಚುನಾವಣೆ ಪ್ರಚಾರ ಸಮರದಲ್ಲಿ ಆ ಪ್ರಸ್ತಾಪ "ಕಾರಣವೇ ಇಲ್ಲದೇ ಹೆಚ್ಚಾಗಿದೆ".
1967ರಲ್ಲಿ ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿ, ಹೊಳೆನರಸೀಪುರದ ಚುನಾವಣೆ ಪ್ರಚಾರ ಸಭೆಯಲ್ಲಿ ಅವರ ಆಸ್ತಿಪಾಸ್ತಿಯ  ಎಲ್ಲ ವಿವರಗಳನ್ನು ಒಳಗೊಂಡ ಹಸ್ತ ಪ್ರತಿಯನ್ನು ಪ್ರಕಟಿಸಿದ್ದರು. ಈಗಲೂ ಅನೇಕರ ಪಾಲಿಗೆ ಅದೇ ಗೌಡರನ್ನು ಹೊಗಳಲು ಅಥವಾ ತೆಗಳಲು ಬುನಾದಿ ಸ್ವರೂಪದ ದಾಖಲೆ.
ದೇವೇಗೌಡರು ಪ್ರಧಾನಿಯಾದ ಸಂದರ್ಭದಲ್ಲಿ, ಅಧಿಕಾರವನ್ನು ವಹಿಸಿಕೊಳ್ಳವುದಕ್ಕೆ ಮುಂಚೆ ಒಂದು ಟಿ.ವಿ. ಸಂದರ್ಶನದಲ್ಲಿ ಅವರ ಆಸ್ತಿ -ಪಾಸ್ತಿಯ ಪ್ರಸ್ತಾಪವಾಗಿತ್ತು. ಆಗ ಅವರು ಅಲ್ಲಿಂದ ಇಲ್ಲಿಯವರೆಗೆ ನಾನು ಸುಮ್ಮನೆ ಊಟ ಮಾಡಿಕೊಂಡಿಲ್ಲ ಎಂದಿದ್ದರು. ಆಗ ಆ ಮಾತು ವಿವಾದಕ್ಕೆ ಅವಕಾಶ ಕೊಡಲಿಲ್ಲ.
ಆದರೆ ಹಿಂದೆ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲೇ ದೇವೇಗೌಡರ ವಿರುದ್ಧ ಬಿ.ಬಿ. ಶಿವಪ್ಪ ಅವರು ಮಾಡಿದ ಆರೋಪದ ಆಧಾರದ ಮೇಲೆ ಅವರು ಒಂದು ಸಿಐಡಿ ತನಿಖೆಗೆ ಆದೇಶ ನೀಡಿದ್ದರು. ಪೂರ್ಣ ಪ್ರಮಾಣದ  ತನಿಖೆ ನಡೆದ ಅನಂತರ ಯಾವುದೇ ರೀತಿಯ ಪ್ರತಿಕ್ರಿಯೆ ಪ್ರಕಟವಾಗಲಿಲ್ಲ.
ಅನಂತರವೂ ದೇವೇಗೌಡರ ಆಸ್ತಿಪಾಸ್ತಿಯ ವಿವಾದದ ಪ್ರಸ್ತಾಪವಾಗಿದೆ. ಈಗ ದೇವೇಗೌಡರೂ ಸಚಿವ ಡಿ.ಕೆ.ಶಿವಕುಮಾರ  ಅವರ ಆಸ್ತಿ - ಪಾಸ್ತಿಯ ತನಿಖೆಗೆ ಒತ್ತಾಯಪಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹಾಸನದ ಸಭೆಯಲ್ಲಿ, ಬಡವರ ಕುಟುಂಬದಿಂದ ಬಂದಿರುವ ದೇವೇಗೌಡರು ಅಪಾರ ಆಸ್ತಿಗಳಿಸುವುದಕ್ಕೆ ಅವರೇನು ಉದ್ಯಮಿಯಾ? ಎಂದು ಪ್ರಶ್ನಿಸಿದ್ದು ಈ ವಿಚಾರಕ್ಕೆ ಹೊಸ ಆಯಾಮಗಳನ್ನು ನೀಡಿದೆ.
ಮುಖ್ಯಮಂತ್ರಿಯಾದವರಿಗೆ ಆಸ್ತಿ - ಪಾಸ್ತಿಯ ತನಿಖೆಗೆ ಸೂಕ್ತ ವ್ಯವಸ್ಥೆ ಮಾಡುವ ಅಧಿಕಾರವಿದೆ. ಆ ಅಧಿಕಾರವನ್ನು ಬಳಸದೇ ಮೈದಾನದ ಸಭೆಯಲ್ಲಿ ಪ್ರಸ್ತಾಪ ಮಾಡುವ ಅಧಿಕಾರವಿಲ್ಲ. ಇದು ಕೇವಲ ಕಾಯಿದೆಯ ಪ್ರಶ್ನೆ ಅಲ್ಲ. ಶುದ್ಧ ರಾಜಕೀಯದ ಹಿತರಕ್ಷಣೆಯ ಪ್ರಶ್ನೆ.
ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರ ವಿರುದ್ಧ ಡಾ॥ ಕೆ. ವೆಂಕಟಗಿರಿಗೌಡ ಅವರು (ಲೋಕಸಭೆ ಸದಸ್ಯರಾಗಿದ್ದವರು) ರಾಜ್ಯದ ಭ್ರಷ್ಟಾಚಾರ ಕುರಿತ ಒಂದು ಪುಸ್ತಕವನ್ನು ಪ್ರಕಟಿಸಿದ್ದರು. ಅದು ಬಹಿಷ್ಕಾರಕ್ಕೆ ಒಳಗಾಯಿತು. ಎರಡು ಮಾನನಷ್ಟ ಮೊಕದ್ದಮೆಗಳೂ ದಾಖಲಾಗಿದ್ದವು. ಆ ಮೊಕದ್ದಮೆಗಳನ್ನಾದರೂ ಶೀಘ್ರ ವಿಚಾರಣೆಗೆ ಒಳಪಡಿಸುವುದು ಸಾಧ್ಯವಿಲ್ಲವೇ?


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement