ದಾಹದ ಗೇಹ
ಏನೇ ಕಾರ್ಯವನ್ನು ಸಾಧಿಸುವುದಿದ್ದರೂ ಮಾಧ್ಯಮ ಈ ಕಾಯ
ಆತ್ಮನೆಂಬ ಪರಮಾತ್ಮ ನೆಲೆಸುವ ದೇಗುಲ
ಇಂದ್ರಿಯಗಳೆಂಬ ಜ್ಞಾನವಾಹಕಗಳ ವಾಹನ
ಮರಣದ ನಂತರ ನಾಶವಾಗುವ ಕ್ಷರ ಸ್ವಭಾವದ್ದು ಈ ಶರೀರ
ದ್ರೋಹ ಬಗೆಯಬಹುದಾದದ್ದು ಇದಕ್ಕೇ
ಕಾಮದಿಂದ ದಹದಹಿಸುವಂಥದ್ದು
ಸ್ವಾಹಾ ಮಾಡಿದಷ್ಟೂ ಸಾಲದು, ಮತ್ತಷ್ಟು ಬೇಕೆನ್ನುವುದು
ಇದನ್ನು 'ಅನ್ನಮಯ'ವೆಂಬ ಅಭಿಧೇಯದಿಂದ ಶಾಸ್ತ್ರ ಕರೆದಿದೆ
ಪ್ರಾಣ ಇರುವ ತನಕ ತ್ರಾಣ ರಕ್ಷಿಸಿಕೊಳ್ಳುವ ಪಾಂಚಭೌತಿಕ ಯಂತ್ರ
ದೇಹವೇ ಇಲ್ಲದಿದ್ದರೆ ದಪ್ಪ/ತೆಳ್ಳಗಾಗುವುದಕ್ಕೆ ಯಾರೂ ತಲೆಬಿಸಿ ಮಾಡಿಕೊಳ್ಳುತ್ತಿರಲಿಲ್ಲ
ಕೆಲವರಿಗಿದುವೇ ಬ್ಯುಸಿನೆಸ್ ಸೆಂಟರ್
ಮಣ್ಣಲ್ಲೇ ಕೊಳೆತು ಹೋಗುವ ಕಳೇಬರ
ಜೀವಾತ್ಮನ ಬಾಡಿಗೆ ಮನೆ
ಮಲ, ಮೂತ್ರ, ಬೆವರು, ಮಾಂಸಗಳೆಂಬ ಕಸವನ್ನು ಹೊತ್ತು ತಿರುಗುವ ಪಿಂಡ
ವಿಶ್ವನಾಥ ಸುಂಕಸಾಳ