ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Vishwanath S
Updated On : 3 May 2014, 12:10 pm

ಸಾಗರದಿಂದ ಬೊ.ನಾ. ಕೃಷ್ಣಮೂರ್ತಿ ಅವರು ಬರೆಯುತ್ತಾರೆ- 'ಇಂಗ್ಲಿಷ್‌ನ ರ್ಯಾಗಿಂಗ್ ಪದಕ್ಕೆ ಸೂಕ್ತ ಕನ್ನಡ ಪದ ಏನಾಗಬಹುದು ಎಂಬ 'ಕನ್ನಡಪ್ರಭ'ದ ಪ್ರಯತ್ನಕ್ಕೆ  ಅಭಿನಂದನೆಗಳು. ಆದರೆ, ಕಿರಿಯರಿಗೆ ಹಿರಿಯರು ನೀಡುವ ಚಿತ್ರವಿಚಿತ್ರ ಆಸೆಗಳನ್ನು ಕಿರಕುಳ ಎಂಬ ವರ್ಗಕ್ಕೆ ಸೇರಿಸುವುದು ತಪ್ಪು. ಕಾರಣ, ಅನುಭವಿಸುವವರಿಗೆ ತೊಂದರೆಯಾಗುವಂತಿದ್ದರೂ, ಕೀಟಲೆಯು ತೀರಾ ಸಣ್ಣ ಪ್ರಮಾಣದ್ದಾಗಿದ್ದರೆ ಮಾತ್ರ ಕಿರಕುಳ ಎನ್ನಿಸುತ್ತದೆ. ಈ ಪದದಲ್ಲಿ ಹಿಂಸೆಗೆ ಅವಕಾಶವಿಲ್ಲ. ಕಿರುಕುಳ ಎಂಬ ಪದವು  ಕಿರಕುಳ ಪದದ ಮತ್ತೊಂದು ರೂಪವೇ ಆಗಿದೆ ಎಂದು ಒಪ್ಪಿಕೊಳ್ಳಬಹುದು.'
'ಹಾಗಿರುವಾಗ, ಬುದ್ಧಿಹೀನ ಹಿರಿಯರು ಕಿರಿಯರಿಗೆ ನೀಡುವ ಬಹುತೇಕ ಹಿಂಸಾತ್ಮಕವೂ ಆಗಿರುವ, ಸಹಿಸಲಾಗದ, ಕೆಲಮೊಮ್ಮೆ ಕಿರಿಯರಿಗೆ ಮಾರಕವೂ ಅನ್ನಿಸುವ ತೊಂದರೆಗಳನ್ನು 'ಕಿರಿಕುಳ' ಎಂಬ ಹೆಸರಿನಿಂದ ಕರೆದರೆ  ಅದು ಕಿರಕುಳದಷ್ಟೇ ಸೌಮ್ಯ ಪದ ಅನ್ನಿಸದೇ? ಹಾಗಾದರೆ ಕಿರಿಕುಳ ಪದದ ಬದಲಿಗೆ ಬೇರೆ ಪದಗಳನ್ನು ಸೂಚಿಸಲಾದೀತಾ ನೋಡೋಣ.'
'ಸೂಕ್ತ ಪದದಲ್ಲಿ 'ಕುಳ' ಇರಲೇಬೇಕು ಎನ್ನುವುದಾದರೆ 'ಕುಕ್ಕುಳ' ಎಂಬ ಪದ ಆಗಬಹುದಾ? ಕು೤ಕುಳಕುಕುಳ ಎಂದಾದರೂ ಎರಡನೆಯ ಅಕ್ಷರಕ್ಕೆ  'ಕ' ಒತ್ತು ಅಪೇಕ್ಷಣೀಯ. ಆದರೆ, ಈ ಪದದ ಮೊದಲ  ಅಕ್ಷರ ಕಿರಿಯರಿಗೆ ಅಂದರೆ ಬಹುತೇಕ ಕುಮಾರ-ಕುಮಾರಿಯರಿಗೆ ನೀಡುವ ತೊಂದರೆಯನ್ನು ಸೂಚಿಸುವಂತೆ ಮತ್ತು 'ಕು' ಎಂಬುದು ಕೆಟ್ಟ, ದುಷ್ಟ ಮೊದಲಾದ ಒಳ್ಳೆಯದು ಅಲ್ಲ ಎಂಬ ಅರ್ಥವನ್ನು  ಕೊಡುವ ಪದವೇ ಆಗಿದ್ದರೂ (ಕು ಒಂದು ಅಕ್ಷರವೂ ಹೌದು ಮತ್ತು ಹಿಂದೆ ಹೇಳಿರುವ ಪದಗಳ ಬದಲಿಗೆ ಬಳಸಿದಾಗ ಪದವೂ ಹೌದು) ಕಿರಕುಳ ಅಥವಾ ಕಿರಿಕುಳ ಪದಗಳ ಉತ್ತರ ಭಾಗ 'ಕುಳ' ಹಿಂಸೆಯನ್ನಾಗಲೀ ಉಗ್ರತೆಯನ್ನಾಗಲೀ ಧ್ವನಿಸುವುದಿಲ್ಲ.'
'ಆದ್ದರಿಂದ ಇಡೀ ಪದ ಕುಕ್ಕುಳ, ಕಿರಕುಳ, ಕಿರಿಕುಳಗಳ ಹಾಗೆಯೇ ಕಿರಿಯರಿಗೆ ಹಿರಿಯರು ನೀಡುವ ಕಾಟದಲ್ಲಿ ಹಿಂಸೆಯ ಇರುವಿಕೆಯನ್ನು ಸೂಚಿಸಲಾರದು. ಇಂಗ್ಲಿಷ್‌ನ ರ್ಯಾಗಿಂಗ್ ಪದದಲ್ಲಿ ಕಾಟ (ಕಾಡುವಿಕೆ) ಇದ್ದರೂ, ಅದು ಹಿಂಸೆಯಿರದ ಕಾಟ ಅಲ್ಲ. ಈ ಕ್ರಿಯೆಯಲ್ಲಿ ಹಿರಿಯರಿಂದ ಕಾಟಕ್ಕೆ ಒಳಗಾಗುವವರಿಗೆ ದೈಹಿಕ  ಹಿಂಸೆ ಇದ್ದೇ ಇರುತ್ತದೆ ಎಂದು ಹೇಳಲಾಗದು. ಆದರೆ, ಮಾನಸಿಕ ಹಿಂಸೆಯಂತೂ ಇದ್ದೇ ಇರುತ್ತದೆ. (ಉದಾ-  ಕಿರಿಯ  ವಿದ್ಯಾರ್ಥಿಯೊಬ್ಬರ ಮೇಲೆ ಹಿರಿಯ ವಿದ್ಯಾರ್ಥಿಗಳು ಯಾವುದೇ ರೀತಿಯ ದೈಹಿಕ ಹಲ್ಲೆಯನ್ನು ಮಾಡದೆಯೂ, ಹಲವರ ಸಮ್ಮುಖದಲ್ಲಿ ಅವನನ್ನು ಅರೆಬೆತ್ತಲೆಯಾಗಿ ಕುಣಿಯಬೇಕೆಂದು ಗದರಿಸುವ ಬೆದರಿಸುವ ಮೂಲಕ ಮಾನಸಿಕ ಹಿಂಸೆಗೆ ಒಳಗಾಗುವಂತೆ ಮಾಡುವುದು ಇತ್ಯಾದಿ.)'
'ರ್ಯಾಗಿಂಗ್ ಮಾಡುವುದು ಎಂದರೆ ಒಂದು ಬಗೆಯ ಹಿಂಸೆಯಿಂದ ಕೂಡಿದ ಕಾಟವೂ ಹೌದು ಮತ್ತು ಅದನ್ನು  ನಡೆಸುವವರ ಭಾವನೆಯಲ್ಲಿ ಆಟವೂ ಹೌದು. ಅಂದರೆ ಇದು ಹಿಂಸೆಯಿಂದ ಕೂಡಿದ ಕಾಟ 'ಹಿಂಸಾಕಾಟ', ಹಿಂಕಾಟ ಎಂದೂ ಅಥವಾ ಹಿಂಸೆಯಿಂದ ಕೂಡಿದ ಕಾಟ ಮತ್ತು ಆಟ ಆಗಿದ್ದು ಹಿಂಗಾಟ ಎಂದೂ  ಕರೆಯಲ್ಪಟ್ಟರೆ ಸರಿಯಾದೀತಾ ಹಾಗೆಯೇ,  ಆಟ+ಕಾಟ+ಹಿಂಸೆ ಮೂರೂ ಪದಗಳ ಸಂಗಮವಾಗಿ ಆಟ್‌+ಕಾಟ್‌+ ಹಿಂಸೆ ಸೇರಿ ಆಟ್ಕಾಟ್ಹಿಂ ಎಂದಾದರೆ, ಅದು ಕನ್ನಡ ಪದ ಅನ್ನಿಸುವುದೇ ಇಲ್ಲ. ಸರಿ, ಹಿಂಸೆ+ಕಾಟ+ ಆಟ ಸೇರಿ ಹಿಂಕಾಟಾಟ ಎಂಬ ಪದವೊಂದು ರೂಪುಗೊಂಡರೆ ಹೇಗಾಗಬಹುದು? ಇನ್ನಷ್ಟು ಜನ ಕನ್ನಡಿಗರು ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಒಳ್ಳೆಯದು' ಎಂದಿದ್ದಾರೆ.
 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement