ನಗರಕ್ಕೇಕೆ ವೋಲ್ವೋ ಬಸ್ಸು?
ಬಿಎಂಟಿಸಿ ಸುಮಾರು 300 ಕೋಟಿ ರೂಪಾಯಿಗಳ ನಷ್ಟದಲ್ಲಿದೆ ಎನ್ನುವ ಕಾರಣಕ್ಕೆ ಬಸ್ ದರಗಳನ್ನು ಸಂಸ್ಥೆ ಹೆಚ್ಚಿಸುತ್ತಲೇ ಇದೆ. ಇದಕ್ಕೆ ಪ್ರಮುಖವಾಗಿ ಕಾರಣ ಸಂಸ್ಥೆಯಲ್ಲಿನ ಸರಿಯಾದಂತಹ ನಿರ್ವಹಣೆಯ ಕೊರತೆ. ಬೆಂಗಳೂರು ನಗರದಲ್ಲಿ ನೂರಾರು ವೋಲ್ವೋ ಬಸ್ಸುಗಳು ಸಂಚರಿಸುತ್ತಿವೆ. ಬಹಳಷ್ಟು ಬಸ್ಸುಗಳಲ್ಲಿ ಬೆರಳೆಣಿಕೆಯಷ್ಟೂ ಪ್ರಯಾಣಿಕರಿರುವುದಿಲ್ಲ. ಇಂತಹ ಬಸ್ಸುಗಳಿಂದ ನಷ್ಟವಾಗದೇ ಲಾಭ ಬರಲು ಸಾಧ್ಯವೇ ಇಲ್ಲ. ಮೊದಲೇ ಬೆಂಗಳೂರು ಸಣ್ಣ -ಪುಟ್ಟ ರಸ್ತೆಗಳು ಮತ್ತು ಅತೀ ಹೆಚ್ಚಿನ ವಾಹನದ ಸಂಚಾರ ವ್ಯವಸ್ಥೆ ಇದೆ. ವೋಲ್ವೋ ಬಸ್ ಬಹಳ ದೊಡ್ಡದಾಗಿದ್ದು, ಬಹಳಷ್ಟು ಬಡಾವಣೆಗಳಲ್ಲಿ ಇದು ಚಲಿಸುವುದು ಮತ್ತು ರಸ್ತೆಗಳ ತಿರುವುಗಳಲ್ಲಿ ಸಂಚರಿಸುವುದಂತೂ ಮತ್ತಷ್ಟೂ ಕಷ್ಟವಾಗಿರುತ್ತದೆ.
ನಗರದಲ್ಲಿ ಸುಖವಾದಂತಹ ಪ್ರಯಾಣದ ವ್ಯವಸ್ಥೆ ಬಯಸುವವರು ಕಾರುಗಳಲ್ಲಿ ಓಡಾಡುತ್ತಾರೆ ಇಲ್ಲವೇ ಆಟೋ ರಿಕ್ಷಾಗಳಲ್ಲಿ ಸಂಚರಿಸುತ್ತಾರೆ. ಆದುದರಿಂದ ಇಂತಹ ಹವಾ ನಿಯಂತ್ರಿತ ದುಬಾರಿ ಬೆಲೆಯ ಬಸ್ಸುಗಳನ್ನು ಬೆಂಗಳೂರಿನಿಂದ ದೂರ-ದೂರದ ಊರುಗಳಿಗೆ ಹಾಕಿದರೆ ಬಸ್ಸುಗಳೂ ಭರ್ತಿ ಆಗುತ್ತವೆ. ಆಗುತ್ತಿರುವ ನಷ್ಟವೂ ತಪ್ಪುತ್ತದೆ. ಬಿಎಂಟಿಸಿ ಬಸ್ಸುಗಳ ಮೇಲೆ ಜಾಹೀರಾತು ನೀಡುವ ವಿಚಾರದಲ್ಲಿಯೂ ಸಹ ದರಗಳು ಪರಿಷ್ಕರಣೆ ಆಗಿರುವುದಿಲ್ಲ. ಇಲ್ಲಿಯೂ ಸಹ ಸರಿಯಾದ ಲೆಕ್ಕ ಪತ್ರವಿರುವುದಿಲ್ಲ. ಬಸ್ ಟಿಕೆಟ್ಗಳ ಹಿಂಭಾಗದಲ್ಲಿ ಜಾಹೀರಾತು ಪ್ರಕಟಿಸಲು ಕ್ರಮ ಕೈಗೊಂಡರೆ ಇದರಿಂದಲೂ ಒಂದಷ್ಟು ಹಣವನ್ನು ಬಿಎಂಟಿಸಿ ಗಳಿಸಬಹುದು. ಕೇವಲ ದರ ಏರಿಕೆ ಒಂದೇ ಎಲ್ಲದಕ್ಕೂ ಮಾನದಂಡವಲ್ಲ. ಬಸ್ಗಳ ಸರಿಯಾದ ನಿರ್ವಹಣೆ ಮತ್ತು ಜಾಹೀರಾತುಗಳ ಶಿಸ್ತುಬದ್ಧವಾದಂತಹ ದರ ನಿಗದಿಪಡಿಸುವುದರಿಂದಲೂ ಸಾಕಷ್ಟು ಆದಾಯ ಬರುತ್ತದೆ.
-ಕೆ.ಎಸ್. ನಾಗರಾಜು, ಬೆಂಗಳೂರು
ಇದ್ಯಾವ ತರ್ಕ?
ಟಿವಿ ನಿರೂಪಕಿ ಅಮೃತಾ ರಾಯ್ ಜತೆಗಿನ ಸಂಬಂಧವನ್ನು ಸಮರ್ಥಿಸಿಕೊಳ್ಳುತ್ತಾ ತಾನು ಪತ್ನಿ ಮುಚ್ಚಿಡುವ ಪುಕ್ಕಲನಲ್ಲ ಎಂದು ವೀರಾವೇಶದಿಂದ ಹೇಳಿಕೊಂಡಿರುವ ದಿಗ್ವಿಜಯ್ ಸಿಂಗ್ ಅವರ ವರ್ತನೆಯನ್ನು ನೋಡಿದಲ್ಲಿ ನಗಬೇಕೋ, ಅಳಬೇಕೋ ತಿಳಿಯದು. 67 ವರ್ಷ ಪ್ರಾಯದ ಇವರ ಹೊಸ ವೈವಾಹಿಕ ಜೀವನಕ್ಕೆ ಮಾಧ್ಯಮಗಳು ಶುಭ ಕೋರಬೇಕಿತ್ತು ಎಂದು ದಿಗ್ವಿಜಯ್ ಅವರ ಅಂತರಾಳವಿದ್ದರೂ ಆಶ್ಚರ್ಯವಿಲ್ಲ. ಮಾಧ್ಯಮಗಳು ಇವರ ಪ್ರಸ್ತುತ ಎರಡನೆಯ ವಿವಾಹದ ಬಗ್ಗೆ ಬೆಳಕು ಚೆಲ್ಲುತ್ತಿರುವುದಕ್ಕೆ, ಇದು ತಮ್ಮ ಖಾಸಗಿ ಬದುಕಿನ ವಿಷಯವೆಂದು ಮತ್ತು ಈ ವಿಷಯದಲ್ಲಿ ಯಾರೂ ತಲೆ ಹಾಕುವುದು ಸರಿಯಲ್ಲವೆಂದು ಹೇಳಿಕೊಂಡಿರುವ ಇವರು, ಮೋದಿಯವರ ವೈವಾಹಿಕ ಜೀವನವೂ ಖಾಸಗಿ ವಿಷಯ ಎಂಬುದನ್ನು ಅರಿಯಲಾರದಷ್ಟು ಮುಗ್ಧರಾಗಿದ್ದಾರೆ. ತನ್ನ ಎಲೆಯಲ್ಲಿ ಕತ್ತೆ ಸತ್ತು ಬಿದ್ದಿದ್ದರೂ ಇನ್ನೊಬ್ಬರ ಎಲೆಯಲ್ಲಿ ನೊಣ ಹುಡುಕುವ ಜಾಯಮಾನ ದಿಗ್ವಿಜಯ್ ಸಿಂಗ್ ಅವರದ್ದಾಗಿದೆ.
- ಕೆ.ವಿ. ಸೀತಾರಾಮಯ್ಯ, ಹಾಸನ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com