ಕೆಮ್ಮಣ್ಣುಗುಂಡಿ ವಿಹಾರಧಾಮಕ್ಕೆ ಕಿತ್ತಾಟವೇಕೆ?
'ಯಾರ ಮಡಿಲಿಗೆ ಕೆಮ್ಮಣ್ಣುಗುಂಡಿ ವಿಹಾರಧಾಮ?' (ಕ.ಪ್ರ. 2/5) ಅನಾವಶ್ಯಕ ಕಿತ್ತಾಟಕ್ಕೆ ಎಡೆಮಾಡಿಕೊಟ್ಟಂತೆ ಅನಿಸುತ್ತಿಲ್ಲವೇ? ಇಲ್ಲಿಯ ಕೃಷ್ಣ ರಾಜೇಂದ್ರ ಗಿರಿಧಾಮ ಒಂದು ಪ್ರವಾಸಿ ತಾಣ. ಬೇಸಿಗೆಯಲ್ಲಂತೂ ಈ ಪ್ರದೇಶಕ್ಕೆ ಬರುವವರ ಸಂಖ್ಯೆಯೂ ಹೆಚ್ಚು. ಈಗಂತೂ ನವೀಕರಣಗೊಂಡಿರುವುದರಿಂದ ಹೊಸ ತಂತ್ರಜ್ಞಾನದ ಬಳಕೆಯಿಂದಾಗಿ ಬೇಸಿಗೆ-ಚಳಿಗಾಲಗಳೆರಡಕ್ಕೂ ಯೋಗ್ಯ ಸ್ಥಳವಾಗಿ ಮಾರ್ಪಟ್ಟಿದೆ. ಇದೊಂದು ಪ್ರವಾಸಿ ತಾಣವಾಗಿದ್ದರಿಂದಲೂ ಹಾಗೂ ಈ ಗಿರಿಧಾಮವನ್ನು ಅಭಿವೃದ್ಧಿಪಡಿಸಿದ್ದು ಪ್ರವಾಸಿ ಇಲಾಖೆಯಾಗಿರುವುದರಿಂದ, ನಿರ್ವಹಣೆಯ ಜವಾಬ್ದಾರಿಯೂ ಅದರದ್ದೇ ಆಗಬೇಕಲ್ಲವೇ? ತೋಟಗಾರಿಕೆ ವಿಭಾಗಕ್ಕೂ ಪ್ರವಾಸಿ ತಾಣಕ್ಕೂ ಎತ್ತಣ ಸಂಬಂಧ? ಇಷ್ಟು ವರ್ಷ ತೋಟಗಾರಿಕೆ ಇಲಾಖೆಗೆ ನಿರ್ವಹಣೆಯ ಜವಾಬ್ದಾರಿ ಕೊಟ್ಟು ತಪ್ಪು ಮಾಡಿದ ಸರ್ಕಾರ, ಅದೇ ತಪ್ಪನ್ನು ಮುಂದುವರಿಸಿಕೊಂಡು ಹೋಗಬೇಕೇ? ಆದ ತಪ್ಪನ್ನು ಸರಿಪಡಿಸಿಕೊಂಡು ವಿಹಾರಧಾಮವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಪರಿವರ್ತಿಸಬೇಕಾದದ್ದು ಪ್ರವಾಸೋದ್ಯಮ ಇಲಾಖೆಯೇ ಹೊರತು ತೋಟಗಾರಿಕೆ ಇಲಾಖೆಯಲ್ಲ. ಇಲ್ಲಿ ಕಿತ್ತಾಟದ ಪ್ರಶ್ನೆಯೇ ಬರಕೂಡದು. ರಾಜ್ಯ ಸರ್ಕಾರ ಸ್ಪಷ್ಟ ನಿರ್ಣಯ ತೆಗೆದುಕೊಂಡು ಸಮಸ್ಯೆಯೇ ಅಲ್ಲದ ಸಮಸ್ಯೆಯನ್ನು ಅತಿ ಶೀಘ್ರ ಪರಿಹರಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು. ಇನ್ನೊಂದು ವಿಚಾರ: ಸರ್ಕಾರಿ ಕೃಪಾಪೋಷಿತ ಯಾವುದೇ ಕಾಮಗಾರಿ ಇರಲಿ, ನವೀಕರಣವಿರಲಿ, ಹೊಸದಾಗಿ ಕಟ್ಟಿಸುವುದಾಗಲಿ ಅವುಗಳಿಗೆ ತಗಲಬಹುದಾದ ಖರ್ಚಿನ ಬಾಬ್ತು ಯಾವಾಗಲೂ ಸಾಮಾನ್ಯಕ್ಕಿಂತ ಹೆಚ್ಚಾಗಿಯೇ ಇರುತ್ತದೆ. (ಐಟಿಜಿಟಛಡಿಜಜ ್ಠಛಡಿಜಡ). ಸರ್ಕಾರಿ ಲೆಕ್ಕವೇ ಹೇಗೋ? ಅಥವಾ ಕೆಲಸದ ಹಂತ-ಹಂತದಲ್ಲಿ ಆಗಬಹುದಾದ/ನಡೆಯಬಹುದಾದ ಸೋರುವಿಕೆಯನ್ನು ಗಣನೆಗೆ ತೆಗೆದುಕೊಂಡು ಈ ರೀತಿ ಲೆಕ್ಕ ಮಾಡುತ್ತಾರೋ ಏನೋ. ಕೆಮ್ಮಣ್ಣುಗುಂಡಿಯ ವಿಹಾರಸಧಾಮದ ವಿಷಯವೇ ಇರಲಿ ಅಥವಾ ಈಗಷ್ಟೇ ನವೀಕರಣಗೊಂಡ ಲೋಕೋಪಯೋಗಿ (?) ಸಚಿವ ಡಾ. ಎಚ್.ಸಿ. ಮಹದೇವಪ್ಪನವರ ಬಂಗಲೆಯ ವಿಷಯವೇ ಇರಲಿ. ಖರ್ಚಾದ ಮೊತ್ತಕ್ಕೂ ಆಗಬೇಕಿದ್ದ ಮೊತ್ತಕ್ಕೂ ಬಹಳ ಅಂತರ ಇರುವಂತೆ ಕಾಣಿಸುತ್ತಿಲ್ಲವೇ? (20 ಕೋಟಿ ಮತ್ತು 25 ಕೋಟಿ ರೂಪಾಯಿಗಳು!) ಅಷ್ಟೇ ಏಕೆ. ಒಂದು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಂದು ನೀರಿನ ಟ್ಯಾಂಕನ್ನೋ, ಕಾರ್ಯಕ್ರಮಗಳನ್ನು ನಡೆಸಲು ಚಿಕ್ಕ ವೇದಿಕೆ ನಿರ್ಮಾಣವಾಗಬೇಕೆಂದರೂ ಅದಕ್ಕಾಗಿ ಮೀಸಲಾಗಿಡುವ ಮೊತ್ತ ಕನಿಷ್ಠ ಎರಡು-ಮೂರು ಪಟ್ಟು ಹೆಚ್ಚಿರುತ್ತದೆ. ಒಂದು ವೇಳೆ ಖರ್ಚು ಕಡಿಮೆಯಾಗಿದ್ದರೂ ಪಾವತಿಸುವ ಹಣ ಮಾತ್ರ ಇನ್ನೂ ಸ್ವಲ್ಪ ಹೆಚ್ಚೇ ಇರುವುದು ಅತಿ ಸಾಮಾನ್ಯ. ಪಾರದರ್ಶಕ ವ್ಯವಹಾರ ಎಲ್ಲೆಲ್ಲೂ ಕಾಣಸಿಗದು. ಇದನ್ನು ನಾವೆಲ್ಲ ಒಪ್ಪಿಕೊಂಡು ಬಿಟ್ಟಿದ್ದೇವೆ. ಸರಿಪಡಿಸಲು ಹೊರಟರೆ ಯಾರಿಗೆ ದೂರು ಕಳಿಸುವುದು? ಅವರಿಂದ ಸಕಾರಾತ್ಮಕ ಉತ್ತರ ಸಿಕ್ಕೀತೆ?
-ಶಂಕರನಾರಾಯಣಭಟ್, ಮಾಡಗೇರಿ. ಹೊನ್ನಾವರ (ಉ.ಕ)
ಕೆಳಕ್ಕಿಳಿಯದಿರಲಿ ಪಿಎಚ್.ಡಿ ಮೌಲ್ಯ
ಮೈಸೂರು ವಿಶ್ವವಿದ್ಯಾಲಯಕ್ಕೆ ಎತ್ತರದ ಹೆಸರಿದೆ. ಆದರೆ ಇತ್ತೀಚಿನ ಕೆಲ ವಿದ್ಯಮಾನಗಳಿಂದ ವಿ.ವಿ.ಯ ಘನತೆ ಕುಗ್ಗುತ್ತಿರುವುದಂತೂ ಸತ್ಯ. ಇವುಗಳಲ್ಲಿ ಪಿ.ಎಚ್.ಡಿ. ಮಾಡಬಯಸುವ ವಿದ್ಯಾರ್ಥಿಗಳ ಅರ್ಹತೆಯ ಗುಣಾಂಕವನ್ನು ಶೇಕಡ 50ರಿಂದ ಶೇಕಡ 40ಕ್ಕೆ ಇಳಿಸಿರುವುದು ಇದಕ್ಕೆ ಕಾರಣ.
ಇತ್ತೀಚಿನ ದಿನಗಳಲ್ಲಿ ಡಾಕ್ಟರೇಟ್ಗೆ 'ರೇಟ್' ಎಷ್ಟು ಎಂಬ ವ್ಯಂಗ್ಯ ಪ್ರಶ್ನೆ ಎದುರಾಗಿದೆ. ಕಾರಣ ಡಾಕ್ಟರೇಟ್ ಸರ್ಟಿಫಿಕೇಟ್ಗಳು ಬಿಕರಿಗಿವೆ ಎಂಬರ್ಥದಲ್ಲಿ ಜನರು ಪಿ.ಹೆಚ್.ಡಿ.ಯನ್ನೇ ಲೇವಡಿ ಮಾಡುವಲ್ಲಿಗೆ ಬಂದು ನಿಂತಿರುವಾಗ ಮೈಸೂರಿನ ಮುಕ್ತ ವಿಶ್ವವಿದ್ಯಾಲಯವು ಪಿಹೆಚ್.ಡಿ. ಅಧ್ಯಯನಕ್ಕೆ ಅರ್ಹತೆಯನ್ನು ಪ್ರಾಥಮಿಕ ಶಾಲಾ ವಿದ್ಯಾರ್ಥಿಯ ತೃತೀಯ ದರ್ಜೆಯ ಉತ್ತೀರ್ಣತೆಯ ಅಂಕಕ್ಕೆ ಇಳಿಸಿರುವುದು ಸರಿಯೆ? ಇದು ತೀರಾ ಆಕ್ಷೇಪಾರ್ಹವಾದ ಸಂಗತಿ. ಪಿ.ಹೆಚ್.ಡಿ. ಮಾಡುವವರೆಂದರೆ ಅವರು ಆಳವಾದ ಅಧ್ಯಯನದ ಹೆಬ್ಬಾಗಿಲು ತೆರೆವವರು. ಇಂತಹವರ ಸಂಖ್ಯೆ ವಿರಳ. ಆದ್ದರಿಂದ ಪಿ.ಹೆಚ್.ಡಿ. ಅಧ್ಯಯನ ಪ್ರವೇಶಾರ್ಹ ಗುಣಾಂಕದ ಮಿತಿ ಕನಿಷ್ಠ ಪ್ರಥಮ ಶ್ರೇಣಿ (ಶೇಕಡಾ 60) ಗಿಂತ ಹೆಚ್ಚಾಗಿರಬೇಕೇ ಹೊರತು ಕೆಳಮಟ್ಟಕ್ಕಿಳಿಸುವುದು ಯಾವ ರೀತಿಯಿಂದಲೂ ಒಪ್ಪುವ ವಿಚಾರವಲ್ಲ. ದಯಮಾಡಿ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿಗಳು ಹಾಗೂ ಸಿಂಡಿಕೇಟ್ ಸದಸ್ಯರು ಈ ವಿಚಾರದಲ್ಲಿ ಸಕಾರಾತ್ಮಕವಾಗಿ ಯೋಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು.
-ಅಂಕೇಗೌಡ, ಮಂಡ್ಯ.
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com