ತಪ್ಪಾಯ್ತು ತಿದ್ಕೋತೀವಿ
ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ- 'ಭಾಷಾ ಜಿಜ್ಞಾಸುವಾದ ನನಗೆ ಪತ್ರಕರ್ತರ...
ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ- 'ಭಾಷಾ ಜಿಜ್ಞಾಸುವಾದ ನನಗೆ ಪತ್ರಕರ್ತರ ಕಚೇರಿಯ ಸುದ್ದಿಮನೆಯವರ ಅಜ್ಞಾನದಿಂದಾಗುವ ಅವಾಂತರಗಳು ನಗೆಮಲ್ಲಿಗೆಯ ಕಂಪನ್ನು ತಲುಪಿಸುವುದೇನೋ ಸರಿ, ಆದರೆ ತೀರಾ ಆಭಾಸಕರ ಅನರ್ಥಕ್ಕೆಡೆ ಯಾಗುವುದು ಸರಿಯಲ್ಲ.'
'ಏ.28ರಂದು ಪುಟ 7ರಲ್ಲಿ ಸೋನಿಯಾ ಎಲ್ಲಿಯವರು? ಎಂಬ ಅರುಣ್ ಜೇಟ್ಲಿಯವರ ಮಾತುಗಳನ್ನು ಸಂಗ್ರಹಿಸುವಾಗ ನಾಲ್ಕನೇ ಅಂಶವನ್ನು ಪ್ರಸ್ತಾಪಿಸುತ್ತಾ 'ಜಲಿಯನ್ವಾಲಾ ಬಾಘ್' ಎಂಬ ಪದ ಬಳಕೆಯಾಗಿದೆ. ನನ್ನ ಅಲ್ಪಮತಿಗೆ ಹೊಳೆದಂತೆ 'ಬಾಘ್' ಎಂದರೆ ಹುಲಿ ಎಂದರ್ಥ. ಜಲಿಯನ್ವಾಲಾ ಉದ್ಯಾನವನ ಎಂಬರ್ಥದ ಜಲಿಯನ್ವಾಲಾ ಬಾಗ್ ಎಂಬುದನ್ನು ಡಿಟಿಪಿ ಆಪರೇಟರ್ ಮಹಾಶಯರ ಕೈ ಚಳಕವು ಜಲಿಯನ್ವಾಲಾ ಹುಲಿಯನ್ನಾಗಿಸಿದೆ.'
'ಜಲಿಯನ್ವಾಲಾಬಾಗ್ ಎಂದು ನಾನು ತಿದ್ದಿಕೊಂಡಿದ್ದೇನೆ. ಅದೇ ದಿನ 2ನೇ ಪುಟದಲ್ಲಿ ಪುಳಕಿತರಾದ ಸಿದ್ದರಾಮಯ್ಯ ಸುದ್ದಿ ವಿವರದಲ್ಲಿ ಅಭಿವೃದ್ಧಿ ಕೆಲಸ ಮಾಡಿ ಸಹಿ ಎನಿಸಿಕೊಂಡಿದ್ದಾರೆ ಎಂದು ಮುದ್ರಣಗೊಂಡಿದೆ. ಕೆಲಸ ಮಾಡಿ ಸೈ ಎನ್ನಿಸಿಕೊಂಡರೆ ಮಾತ್ರ ಭೇಷ್ ಎಂಬ ಅಭಿನಂದನೆಯೊಡನೆ ಸಹಿ ಬಿದ್ದರೆ ಒಪ್ಪುವಂತಾದದ್ದು. ಸಹಿ ಎನಿಸಿಕೊಳ್ಳುವುದಲ್ಲ. ಸೈ ಎನಿಸಿಕೊಂಡಿದ್ದಾರೆ ಎಂದು ತಿದ್ದಿಕೊಳ್ಳೋಣ.'
"ನಮಗೆ ನಾವೇ ಸಾಟಿ' ಸುದ್ದಿಯಲ್ಲಿ ಗೊಂದಲಕಾರಿ ವಿವರದ ವಾಕ್ಯವಿದೆ. 5ನೇ ಅನುಚ್ಛೇದದಲ್ಲಿ 'ವೀರಪ್ಪ ಮೊಯ್ಲಿಯವರೇ ಗೆಲ್ಲೊಂದು, ಏಕೆಂದರೆ ಅವರು ಅಧಿಕಾರದಲ್ಲಿ ದ್ದಾಗ ಸಾಕ್ಷಿಯಾಗಿ ಯಾವುದೇ ಒಂದು ಕೆಲಸ ಮಾಡಿಲ್ಲ. ಇಂತಹವರನ್ನು ಜನ ಏಕೆ ಆಯ್ಕೆ ಮಾಡಬೇಕು' ಎಂದಿದೆ. ಮೊದಲನೆ ಯದಾಗಿ ಮೊಯ್ಲಿಯವರನ್ನು 'ಗೆಲ್ಲೊಂದು' ಎಂದು ರೆಂಬೆಯ ನ್ನಾಗಿಸಿದ ಮುದ್ರಾರಾಕ್ಷಸ ಉಪಟಳ. ಅದು ಹಾಗಿರಲಿ. ಈ ವಾಕ್ಯಗಳನ್ನು ಓದಿದಾಗ ತಲೆ ಗಿರ್ರೆನ್ನುತ್ತದೆ. ಇವರು ಎಂಬ ಪದದ ಬದಲಾಗಿ ಕುಮಾರಸ್ವಾಮಿಯವರು ಪದ ಬಳಸಬೇಕಾಗಿತ್ತು. ವೀರಪ್ಪ ಮೊಯ್ಲಿಯವರೇ ಗೆಲ್ಲೋದು ಎನ್ನುತ್ತಾ ಅವರನ್ನು ಆಯ್ಕೆ ಮಾಡಬಾರದು ಎಂಬರ್ಥ ಬಂದರೆ ಗೊಂದಲಕಾರಿಯಲ್ಲವೇ?' ಎಂದಿದ್ದಾರೆ.
ಭದ್ರಾವತಿಯಿಂದ ಓಂಚನ್ನೇಶ್ ಅವರು ಬರೆಯುತ್ತಾರೆ- 'ಏ.17ರಂದು ಪುಟ 3ರಲ್ಲಿ 'ಪ್ರತಿಭಟನೆಗೆ ಬೆದರಿ ಕಾಲ್ಕಿತ್ತ ಸಿಎಂ ಸಿದ್ದು' ಎಂಬ ಶೀರ್ಷಿಕೆಯ ಸುದ್ದಿಯಲ್ಲಿ, 'ಮೈಸೂರಿನಲ್ಲಿ ಬಿಡಾರ ಹೂಡಿದ್ದ ಸಿಎಂ ಸಿದ್ದರಾಮಯ್ಯ ಬಿಜೆಪಿ ಪ್ರತಿಭಟನೆಗೆ ಬೆದರಿಗೆ ಜಾಗ ಖಾಲಿ ಮಾಡಿದ್ದಾರೆ' ಎಂದಿದೆ. ಅದು ಪ್ರತಿಭಟನೆಗೆ 'ಬೆದರಿ' ಜಾಗ ಖಾಲಿ ಮಾಡಿದ್ದಾರೆ ಎಂದಾಗಬೇಕಿತ್ತು' ಎಂದಿದ್ದಾರೆ.
-ವಿಶ್ವೇಶ್ವರ ಭಟ್