ತಪ್ಪಾಯ್ತು ತಿದ್ಕೋತೀವಿ
ಬೆಳಗಾವಿಯ ರವಿವಾರಪೇಟೆ ಸಿದ್ದಲಿಂಗಪ್ಪ ಈಶ್ವರಪ್ಪಾ ಸಿದ್ದಿಬಾವಿ ಅವರು ಬರೆಯುತ್ತಾರೆ- 'ಏ.27ರಂದು ಪುಟ 8ರಲ್ಲಿ ...
ಬೆಳಗಾವಿಯ ರವಿವಾರಪೇಟೆ ಸಿದ್ದಲಿಂಗಪ್ಪ ಈಶ್ವರಪ್ಪಾ ಸಿದ್ದಿಬಾವಿ ಅವರು ಬರೆಯುತ್ತಾರೆ- 'ಏ.27ರಂದು ಪುಟ 8ರಲ್ಲಿ ನಾಗಮಂಡಲದಲ್ಲಿ ನವಿಲಿನ 'ನಂಗಾನಾಚ್' ಎನ್ನುವ ಶೀರ್ಷಿಕೆ ಓದಿ ಏಕೋ ತುಂಬಾ ಕಸಿವಿಸಿಯಾಯಿತು. ನಮ್ಮ ರಾಷ್ಟ್ರೀಯ ಪಕ್ಷಿಯಾದ ಮಯೂರದ ಪ್ರದರ್ಶನವನ್ನು ನಂಗಾನಾಚ್ಗೆ ಹೋಲಿಸಿದ್ದಂತೂ ತುಂಬಾ ಖೇದವಾಯಿತು. ತನ್ನ ನೃತ್ಯದಿಂದ ನೋಡುಗರ ಕಣ್ಮನ ಸೆಳೆಯುವ, ಎಂಥ ದುಃಖದ ಮನಸ್ಸನ್ನೂ ಉಲ್ಲಾಸಗೊಳಿಸುವ ಮನಮೋಹಕವಾದ ನರ್ತನ ಶೈಲಿಯನ್ನು ಪಾರ್ಟಿಯಲ್ಲಿ ಜನರೆದುರು ಅರೆಬೆತ್ತಲೆಯಾಗಿ ಕುಣಿಯುವ ಅಸಂಸ್ಕೃತ ಶಬ್ದ ಹೋಲಿಕೆಗೆ ಸರಿಯಲ್ಲ' ಎಂದಿದ್ದಾರೆ.
ನವಿಲಿನ ನೃತ್ಯವನ್ನು 'ನಂಗಾನಾಚ್'ಗೆ ಹೋಲಿಸಿದ್ದು ಅಷ್ಟು ಸರಿಯಲ್ಲ ಎಂಬುದು ಒಪ್ಪುವಂತಹ ಮಾತು. ಆದರೆ ಕೆಟ್ಟ ಅರ್ಥದಲ್ಲಿ 'ನಂಗಾನಾಚ್' ಎಂದು ಬಳಸಲಾಗಿಲ್ಲ. ಬದಲಾಗಿ ಹಾಸ್ಯ ಅಥವಾ ಚೂಟಿಯಾದ ಅರ್ಥದಲ್ಲಿ ಅದನ್ನು ಬಳಸಲಾಗಿದೆ. ನವವಿಲಿನ ನ್ಯತ್ಯದ ಗುಣಮಟ್ಟವನ್ನು ಕಡಿಮೆ ಮಾಡಬೇಕು ಅಥವಾ ಲೇವಡಿ ಮಾಡಬೇಕು ಎಂಬ ಉದ್ದೇಶ ಖಂಡಿತಾ ಇರಲಿಲ್ಲ.
ರವಿ ಕೋರೆ ಅವರು ಬರೆಯುತ್ತಾರೆ- 'ಮೇ 1ರಂದು ನೂರೆಂಟು ನೋಟ ಅಂಕಣದಲ್ಲಿ 'ಕಳೆದ ವಾರ ಬೆಂಗಳೂರಿಗೆ ಭಾರತೀಯ ಚುನಾವಣಾ ಆಯೋಗದ ಮುಖ್ಯಸ್ಥರಾದ ಎಸ್. ವೈ . ಖುರೇಶಿ ಬಂದಿದ್ದರು' ಎಂದು ಪ್ರಕಟವಾಗಿದೆ. ಆದರೆ ಖುರೇಶಿ ಅವರು ಚುನಾವಣಾ ಆಯೋಗದ ಮಾಜಿ ಮುಖ್ಯಸ್ಥರು. (ಸೇವಾವಧಿ ಜುಲೈ 30, 2010ರಿಂದ ಜೂನ್ 10, 2012). ಅವರ ನಂತರ ಚುನಾವಣಾ ಆಯೋಗದ ಹಾಲಿ ಮುಖ್ಯಸ್ಥರಾದ ವಿ. ಎಸ್. ಸಂಪತ್ ಅಧಿಕಾರ ವಹಿಸಿಕೊಂಡರು. ಹಾಗಾಗಿ, ಅಂಕಣದಲ್ಲಿ 'ಕಳೆದ ವಾರ ಭಾರತೀಯ ಚುನಾವಣಾ ಆಯೋಗದ ಮಾಜಿ ಮುಖ್ಯಸ್ಥರಾದ ಎಸ್. ವೈ. ಖುರೇಶಿ ಬಂದಿದ್ದರು' ಎಂದಾಗಬೇಕಿತ್ತು' ಎಂದಿದ್ದಾರೆ.
'ಭಾರತೀಯ ಚುನಾವಣಾ ಆಯೋಗದ ಮುಖ್ಯಸ್ಥರಾಗಿದ್ದ' ಎಂದು ಬರೆದಿದ್ದು, ಕಂಪ್ಯೂಟರ್ಗೆ ಕೀ ಮಾಡುವಾಗ 'ಮುಖಸ್ಥರಾದ' ಎಂದಾಗಿಬಿಟ್ಟಿದೆ.
ಬೆಂಗಳೂರಿನಿಂದ ವಿ. ಹೇಮಂತಕುಮಾರ ಅವರು ಬರೆಯುತ್ತಾರೆ- 'ಏ.30ರ 'ಬೈಟು ಕಾಫಿ' ಪುರವಣಿಯ ಪುಟ 2ರಲ್ಲಿ ಬನ್ನಿಮಂಟಪ ಅಂಕಣದಲ್ಲಿ ಸಾಧನೆ ಮತ್ತು ಕಾಡು ಮನುಷ್ಯ ಎಂಬ ಪುಟ್ಟ ಕಥೆಗಳು ಪ್ರಕಟವಾಗಿದೆ. ಅಂಕಣಕ್ಕೂ ಪ್ರಕಟಗೊಂಡ ಲೇಖನಕ್ಕೂ ಯಾವುದೇ ಸಂಬಂಧವಿಲ್ಲದಂತಾಗಿದೆಯಲ್ಲ. ಸಣ್ಕಥೆ ಅಂಕಣದಲ್ಲಿ ಪ್ರಕಟವಾಗಬೇಕಾದ ಲೇಖನ ಬನ್ನಿಮಂಟಪದಲ್ಲಿದೆಯಲ್ಲ' ಎಂದಿದ್ದಾರೆ.
ಮಲ್ಲೇಶ್ವರಂನಿಂದ ರಾಮಮೂರ್ತಿ ಅವರು ಬರೆಯುತ್ತಾರೆ- 'ಮೇ 11ರಂದು ಪತ್ರಿಕೆಯ 10ನೇ ಪುಟದಲ್ಲಿ (ಬೆಂಗಳೂರು ಆವೃತ್ತಿ) 'ಮಾರ್ಷಲ್ಗೆ ಗೌರವ ಪಿಎಚ್ಡಿ' ಎಂಬ ಶೀರ್ಷಿಕೆಯೊಂದು ಪ್ರಕಟವಾಗಿದೆ. ಗೌರವ ಡಾಕ್ಟರೇಟ್ ಗೊತ್ತು. ಆದರೆ 'ಗೌರವ ಪಿಎಚ್ಡಿ' ಎಂಬುದನ್ನು ಇದೇ ಮೊದಲ ಬಾರಿ ಓದುತ್ತಿದ್ದೇನೆ. ಅಲ್ಲದೇ ಮಾರ್ಷಲ್ ಅವರು ಪ್ರೌಢಪ್ರಬಂಧವನ್ನೂ ಮಂಡಿಸಿದ್ದಾರೆ. ಅವರು ಪ್ರಬಂಧ ಮಂಡಿಸಿದ ಮೇಲೆ ಅವರಿಗೆ ನೀಡಲಾಗುವುದು ಸಾಮಾನ್ಯ ಪಿಎಚ್ಡಿಯೇ ಹೊರತು ಗೌರವ ಪಿಎಚ್ಡಿ ಅಲ್ಲ. ಸುದ್ದಿಯಲ್ಲೆಲ್ಲೂ 'ಗೌರವ ಪಿಎಚ್ಡಿ' ಪ್ರಸ್ತಾಪವಿಲ್ಲ. ಶೀರ್ಷಿಕೆಯಲ್ಲಿ ಮಾತ್ರ ಗೌರವ ಹೆಚ್ಚಾದಂತಿದೆ' ಎಂದಿದ್ದಾರೆ.
-ವಿಶ್ವೇಶ್ವರ ಭಟ್