ಸುಪ್ರೀಂ ತೀರ್ಪನ್ನು ಹಳಿಯುವುದೇಕೆ?
"ಮಕ್ಕಳ ಶಿಕ್ಷಣ ಮಾಧ್ಯಮ ಪೋಷಕರದ್ದೇ ತೀರ್ಪು" (ಕ.ಪ್ರ. 7/5) ಸಂಪಾದಕೀಯ ಲೇಖನ ಈಗಷ್ಟೇ ಹೊರಟಿರುವ ಸುಪ್ರಿಂಕೋರ್ಟ್ನ ...
"ಮಕ್ಕಳ ಶಿಕ್ಷಣ ಮಾಧ್ಯಮ ಪೋಷಕರದ್ದೇ ತೀರ್ಪು" (ಕ.ಪ್ರ. 7/5) ಸಂಪಾದಕೀಯ ಲೇಖನ ಈಗಷ್ಟೇ ಹೊರಟಿರುವ ಸುಪ್ರಿಂಕೋರ್ಟ್ನ ಸಂವಿಧಾನ ಪೀಠದ ತೀರ್ಪಿಗೆ ಪೂರಕವಾಗಿದೆ. ಪೋಷಕರು ಕಲಿಸುವ ಭಾಷೆಯೇ ಮಾತೃಭಾಷೆ, ವಿದ್ಯಾರ್ಥಿಗಳ ಮೇಲೆ ಭಾಷಾ ಮಾಧ್ಯಮ ಹೇರುವ ಹಕ್ಕು ರಾಜ್ಯ ಸರ್ಕಾರಕ್ಕೆ ಇಲ್ಲವೇ ಇಲ್ಲ. ಮಾತೃಭಾಷೆಯ ನೆಪದಲ್ಲಿ ಕಲಿಕಾ ಮಾಧ್ಯಮವನ್ನು ಹೇರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಹೇಳಿದ ಸುಪ್ರಿಂಕೋರ್ಟ್ನ ಹೇಳಿಕೆಗೆ ಸಾಹಿತಿಗಳಿಂದ ಬಂದ ಪ್ರತಿಕ್ರಿಯೆ ದಿಗ್ಭ್ರಮೆ ಮೂಡಿಸುವಂತಿದೆ.
"ಬಡವಾಗಿರುವ ಕನ್ನಡ ಇನ್ನೂ ಬಡವಾಗುವ ಅಪಾಯ ಎದುರಾಗಿದೆ, ಸಾಮಾಜಿಕ ಅಸಮಾನತೆ ಹೆಚ್ಚಾಗಲಿದೆ.' 'ಅವೈಜ್ಞಾನಿಕ', 'ಮಹಾಶಾಸನ ಮಾರಕ', 'ಸರ್ಕಾರದ ದುರ್ಬಲತೆಯ ಪ್ರತೀಕ', 'ರಾಜ್ಯಕ್ಕೆ ಹಿನ್ನಡೆ', 'ಕನ್ನಡ ದ್ರೋಹಿಗಳಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಪರ' ಇತ್ಯಾದಿ ಇತ್ಯಾದಿ ಹೇಳಿಕೆಗಳನ್ನು ತಮ್ಮ ಶಕ್ತ್ಯಾನುಸಾರ ನೀಡಿದ್ದಾರೆ. (ಅಂದ ಹಾಗೆ, ಜ್ಞಾನಪೀಠ ಪುರಸ್ಕೃತ ಯು.ಆರ್. ಅನಂತಮೂರ್ತಿ ಹಾಗೂ ಗಿರೀಶ್ ಕಾರ್ನಾಡ್, ತಮ್ಮ ಜ್ಞಾನ ಸುಧೆಯನ್ನು ಇನ್ನೂ ಏಕೆ ಹರಿಬಿಡಲಿಲ್ಲವೋ?). ಭಾಷಾವಾರು ಪ್ರಾಂತ್ಯ ರಚನೆಯೊಂದಿಗೆ ಸದ್ಯದ ತೀರ್ಪನ್ನು ಹೋಲಿಸುವುದು ಎಷ್ಟು ಸಮಂಜಸ? ಅಂದಿನ ರಾಜಕೀಯ ದುಗುಡವನ್ನು ಪರಿಹರಿಸಿ ಸಮತೋಲನ ಕಾಪಾಡುವ ಏಕೈಕ ದೃಷ್ಟಿಯಿಂದ ಭಾಷಾವಾರು ಪ್ರಾಂತ್ಯ ರಚನೆಯಾಯಿತೇ ಹೊರತು ಯಾವೊಂದು ಭಾಷೆಯನ್ನು ಉದ್ದೇಶಪೂರ್ವಕವಾಗಿ ಹೇರುವ ದೃಷ್ಟಿಯಿಂದಲ್ಲ. ಪ್ರತಿಯೊಂದು ರಾಜ್ಯದ ಪ್ರಜೆಗೂ ಅವರವರ ಭಾಷೆಯ ಮೇಲೆ ಅಭಿಮಾನ, ಪ್ರೀತಿ ಇರುವುದು ಸಹಜವೆಂದಾದರೂ ಜಾಗತೀಕರಣದ ಈ ಹೊತ್ತಿನಲ್ಲಿ ಯಾವೊಂದು ಪ್ರಾದೇಶಿಕ ಭಾಷೆಯ ಮೇಲೆ ಒತ್ತು ಕೊಡುವುದು ಬುದ್ಧಿವಂತಿಕೆಯ ಲಕ್ಷಣವಲ್ಲ.
ಇಂದಿಗೂ, ಕರ್ನಾಟಕದಲ್ಲಿ ಪ್ರಾಥಮಿಕ ಹಂತದಲ್ಲಿ ಕನ್ನಡ ಭಾಷೆಗೆ ಅದರದ್ದೇ ಆದ ಮಹತ್ವ, ಸ್ಥಾನಮಾನಗಳಿವೆ. ಆದರೆ ಅದೊಂದನ್ನೇ ಕಲಿಸಿ, ಇಂಗ್ಲಿಷ್ ಬೇಡವೇ ಬೇಡ ಎಂಬ ಸಿನಿಕತೆ ನಮ್ಮದಾಗಿರಬಾರದು. ಮಾತೃ ಭಾಷೆಯ ಜತೆ ಹೆಚ್ಚಿನದಾಗಿ ಬಳಸಲ್ಪಡುವ ಇಂಗ್ಲಿಷ್ ಭಾಷೆಯನ್ನು ಕಲಿತರೆ, ಕನ್ನಡ ಪ್ರೇಮಿಗಳೇಕೆ ಮುನಿಸಿಗೊಳ್ಳಬೇಕು? ತಾನೊಬ್ಬ ಕಟ್ಟಾ ಕನ್ನಡಿಗ ಎಂದು ಹೇಳಿಕೊಳ್ಳುವ ಅದೆಷ್ಟೋ ಮಂದಿ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮಗಳಲ್ಲೋ, ವಿದೇಶಗಳಲ್ಲೋ ಓದಿಸುತ್ತಿಲ್ಲ? ಆಕಾಶವೇ ಹರಿದು ಬಿದ್ದು ಹೋಯಿತೆಂಬಂಥ ಇವರುಗಳ ಪ್ರತಿಕ್ರಿಯೆಗಳಿಗೆ ವಾಸ್ತವದಲ್ಲಿ ಏನಾದರೂ ಬೆಲೆ ಸಿಕ್ಕೀತೆ? ಲೇಖಕರು ಅಂದಂತೆ, ಇಂದಿನ ಉದ್ಯೋಗಪೇಟೆಯ ವ್ಯವಸ್ಥೆ, ಸರ್ಕಾರಿ ಶಾಲೆಗಳ ಅವಸ್ಥೆ ಇವುಗಳ ಹಿನ್ನೆಲೆಯಲ್ಲಿ ಅನೇಕ ಮಕ್ಕಳ ಪಾಲಕ- ಪೋಷಕರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ನೊಂದಾಯಿಸುವುದೇ ಒಳ್ಳೆಯದೆಂದು ತಿಳಿದಿದ್ದಾರೆ. ಶಿಕ್ಷಣದ ಗುಣಮಟ್ಟದ ಪ್ರಸ್ತಾವವೂ ಈ ಸಂದರ್ಭದಲ್ಲಿ ಅನಿವಾರ್ಯ.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಹೆಚ್ಚಿ, ಒತ್ತು ಇರಬೇಕೆ ವಿನಾ ಕಲಿಕೆಯ ಮಾಧ್ಯಮದ ಮೇಲಲ್ಲ. ಕೇವಲ ಕನ್ನಡ, ಕನ್ನಡ ಎಂದು, ಇಂಗ್ಲಿಷ್ ಕಲಿಯದೆ ಹೋದ ಅದೆಷ್ಟು ಮಕ್ಕಳು ತಮ್ಮ ್ಛಛ್ಠಜಜ್ಠ ಅನ್ನು ಸುಧಾರಿಸಿಕೊಳ್ಳಲು ಶಕ್ತರಾಗಿದ್ದಾರೆ ಎಂಬ ಅಂಕಿ ಸಂಖ್ಯೆ ಆಂಗ್ಲಭಾಷಾ ವಿರೋಧಿಗಳಲ್ಲಿದೆಯೇ? ಇಲ್ಲಿ ಯಾವೊಂದು ಭಾಷೆಯೂ ಶ್ರೇಷ್ಠ ಅಥವಾ ಕನಿಷ್ಠವೆಂಬುದಲ್ಲ. ಸಮಯಕ್ಕೆ ತಕ್ಕುದಾಗಿ ವಿಚಾರ ಬದಲಿಸಿಕೊಂಡು ಮುನ್ನಡೆಯುವುದೇ ಜಾಣತನ. ಭಾಷಾ ಪ್ರೇಮ- ಅಭಿಮಾನ ಒಪ್ಪುವಂತಹದು; ದುರಭಿಮಾನವಲ್ಲ. ಕಲಿಕೆಯ ಗುಣಮಟ್ಟ ಎತ್ತರಿಸುವ ಎಲ್ಲ ಅವಕಾಶಗಳೂ ಈಗಲೂ ಲಭ್ಯ. ಶಿಕ್ಷಣ ತಜ್ಞರು, ಸಾಹಿತಿಗಳು, ಚಿಂತಕರು ಎಲ್ಲಕ್ಕೂ ಹೆಚ್ಚಾಗಿ ಶಿಕ್ಷಣ ಸಚಿವರು ಮತ್ತು ರಾಜ್ಯ ಸರ್ಕಾರ ಇನ್ನೂ ಹೆಚ್ಚಿನ ವಿಚಾರ-ಮಂಥನ ನಡೆಸಬೇಕೇ ಹೊರತು ಬಂದಿರುವ ತೀರ್ಪನ್ನು ಹಳಿಯುತ್ತಾ ಕಾಲಹರಣ ಮಾಡುವುದಲ್ಲ.
-ಶಂಕರನಾರಾಯಣಭಟ್, ಮಾಡಗೇರಿ, ಹೊನ್ನಾವರ.
ಬಸ್ ಪಾಸ್ ವಿತರಿಸಿ
ಪ್ರಸ್ತುತ ಶೈಕ್ಷಣಿಕ ವರ್ಷದ ತರಗತಿಗಳು ಮೇ ಮೊದಲ ವಾರದಿಂದ ಆರಂಭವಾಗಿದ್ದು, ಶಾಲೆಗೆ ಹೋಗುವ ಎಲ್ಲ ಮಕ್ಕಳೂ ಶಾಲಾ ಬಸ್ಗಳಲ್ಲಷ್ಟೇ ಅಲ್ಲದೆ ಸರ್ಕಾರಿ ಬಸ್ಗಳಲ್ಲೂ ಓಡಾಡುತ್ತಾರೆ . ಆದರೆ ಬಸ್ ಪಾಸ್ ಜೂನ್ ತಿಂಗಳ ಮೊದಲ ವಾರದಲ್ಲಿ ವಿತರಿಸುವುದರಿಂದ ಒಂದು ತಿಂಗಳ ಕಾಲ ದುಬಾರಿ ಬಸ್ ಟಿಕೆಟ್ ಖರೀದಿಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆರ್ಥಿಕ ವೆಚ್ಚ ಭರಿಸಲಾಗದ ಪೋಷಕರು ಒಂದು ತಿಂಗಳ ನಂತರವೇ ಶಾಲಗೆ ಕಳುಹಿಸುವುದರಿಂದ ಒಂದು ತಿಂಗಳ ಪಾಠ ಪ್ರವಚನಗಳಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ಇದು ಪ್ರತಿ ವರ್ಷ ಪುನರಾವರ್ತನೆಯಾಗುವ ಸಮಸ್ಯೆಯಾಗಿದೆ.
ಹೀಗೆ ಸರ್ಕಾರಿ ಬಸ್ನಲ್ಲಿ ಪ್ರಯಾಣಿಸುವ ಮಕ್ಕಳಲ್ಲಿ ನಾನೂ ಒಬ್ಬಳಾಗಿದ್ದು, ಪ್ರತಿದಿನ ಶಾಲೆಗೆ ಹೋಗಿಬರಲು 25 ರುಪಾಯಿ ವೆಚ್ಚವಾಗುತ್ತಿದೆ. ಅಂದರೆ ಒಂದು ತಿಂಗಳಿಗೆ 750 ರುಪಾಯಿ. ಇದು ಒಂದು ವರ್ಷಕ್ಕೆ ನಾವು ಬಸ್ ಪಾಸ್ಗೆ ನೀಡುವ ವೆಚ್ಚಕ್ಕೆ ಸಮನಾಗಿದೆ. ಇನ್ನು ದೂರದಿಂದ ಬರುವ ಮಕ್ಕಳಿಗೆ ಒಂದು ಸಾವಿರಕ್ಕೂ ಹೆಚ್ಚು ವ್ಯಯವಾಗಲಿದೆ. ಇದು ಬಡ ಪೋಷಕರ ಪಾಲಿಗೆ ತೀವ್ರ ಹೊರೆಯಾಗಿದ್ದು, ಶಾಲೆ ಆರಂಭವಾದ ಕೂಡಲೇ ಬಸ್ ಪಾಸ್ ವಿತರಿಸಲು ಸಾರಿಗೆ ಸಚಿವರು ಮತ್ತು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ವಿನಂತಿಸುತ್ತೇನೆ.
-ಅಶ್ವಿನಿ ಎನ್., ಶ್ರೀವಾಣಿ ವಿದ್ಯಾಕೇಂದ್ರ, ಬೆಂಗಳೂರು