ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

ಮೈಸೂರಿನ ಕೃಷ್ಣಮೂರ್ತಿಪುರಂನಿಂದ ಎಸ್. ರಾಘವೇಂದ್ರ ಅವರು ಬರೆಯುತ್ತಾರೆ- 'ವಿಶ್ವ ಮಾತೆಯರ ದಿನ ...

Rashmi Kasaragodu
Updated On : 15 May 2014, 12:16 pm

ಮೈಸೂರಿನ ಕೃಷ್ಣಮೂರ್ತಿಪುರಂನಿಂದ ಎಸ್. ರಾಘವೇಂದ್ರ ಅವರು ಬರೆಯುತ್ತಾರೆ- 'ವಿಶ್ವ ಮಾತೆಯರ ದಿನ  ಸಂದರ್ಭದಲ್ಲಿ 'ಕನ್ನಡ ಪ್ರಭ', ಮಾತೆಯರಿಗೆ ವಿಶಿಷ್ಟ ಬಾಗಿನದ ಗೌರವ ಕೊಡುವಂತೆ, 'ವಿಠಲನ ಪೂಜೆಗಿನ್ನು ರಾಧೆಯರಿಗೂ ಆಹ್ವಾನ' ಸುದ್ದಿಯನ್ನು ಮೇ 11ರಂದು ಮುಖಪುಟದಲ್ಲಿ ಪ್ರಕಟಿಸಿದೆ. ಸುದ್ದಿಯಲ್ಲಿನ ಇತಿಹಾಸದ ಒಂದಂಶದ ಬಗ್ಗೆ ಗಮನ ಸೆಳೆಯಲು ವಿಶ್ವೇಶ್ವರ ಭಟ್ಟರ ಸಮಕ್ಷಮಕ್ಕೆ ಈ ಮಿಂಚಂಚೆ.'
'ಈ ಸುದ್ದಿಗೆ ರೂಪು ಕೊಟ್ಟ ಸುದ್ದಿಗಾರರು, ಪಂಡರಾಪುರ ದೇಗುಲಕ್ಕೆ ಆರುನೂರು ವರುಷಗಳ ಇತಿಹಾಸ ಇದೆ ಎಂದಿದ್ದಾರೆ. ಇದು ತುಂಬಾ ಕಡಿಮೆ ಕಾಲ ಗಣನೆ ಎಂದು ನನ್ನ ಅಭಿಪ್ರಾಯ. ಬಹುಶಃ ಸುದ್ದಿಗಾರರು ಶ್ರೀ ಪುರಂದರದಾಸರ ಕಾಲವನ್ನು  ಮನಸಿನಲ್ಲಿ ಇಟ್ಟುಕೊಂಡಿರಬೇಕು. ಅದಕ್ಕೆ ಈ ಕಾಲ ಲೆಕ್ಕಾಚಾರ.'
'ಹನ್ನೆರಡನೇ ಶತಮಾನದಲ್ಲಿದ್ದ ಶ್ರೀ ಶಂಕರಾಚಾರ್ಯರು, ಶ್ರೀ ಪಾಂಡುರಂಗನನ್ನು ಕುರಿತಂತೆ ಮಾಡಿದ ಸ್ತೋತ್ರ ಶ್ರೀ ಪಾಂಡುರಂಗಾಷ್ಟಕ ಇಂದು ಉಪಲಬ್ಧವಿದೆ. ಈ ಸ್ತೋತ್ರದಲ್ಲಿ ಶ್ರೀ ಶಂಕರರು ಪಾಂಡುರಂಗನ ಬೆಡಗನ್ನು ಸ್ತುತಿಸಿದ್ದಾರೆ. 'ಪರ ಬ್ರಹ್ಮಲಿಂಗಮ್ಭುಜೆ ಪಾಂಡು ರಂಗಂ....' ಈ ಸ್ತೋತ್ರವನ್ನು ಪಿ. ಬಿ. ಶ್ರೀನಿವಾಸ್ ಅತ್ಯಂತ ಮಧುರವಾಗಿ ಹಾಡಿದ್ದಾರೆ. ಶ್ರೀ ಶಂಕರರ ಕಾಲಕ್ಕೆ ಪಾಂಡುರಂಗನ ದೇಗುಲ ಇತ್ತು ಎಂದು ಸಿದ್ಧವಾಗುವುದಿಲ್ಲವೇ?'
'ಈ ಸ್ತೋತ್ರದಲ್ಲಿ ಎಲ್ಲಿಯೂ ಶಂಕರರು ವಿಠಲ ಪದವನ್ನು ಬಳಸಿಲ್ಲ ಎನ್ನುವ ಅಪೂರ್ವ ವಿಷಯವನ್ನು ಓದುಗರು ಮನಗಾಣಬೇಕು. ವಿಠಲ ಎನ್ನುವ ಪರ್ಯಾಯ ಪದದ ಬಳಕೆ ಬಂದಿದ್ದೇ ಎಷ್ಟೋ ಶತಮಾನಗಳ ನಂತರ. ವಿದಾ- ಜ್ಞಾನೇನ ಠಾನ್- ಶೂನ್ಯಾನ್ ಲಾತಿ- ಗೃಣ್ಣಾತಿ ಎಂದು ಸಂಸ್ಕೃತ ಬಲ್ಲವರು ವಿಠಲನ ಪದದ ನಿಷ್ಪತ್ತಿ ಮಾಡುತ್ತಾರೆ. ವಿಠಲ ಎಂದರೆ ಬರಿದಾಗಿರುವಲ್ಲಿ ಜ್ಞಾನವನ್ನು ತುಂಬಿಸಿ ಕೊಡುತ್ತಾನೆ ಎಂದು. ಅರ್ಥಾತ್ ಜ್ಞಾನದಾತ.'
'ವಿಠಲ ಪದವನ್ನು ಗ್ರಂಥಗಳಲ್ಲಿ ಮೊದಲು ಪ್ರಯೋಗ ಮಾಡಿದ ಗೌರವ ಶ್ರೀ ಮಧ್ವಾಚಾರ್ಯರ ಪರಂಪರೆಯಲ್ಲಿ ಉಡುಪಿ ಶ್ರೀ ಫಲಿಮಾರು ಮಠದ ಮೊದಲ ಯತಿಗಳಾದ ಶ್ರೀ ಹೃಷೀಕೇಶ ತೀರ್ಥರು ಎಂದು ವಿದ್ವಾಂಸರು  ಅಭಿಪ್ರಾಯ ಪಡುತ್ತಾರೆ. ಹೃಷೀಕೇಶ ತೀರ್ಥರು ತಮ್ಮ ಸಂಪ್ರದಾಯ ಪದ್ಧತಿ ಗ್ರಂಥದಲ್ಲಿ ಇದರ ಬಳಕೆ ಮಾಡಿದ್ದಾರೆ. ವಿಠಲ ಕರ್ನಾಟಕದ ಹರಿದಾಸರಿಗೆ ಮಾಡಿದ ಅನುಗ್ರಹ ಕಂಡು ಮಹಾರಾಷ್ಟ್ರೀಯರು ಕಾನಡಿ ವಿಠಲ  (ಕರ್ನಾಟಕದ ವಿಠಲ) ಎಂದು ಕರೆಯಲು ಪ್ರಾರಂಭಿಸಿದರು. ಕರ್ನಾಟಕದ ಹರಿದಾಸರೆನಿಸಿದ ಪುರಂದರದಾಸರಿಗೆ, ಕನಕದಾಸರಿಗೆ, ವಿಜಯದಾಸರಿಗೆ, ಗೋಪಾಲದಾಸರಿಗೆ, ಜಗನ್ನಾಥದಾಸರಿಗೆ... ವಿಠಲನೆ ಸ್ಫೂರ್ತಿಯ ಸೆಲೆ.'
'ಅತಿ ವೃದ್ಧ ತಂದೆ ತಾಯಿಗಳ ಸೇವೆಯನ್ನು ಅನನ್ಯವಾಗಿ ಮಾಡುತ್ತಿದ್ದ ಪುಂಡರೀಕನ ಪರೀಕ್ಷೆಗೆ ದೇವರು ಬಂದಾಗ, ಸೇವಾಮಗ್ನನಾಗಿದ್ದ ಪುಂಡರೀಕ, ತನ್ನ ಸೇವಾಕಾರ್ಯ ಮುಗಿಯುವ ತನಕ ದೇವರನ್ನೇ ಕಾಯಲು ಹೇಳುತ್ತಾನೆ. ಅಲ್ಲಿದ್ದ ಇಟ್ಟಿಗೆಯ ಮೇಲೆ ಕೂಡಲು ಹೇಳುತ್ತಾನೆ . . ಪುಂಡರೀಕನ ತಂದೆ ತಾಯಿಗಳ ಸೇವೆಗೆ ಮೆಚ್ಚಿದ ವಿಠಲ, ಅವನ ಭಕ್ತಿಗೆ ಮೆಚ್ಚಿ ಅಲ್ಲೇ ನೆಲೆ ನಿಂತನು.'
'ಶ್ರೀ ವಾದಿರಾಜ ಸ್ವಾಮಿಗಳು ತಮ್ಮ ಭಾರತ ಪಾದಯಾತ್ರೆಯ ಸಂದರ್ಭದಲ್ಲಿ ವಿಠಲನನ್ನು ತಮ್ಮ ಗ್ರಂಥಗಳಲ್ಲಿ ಅನನ್ಯವಾಗಿ ಸ್ತುತಿಸಿದ್ದಾರೆ' ಎಂದು ವಿಠಲನ ಇತಿಹಾಸವನ್ನೇ ತೆರೆದಿಟ್ಟಿದ್ದಾರೆ.


 -ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement