ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಬಿಡಾರಂ ಕೃಷ್ಣಪ್ಪ ಕಟ್ಟಿಸಿದ ರಾಮ ಮಂದಿರ

ಮೈಸೂರು ಸಾಂಸ್ಕೃತಿಕ ರಾಜಧಾನಿ ಎಂಬ ಅಭಿದಾನಕ್ಕೆ ಪಾತ್ರವಾಗಿರುವುದು ಹೆಮ್ಮೆ ಪಡುವ ವಿಷಯ...

Rashmi Kasaragodu
Updated On : 15 May 2014, 11:50 am

ಮೈಸೂರು  ಸಾಂಸ್ಕೃತಿಕ ರಾಜಧಾನಿ ಎಂಬ ಅಭಿದಾನಕ್ಕೆ ಪಾತ್ರವಾಗಿರುವುದು ಹೆಮ್ಮೆ ಪಡುವ ವಿಷಯ. ಅರಸರ ಕಾಲದಿಂದಲೂ ಇಲ್ಲಿ ಸಂಗೀತ, ನೃತ್ಯ, ಸಾಹಿತ್ಯ ಸಮೃದ್ಧವಾಗಿ ಬೆಳೆಯುತ್ತಾ ಬಂದಿದೆ. ಇಲ್ಲಿ ಆಗಿಹೋದ ಅನೇಕ ಸಂಗೀತ ದಿಗ್ಗಜರುಗಳಲ್ಲಿ ಬಿಡಾರಂ ಕೃಷ್ಣಪ್ಪನವರೂ ಒಬ್ಬರು. ಅವರು ಅದ್ಭುತ ಸಂಗೀತಗಾರರಾಗಿದ್ದಂತೆ ಕೊಡುಗೈ ದಾನಿಯೂ ಆಗಿದ್ದರು. ಧರ್ಮಭೀರುಗಳಾಗಿದ್ದ ಕೃಷ್ಣಪ್ಪನವರಿಗೆ ಒಂದು ಆಸೆಯಿತ್ತು. ಅವರು ಶ್ರೀರಾಮನ ಅಚಲ ಭಕ್ತರಾಗಿದ್ದುದರಿಂದ ಮೈಸೂರಿನಲ್ಲೊಂದು ಶ್ರೀರಾಮ ದೇವಾಲಯವನ್ನು ನಿರ್ಮಿಸಿ ಅಲ್ಲಿ ಪ್ರಸಿದ್ಧ ಸಂಗೀತಗಾರರನ್ನು ಕರೆಸಿ ಸಂಗೀತ ಕಚೇರಿಯನ್ನು ನಡೆಸಬೇಕೆಂದು. ಆದರೆ ದೇವಾಲಯ ಕಟ್ಟಿಸುವಷ್ಟು ಅವರು ಧನವಂತರಾಗಿರಲಿಲ್ಲ. ಆದ್ದರಿಂದ ಅವರು ಅಲ್ಲಲ್ಲಿ ತಿರುಗಿ, ನಾನಾ ಮೂಲಗಳಿಂದ ಹಣಕೂಡಿಸಿ, ದೇವಾಲಯ ಕಟ್ಟಡ ಪ್ರಾರಂಭಿಸಿಯೇಬಿಟ್ಟರು. ಅಂತೂ ಇಂತೂ ತಮ್ಮ ಸಂಕಲ್ಪದಂತೆ ದೇವಾಲಯವೂ ರೂಪುಗೊಂಡಾಗ ಅವರಿಗಾದ ಸಂತೋಷ ಅಷ್ಟಿಷ್ಟಲ್ಲ. ಎಲ್ಲರೂ ಕೃಷ್ಣಪ್ಪನವರ ಸಾಹಸವನ್ನು ಹೊಗಳುವವರೇ. ಕೆಲ ಹಿರಿಯರಂತೂ ಬಾಯ್ತುಂಬ ಅವರನ್ನು ಹರಸಿ, ರಾಮಮಂದಿರವನ್ನು ನಿರ್ಮಿಸಿ ಶ್ಲಾಘನೀಯ ಕಾರ್ಯ ಮಾಡಿದ್ದೀರಿ. ಸೀತಾರಾಮರಿಗೆ ಒಂದೆರಡು ಚಿನ್ನದೊಡವೆ ಮಾಡಿಸಿ ಅಜರಾಮರ ಕೀರ್ತಿಗೆ ಭಾಜನರಾಗಿರಿ ಎಂದು ಸಲಹೆ ನೀಡಿದರು. ಅದು ಕೃಷ್ಣಪ್ಪನವರಿಗೆ ಸರಿಯೆನ್ನಿಸಿತು. ಒಡವೆ ಮಾಡಿಸಲು ಸಾಕಾಗುವಷ್ಟು ಚಿನ್ನವನ್ನು ಹೊಂದಿಸಲಾಗಲಿಲ್ಲ. ಮನೆಯಲ್ಲಿ ತಮ್ಮ ಪತ್ನಿಯ ತಾಳಿ ಬಿಟ್ಟರೆ ಬೇರೆ ಚಿನ್ನವೂ ಇರಲಿಲ್ಲ. ಕೊನೆಗೆ ನಿರ್ವಾಹವಿಲ್ಲದೆ ಹೆಂಡತಿಯ ತಾಳಿಯನ್ನು ಪಡೆದು ಒಡವೆಗೆ ಉಪಯೋಗಿಸಲು ತೀರ್ಮಾನಿಸಿದರು. ಆ ವಿಷಯವನ್ನು ಹೆಂಡತಿಗೆ ಹೇಳಿದಾಗ, ಆಕೆ ಏನು ಹೇಳಬೇಕೋ ತೋಚದೆ ಮಿಕಮಿಕ ನೋಡತೊಡಗಿದರು. ಆಕೆಯ ಮನದ ಗೊಂದಲವನ್ನು ಅರ್ಥಮಾಡಿಕೊಂಡ ಕೃಷ್ಣಪ್ಪನವರು, "ನಾನೇ ನಿನ್ನ ಜೀವಂತ ತಾಳಿ. ನಾನಿರುವಾಗ ನಿನಗೇತಕ್ಕೆ ಚಿಂತೆ? ನಾವೆಲ್ಲ ಆ ಶ್ರೀರಾಮನಿಗೆ ಸೇರಿದವರಲ್ಲವೆ?" ಎಂದು ಸಮಾಧಾನದ ಮಾತುಗಳನ್ನು ಹೇಳಿದರು. ಪತಿಯ ಮಾತಿನಿಂದ ಸಂತೋಷಗೊಂಡ ಆಕೆ ಏನೂ ಮಾತನಾಡದೆ ತಮ್ಮ ಕತ್ತಿನಲ್ಲಿದ್ದ ತಾಳಿಯನ್ನು ತೆಗೆದುಕೊಟ್ಟರು. ಈಗ ಕೃಷ್ಣಪ್ಪನವರಾಗಲೀ, ಅವರ ಪತ್ನಿಯಾಗಲೀ ಇಲ್ಲ. ಆದರೆ ಅವರು ಕಟ್ಟಿಸಿದ ಶ್ರೀರಾಮ ಮಂದಿರ ಈಗಲೂ ಮೈಸೂರಿನ ಶಿವರಾಮಪೇಟೆಯಲ್ಲಿದ್ದು ಆಸ್ತಿಕರ ಶ್ರದ್ಧಾಕೇಂದ್ರವಾಗಿದೆ.


- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments