ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಮೋದಿ ತುಳಿದ ಹೊಸ ಹಾದಿ

Mainashree
Updated On : 22 May 2014, 10:11 am

ಪ್ರಧಾನಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ವಿದೇಶೀ ಪ್ರಮುಖರನ್ನು ಆಹ್ವಾನಿಸುವ ಸಂಪ್ರದಾಯ ಇಲ್ಲ. ಆದರೆ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ, ದಕ್ಷಿಣ ಏಷ್ಯಾ ಸಂಗಾತಿ ರಾಷ್ಟ್ರಗಳ ಪ್ರಮುಖರನ್ನು ಆ ಸಮಾರಂಭಕ್ಕೆ ಆಹ್ವಾನಿಸಿ ಹೊಸ ಹಾದಿಯನ್ನೇ ತುಳಿದಿದ್ದಾರೆ.
ಅದರಲ್ಲೂ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹಾಗೂ ಶ್ರೀಲಂಕಾ ನಾಯಕ ರಾಜಪಕ್ಷೆ ಅವರಿಗೆ ನೀಡಿರುವ ಆಹ್ವಾನ ವಿವಾದಗ್ರಸ್ತವಾಗುವುದರ ಅರಿವಿದ್ದರೂ, ಮೋದಿ ಈ ಕ್ರಮವನ್ನು ಕೈಗೊಂಡಿದ್ದರ ಉದ್ದೇಶ ಆಡಳಿತದ ಆರಂಭದಲ್ಲೇ ನೆರೆ ಹೊರೆಯ ರಾಷ್ಟ್ರಗಳ ಜತೆ ಉತ್ತಮ ಸಂಬಂಧವನ್ನು ಹೊಂದಲು ಸಿಕ್ಕಿರುವ ಈ ಅವಕಾಶವನ್ನು ಬಳಸಿಕೊಳ್ಳುವುದು.
ಇದು ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಹೊಸ ವಿದೇಶಾಂಗ ನೀತಿಯ ಸೂಚನೆಯೇ ಎನ್ನುವ ಪ್ರಶ್ನೆ ಅನೇಕರನ್ನು ಕಾಡಿದೆ. ಹಿಂದೆ ಮೋದಿ ಅಮೆರಿಕಕ್ಕೆ ಭೇಟಿ ನೀಡಲು ವೀಸಾ ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ, ದೇಶದ ವಿದೇಶಾಂಗ ನೀತಿಯೇ ಬದಲಾದೀತೇ ? ಅದು ಊಹಾ ಪೋಹಕ್ಕೆ ಸಂಬಂಧಿಸಿದ ವಿಚಾರ.
ಮೋದಿ ಅವರು ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಪಕ್ಷ ಭೇದವಿಲ್ಲದೇ ವಿಶೇಷ ಆಹ್ವಾನ ನೀಡಿರುವುದು ಒಂದು ಸದಾಶಯದ ಸೂಚನೆಯ ಸಂಕೇತ.
ಇಂತಹ ಸಾಂಕೇತಿಕ ಕ್ರಮಗಳೇ ಭವಿಷ್ಯದಲ್ಲಿ ವಿದೇಶಾಂಗ ನೀತಿಯಲ್ಲಿ ಬದಲಾವಣೆಯ ಅಗತ್ಯವನ್ನು, ಹಾಗೂ ಕೇಂದ್ರ ರಾಜ್ಯಗಳ ನಡುವಣ ಸಂಬಂಧವನ್ನು ಹೆಚ್ಚು ಉತ್ತಮಗೊಳಿಸಬೇಕಾದ ಅವಶ್ಯಕತೆಯನ್ನು ಪ್ರತಿಪಾದಿಸಲೂಬಹುದು.
ಹಿಂದೆ, ವಾಜಪೇಯಿ ಅವರು ದೆಹಲಿ, ಲಾಹೋರ್ ನಡುವಣ ಬಸ್ ಸಂಚಾರದ ವಿಚಾರದಲ್ಲಿ ಉಭಯ ರಾಷ್ಟ್ರಗಳ ನಡುವೆ ಒಪ್ಪಂದವಾದ ಕೂಡಲೇ ತಾವೇ ಮೊದಲ ಬಸ್ ಯಾತ್ರೆಯಲ್ಲಿ ಪ್ರಯಾಣ ಮಾಡುವ ಮಾತಾಡಿದಾಗ, ಭಾರತ-ಪಾಕಿಸ್ತಾನಗಳೆರಡರಲ್ಲೂ ಸಾಮಾನ್ಯ ಜನರ ಮಟ್ಟದಲ್ಲೂ ಒಂದು ರೀತಿಯ ಸಂಚಲನ ಕಂಡು ಬಂದಿತ್ತು. ಅದು ಯಶಸ್ವಿಯಾಗಲಿಲ್ಲ ಎನ್ನುವುದು ಬೇರೆ ಮಾತು.
ಪಾಕಿಸ್ತಾನದ ನಾಯಕರು ಹಾಗೂ ಪ್ರಜೆಗಳು ಬಿಜೆಪಿ ಸರ್ಕಾರದ ಪ್ರಧಾನಿ ಪಾಕಿಸ್ತಾನದ ಪ್ರಧಾನಿಯನ್ನು ಇಂತಹ ಸಮಾರಂಭಕ್ಕೆ ಆಹ್ವಾನಿಸುವುದನ್ನು ಯಾವ ರೀತಿ ಅರ್ಥ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ.
ಮೋದಿ ಅವರ ಸಾರ್ಕ್‌ನ ರಾಷ್ಟ್ರಗಳ ಪ್ರಮುಖರಿಗೆ ಆಹ್ವಾನ ನೀಡುವ ಹಿಂದಿನ ಉದ್ದೇಶ ಪರಸ್ಪರ ಪರಿಚಯ ಮಾಡಿಕೊಳ್ಳುವ ಬಯಕೆಯನ್ನು ಬಿಟ್ಟು ಬೇರೆ ಏನೂ ಇರದೇ ಇರಬಹುದು. ಆದರೂ ಮೋದಿ ಅವರು ಇತರರಿಗಿಂತ ಭಿನ್ನವಾದ ಚಿಂತನೆಯನ್ನು ಪ್ರಕಟಿಸುವುದರ ಜತೆಯಲ್ಲೇ ಹಿಂದಿನವರು ತುಳಿಯದ ಹಾದಿಯನ್ನು ತುಳಿಯಲು ಹಿಂದೆ ಮುಂದೆ ನೋಡಲಿಕ್ಕಿಲ್ಲ ಎನ್ನುವ ಸೂಚನೆಯನ್ನು ನೀಡಿದ್ದಾರೆ.
ವಿದೇಶೀ ಪ್ರಮುಖರಿಗೆ ಆಹ್ವಾನವಿರುವುದು ಕೇವಲ ಪ್ರಮಾಣ ವಚನ ಸ್ವೀಕಾರದ ಸಮಾರಂಭಕ್ಕೆ ಅಷ್ಟೇ ಅಲ್ಲ. ಸಮಾರಂಭದ ಅನಂತರ ಏರ್ಪಾಟಾಗಿರುವ ಔತಣ ಕೂಟಕ್ಕೂ ಅವರೆಲ್ಲರಿಗೂ ಆಹ್ವಾನವಿದೆ. ಆ ಸಮಯದಲ್ಲಿ ಪರಸ್ಪರ ವಿಚಾರ-ವಿನಿಮಯಕ್ಕೂ ಅವಕಾಶ ಸಿಗಲೂಬಹುದು. ಇದು ಒಂದು ಸಣ್ಣ ವಿಚಾರವಾದರೂ ಮೋದಿ ಅವರು ಅದನ್ನು ತಮ್ಮ ಎಂದಿನ ಶೈಲಿಯಲ್ಲಿ ವೈಶಿಷ್ಟ್ಯವನ್ನು ಮೆರೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement