ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕಬ್ಬಿನ ಬೆಲೆ ನಿಗದಿ ವಿವಾದ

Mainashree
Updated On : 23 May 2014, 9:33 am

ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನ ನಡೆದಿದ್ದಾಗ, ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಕೊಡಬೇಕಾದ ಹಣ ಬಾಕಿ ಉಳಿಸಿಕೊಂಡಿದ್ದರ ವಿರುದ್ಧ ಒಂದು ದೊಡ್ಡ ರೈತ ಪ್ರದರ್ಶನವೂ ನಡೆದಿತ್ತು. ಆ ಪ್ರದರ್ಶನದ ಕಾಲದಲ್ಲಿ ಒಬ್ಬ ರೈತ ಸತ್ತಿದ್ದೂ ನಿಜ.
ಆಗಲೇ ಸರ್ಕಾರ ಕಬ್ಬಿಗೆ ಬೆಲೆಯನ್ನು ನಿಗದಿಪಡಿಸುವ ವಿಚಾರದಲ್ಲಿ ಸೂಕ್ತ ಕಾರ್ಯಕ್ರಮವನ್ನು ಕೈಗೊಳ್ಳುವ ಭರವಸೆ ನೀಡಿದ್ದೂ ನಿಜ. ಅದರಂತೆ, ಈಗ ಸರ್ಕಾರ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಬೆಳೆಗಾರರಿಗೆ ಟನ್‌ಗೆ 2500 ರುಪಾಯಿಗಳ ಬೆಲೆಯನ್ನು ಕೂಡಲೇ ಪಾವತಿ ಮಾಡಬೇಕೆಂದೂ, ಇಲ್ಲದಿದ್ದರೆ ಶಿಕ್ಷೆಗೆ ಗುರಿಯಾಗಬೇಕೆಂದೂ ನೋಟೀಸು ನೀಡಿದೆ. ಕಬ್ಬಿನ ಬೆಲೆ ನಿಗದಿಗೆ ಒಂದು ಸಂಕೀರ್ಣ ಸ್ವರೂಪದ ಪದ್ಧತಿ ಜಾರಿಯಲ್ಲಿದೆ. ಪ್ರತಿ ವರ್ಷ ಕೇಂದ್ರ ಸರ್ಕಾರ ಬೆಲೆಯನ್ನು ನಿಗದಿಪಡಿಸಬೇಕು. ಅದರಂತೆ ಕಳೆದ ವರ್ಷಕ್ಕೆ ಕೇಂದ್ರ ನಿಗದಿಪಡಿಸಿದ ಬೆಲೆ ಟನ್‌ಗೆ 2100 ರುಪಾಯಿ. ಅಷ್ಟು ಸಾಲದೆನ್ನುವಂತೆ, ರಾಜ್ಯ ಸರ್ಕಾರ ತನ್ನ ಸಲಹಾ ಬೆಲೆಯನ್ನು 2300 ರುಪಾಯಿಗಳಿಗೆ ನಿಗದಿಪಡಿಸಿತ್ತು. ಆದರೆ ಈಗ ಸರ್ಕಾರ ಸಕ್ಕರೆ ಕಂಪೆನಿಗಳಿಗೆ ಆದೇಶ ನೀಡಿರುವುದು 2500 ರುಪಾಯಿ ಕೊಡಬೇಕೆಂದು.
ಈಗಾಗಲೇ ಸಕ್ಕರೆ ಗಿರಣಿಗಳು, ಕೇಂದ್ರ ಸರ್ಕಾರ ಬೆಲೆಯನ್ನು ನಿಗದಿಪಡಿಸಿದ ಅನಂತರ, ಅದನ್ನು ವಿಮರ್ಶಿಸುವ ಅಧಿಕಾರ ರಾಜ್ಯಗಳಿಗೆ ಇಲ್ಲ ಎಂದು ಹೈಕೋರ್ಟಿನಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾಗಿದೆ. ಈ ವಿವಾದ ಬಿಸಿಯಾಗುತ್ತಿರುವಾಗ ಬೇಸಿಗೆಯ ರಜ ಇದ್ದರೂ ಹೈಕೋರ್ಟಿನ ನ್ಯಾಯಮೂರ್ತಿ ಎಸ್. ಕುಮಾರ್ ಅವರು ಒಂದು ಅರ್ಜಿಯನ್ನು ಪರಿಶೀಲಿಸಿ ಸರ್ಕಾರದ ಆದೇಶವನ್ನು ತಡೆಹಿಡಿದಿದ್ದಾರೆ. ಆದರೆ ಈ ರಕ್ಷಣೆ ಸಿಗುವುದು ರೈತರಿಗೆ ಟನ್‌ಗೆ 2100 ರುಪಾಯಿಗಳನ್ನು ಈಗಾಗಲೇ ಪಾವತಿ ಮಾಡಿರುವ ಕಾರ್ಖಾನೆಗಳಿಗೆ ಮಾತ್ರ. ಈ ವಿವಾದಕ್ಕೆ ಮಂಗಳ ಹಾಡಲಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement