ಸರ್ಕಾರಿ ಕಾಮಗಾರಿಗೆ ಕನ್ನಡಿ
ಸರ್ಕಾರಿ ಕಾಮಗಾರಿ ಯಾವ ರೀತಿ ನಡೆಯುತ್ತದೆ ಅನ್ನುವುದಕ್ಕೆ ಕನ್ನಡಪ್ರಭದಲ್ಲಿ ಮೇ 8ರಂದು ಪ್ರಕಟವಾದ 'ರಾಜ್ಯದಲ್ಲಿ 52 ಸಾವಿರ ಶೌಚಾಲಯಗಳೇ ನಾಪತ್ತೆ!' ವರದಿಯೇ ಜೀವಂತ ಸಾಕ್ಷಿ. ಜನಸಾಮಾನ್ಯರನ್ನು ಕತ್ತಲೆಯಲ್ಲಿ ಮೋಸ ಮಾಡುತ್ತಿರುವುದಕ್ಕೆ ಇನ್ನು ಬೇರೆ ಉದಾಹರಣೆ ಬೇಕೆ? ಬಯಲು ಶೌಚಮುಕ್ತ ರಾಜ್ಯವನ್ನಾಗಿಸುವ ಪಣ ತೊಟ್ಟ ನಮ್ಮ ಸರ್ಕಾರ, ಕುಳಿತಲ್ಲೇ ಒಂದಿಷ್ಟು ಅಂಕಿ ಸಂಖ್ಯೆಗಳನ್ನು ಕಲೆ ಹಾಕಿ, ಏನೋ ಅದ್ಭುತ ಕಾರ್ಯ ನಡೆಸುತ್ತಿದ್ದೇವೆಂದು ಬೀಗುತ್ತಿರುವಾಗ ಈಗ ಬಂದ ವರದಿ ವಾಸ್ತವಿಕತೆಯನ್ನು ನಮ್ಮೆಲ್ಲರ ಮುಂದಿಟ್ಟಿದೆ. ಕಾಗದದಲ್ಲೇನೋ, ನಿರ್ಮಲ ಭಾರತ ಅಭಿಯಾನದಡಿ 3,97,732 ಶೌಚಾಲಯಗಳು ನಿರ್ಮಾಣಗೊಂಡಿವೆ. ಆದರೆ ಪರಿಶೀಲನೆ ನಡೆಸಿದ ತಂಡಕ್ಕೆ ಸಿಕ್ಕಿದ್ದು/ಕಂಡಿದ್ದು 3,45,405 ಮಾತ್ರ! ಉಳಿದ 52,327 ಶೌಚಾಲಯ ಇದ್ದಕ್ಕಿದ್ದ ಹಾಗೆ ಮಾಯವಾದವೇ? ವಾಸ್ತವವಾಗಿ, ಹೇಳಿಕೊಂಡಷ್ಟು ಶೌಚಾಲಯ ತಯಾರಾಗಿಯೇ ಇರಲಿಲ್ಲ. ಇಷ್ಟಕ್ಕೇ ವಿಷಯ ಮುಗಿಯಿತೆಂದುಕೊಂಡರೂ ತಪ್ಪಾದೀತು. ನಾಪತ್ತೆಯಾದ ಶೌಚಾಲಯಗಳಿಗೂ ಹಣ ಖರ್ಚಾದ ಲೆಕ್ಕ ಸರ್ಕಾರಕ್ಕೆ ಸೇರಿರಲೇಬೇಕು. ಇದೇ ಅಲ್ಲವೇ ಸರ್ಕಾರಿ ಕೆಲಸದ ಮಜಕೂರು! ಸರ್ಕಾರಿ ಲೆಕ್ಕ?
ಇನ್ನು ಬೇಸರದ ಸಂಗತಿಯೆಂದರೆ, ತಯಾರಾದ ಶೌಚಾಲಯಗಳಲ್ಲಿ ಕನಿಷ್ಠ ಶೇ. 25 ಬಳೆಕೆಗೆ ಅನುಕೂಲವಾದದ್ದಲ್ಲ/ ಬಳಕೆಯಾಗುತ್ತಲೇ ಇಲ್ಲ! ಅಂದರೆ ಕಾಟಾಚಾರಕ್ಕೆ ಒಂದಿಷ್ಟು ಶೌಚಾಲಯದ ರೀತಿಯ ಕಾರ್ಯ ನಡೆದಿರಬೇಕು. ಇದು ಕೇವಲ ಶೌಚಾಲಯದ ವಿಷಯಕ್ಕೇ ಸೀಮಿತವಾದದ್ದಲ್ಲ. ಹಳ್ಳಿಗಳಲ್ಲಂತೂ ಬಡವರಿಗೆ ಕಟ್ಟಿಸಿಕೊಡುವ ಮನೆಗಳು, ಉದ್ಯೋಗ ಖಾತರಿ ಯೋಜನೆ, ಹಳ್ಳಿ-ಅಭಿವೃದ್ಧಿ ಯೋಜನೆ ಅಂತೆಲ್ಲ ಅದೆಷ್ಟೋ ಹಣ ಪೋಲಾಗುತ್ತಿರುವುದು ಅತಿ ಸಾಮಾನ್ಯ. ಪಂಚಾಯತ್ ಹಂತದಿಂದ ಹಿಡಿದು, ತಾಲೂಕು, ಜಿಲ್ಲೆ, ರಾಜ್ಯದ ಮಟ್ಟದವರೆಗೂ ವ್ಯವಸ್ಥಿತ ಅವ್ಯವಸ್ಥೆ ನಡೆಯುತ್ತಲೇ ಇರುತ್ತದೆ. ಇಂಥವರುಗಳೇ ನಮ್ಮ ಪ್ರತಿನಿಧಿಗಳು, ನಮ್ಮನ್ನಾಳುವವರು, ರಾಜ್ಯ ನಡೆಸುವವರು? ಎಲ್ಲಿದೆ ಪಾರದರ್ಶಕತೆ? ಎಲ್ಲಿದೆ ಪ್ರಾಮಾಣಿಕತೆ?
ರಾಜ/ದೇಶ ಪ್ರಗತಿಯಾಗಬೇಕು, ಜನರು ನೆಮ್ಮದಿಯ ಬಾಳು ಸಾಗಿಸಬೇಕು ಅಂತೆಲ್ಲ ಹೇಳುವ ಜನಪ್ರತಿನಿಧಿಗಳು ಯಾರ ಪ್ರಗತಿಗೆ, ನೆಮ್ಮದಿಗೆ ಶ್ರಮಿಸುತ್ತಿದ್ದಾರೆಂಬುದೇ ಇಲ್ಲಿಯವರೆಗೂ ತಿಳಿಯದಾಗಿದೆ. ಈ ರೀತಿಯ ಪದ್ಧತಿಯನ್ನು ನಾವೆಲ್ಲ ಒಪ್ಪಿಕೊಂಡು ಬಿಟ್ಟಿದ್ದೇವೆ. ಅಪ್ಪಿಕೊಂಡೂ ಆಗಿದೆ. ಹಾಗಿದ್ದರೆ, ಯಾರನ್ನು ಹಳಿಯುವುದು? ವ್ಯವಸ್ಥೆಯನ್ನೇ ಅಥವಾ ಈ ರೀತಿಯ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟ ಜನತೆಯನ್ನೇ?
Enough is enough! ಇನ್ನು ಮುಂದೆ ಇದನ್ನು ಸಹಿಸಲಾಗದು. ಜನ ಜಾಗೃತಿಯಾಗಲೇಬೇಕು. ವ್ಯವಸ್ಥೆಯನ್ನು ಬದಲಿಸಲೇಬೇಕು.
-ಶಂಕರನಾರಾಯಣಭಟ್, ಹೊನ್ನಾವರ
ಪಶ್ಚಿಮವಾಹಿನಿ-ಅವ್ಯವಸ್ಥೆಯ ಸಂಗಮ
ಸಹ್ಯಾದ್ರಿಯಲ್ಲಿ ಹುಟ್ಟಿ ಪೂರ್ವಾಭಿಮುಖ ಹರಿಯುತ್ತಿರುವ ಕಾವೇರಿನದಿ ಶ್ರೀರಂಗಪಟ್ಟಣದಲ್ಲೊಂದು ತಿರುವು ಪಡೆದು ಪಶ್ಚಿಮಾಭಿಮುಖವಾಗಿ ಚಲಿಸಿ ಪಶ್ಚಿಮವಾಹಿನಿಯೆಂಬ ಹೆಸರು ಪಡೆದ ಆ ಸ್ಥಳದಲ್ಲಿ ಪಿತೃಕಾರ್ಯ ಮಾಡಿದರೆ ಸದ್ಗತಿಯೆಂಬ ಪ್ರತೀತಿಯಿದೆ. ಆ ಹಿನ್ನೆಲೆಯಲ್ಲಿ ನೂರಾರು ಜನರು ಧಾರ್ಮಿಕ ಕಾರ್ಯನಿರ್ವಹಿಸಲು ಕುಟುಂಬಸಹಿತ ಬರುತ್ತಲೇ ಇರುತ್ತದೆ. ಆದರೆ ಪ್ರಸ್ತುತ ಪಶ್ಚಿಮವಾಹಿನಿಯಲ್ಲಿ ಕುಡಿಯುವ ನೀರಿಲ್ಲದ, ಶೌಚಾಲಯವಿಲ್ಲದ ಹಾಗೂ ಜೀರ್ಣಗೊಂಡ ಕಟ್ಟಡದ ಭಾಗದಿಂದ ಕೂಡಿ ಭಗ್ನಾವಶೇಷದ ಪ್ರತಿರೂಪವಾಗಿ ಕಾಣಿಸುತ್ತಿದೆ. ಅಲ್ಲಿ ಹರಿದು ಬರುವ ಕಾವೇರಿಯು ಕಸ ತ್ಯಾಜ್ಯಗಳಿಂದ ಬೆರೆತು ಅಲ್ಲಿ ಮುಳುಗು ಹಾಕಲು ಸಾಧ್ಯವೇ ಇಲ್ಲವೆನ್ನುವ ಸ್ಥಿತಿಯಿದೆ.
ನಾನು ನನ್ನ ಸಹೋದರ ಸದ್ಗತಿಗಾಗಿ ಅಲ್ಲಿಗೆ ಹೋದಾಗ ಆ ವಲಯದ ಸ್ಥಿತಿ-ಗತಿ ನೋಡಿ ಬೆಚ್ಚಿಬಿದ್ದೆ. ಆ ಕೊಳಕು ನೀರಿನಲ್ಲಿ ಮುಳುಗುವ ಧೈರ್ಯ ಮಾಡಲಾಗಲಿಲ್ಲ. ಆರೋಗ್ಯಕ್ಕೆ ಸವಾಲು ಹಾಕುವ ಹಿಂದೂ ಧಾರ್ಮಿಕ ಕಲಾಪಕ್ಕೆ ಸುಸಜ್ಜಿತ ಅವಕಾಶ ಮಾಡದೆ ಕರ್ನಾಟಕ ರಾಜ್ಯದ ಧಾರ್ಮಿಕದತ್ತಿ ಮುಜರಾಯಿ ಇಲಾಖೆ ಕರ್ತವ್ಯ ಲೋಪ ಮಾಡಿದೆ. ಈ ಇಲಾಖೆಗೋರ್ವ ಮಂತ್ರಿಯಿದ್ದರೂ ಆಸಕ್ತಿ ವಹಿಸದಿರುವುದು ವಿಷಾದನೀಯ. ಸ್ವಯಂ ಧಾರ್ಮಿಕ ದತ್ತಿ ಇಲಾಖಾ ಆಯುಕ್ತರು ಈ ವಲಯವನ್ನು ಪರಿಶೀಲಿಸಿ ಕಂಗಾಲಾಗಿರುವ ಆಸ್ತಿಕ ಜನರಿಗೆ ಭರವಸೆ ಬರುವಂತಹ ಸುಸಜ್ಜಿತ ವ್ಯವಸ್ಥೆಯನ್ನು ಅಳವಡಿಸಲಿ. ಕರ್ನಾಟಕದ ಪ್ರಸಕ್ತ ಸರ್ಕಾರ ಸತ್ವಯುತವಾದ ಆಡಳಿತ ನಡೆಸಲಿ. ಮೂಲಭೂತ ಸೌಕರ್ಯ ಅವಶ್ಯಕ.
-ಕೋಟೇಶ್ವರ ಸೂರ್ಯನಾರಾಯಣರಾವ್, ಬೆಂಗಳೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com