ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಸರ್ಕಾರದ ಕ್ರಮಕ್ಕೆ ಅಭಿನಂದನೆ

Mainashree
Updated On : 27 May 2014, 10:08 am

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ವನ್ನು ಭ್ರಷ್ಟಾಚಾರದಲ್ಲಿ ಆಳವಾಗಿ ಮುಳುಗಿಸಿದ್ದ ಎಲ್ಲರ ವಿರುದ್ಧವೂ ನ್ಯಾಯಸಮ್ಮತವಾಗಿ ಸರ್ಕಾರ ಕಾನೂನು ರೀತಿಯ ಕ್ರಮ ತೆಗೆದುಕೊಂಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ನಾಡಿನ ಎಲ್ಲಾ ಯುವ ಜನಾಂಗದ ಜೊತೆ ನಾನೂ ಕೂಡಾ ಅಭಿನಂದಿಸುತ್ತೇನೆ. 2011ರ ಗೆಜೆಟೆಡ್ ಪ್ರೊಬೆಷನರ್ಸ್ ಸಂದರ್ಶನದ ಭ್ರಷ್ಟಾಚಾರವನ್ನು ನಾನು ಮೊದಲು ಬಹಿರಂಗಗೊಳಿಸಿದಾಗ, ಮುಖ್ಯ ಮಂತ್ರಿ ಸಿದ್ದರಾಮಯನವರು ಈ ವಿಷಯದಲ್ಲಿ ಯಾರ ಮರ್ಜಿಗೂ ಒಳಗಾಗದೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ವಿಶ್ವಾಸಪೂರ್ವಕವಾಗಿ ಮಾತನಾಡಿದ್ದೆ. ಈಗ ಅದು ನಿಜವಾಗಿದೆ. ಮೊಕದ್ದಮೆಗೆ ಸಾಕು ಬೇಕಾದಷ್ಟು ಆಧಾರ ಒದಗಿಸಿರುವ ಸಿಐಡಿ ಪೊಲೀಸ್ ಅಧಿಕಾರಿಗಳೂ ಅಭಿನಂದನೆಗೆ ಅರ್ಹರು. ಹಾಗೆ, 1998, 1999 ಮತ್ತು 2004 ರಲ್ಲಿ ನಡೆದ ಪೂರ್ವಯೋಜಿತ ಭ್ರಷ್ಟಾಚಾರ ಕುರಿತಂತೆ ಈಗಾಗಲೇ ನಮ್ಮ ರಾಜ್ಯದ ಸಿಐಡಿ ವರದಿ ಮತ್ತು ಮೊಕದ್ದಮೆ ಹೂಡುವ ಬಗ್ಗೆ ಸ್ಪಷ್ಟ ಶಿಫಾರಸ್ಸುಗಳು ಈಗಾಗಲೇ ನಾಡಿನ ಜನರ ಮುಂದೆ ಇದೆ. ಈ ಹಗರಣಗಳ ಬಗ್ಗೆ ಕೂಡ ನಮ್ಮ ಸರ್ಕಾರ ತಡಮಾಡದೆ ಕ್ರಮ ತೆಗದುಕೊಳ್ಳಲು ಒತ್ತಾಯಿಸುತ್ತೇನೆ.
ಪ್ರೊ.ಬಿ.ಕೆ.ಚಂದ್ರಶೇಖರ್ , ಉಪಾಧ್ಯಕ್ಷರು-ಕೆ.ಪಿ.ಸಿ.ಸಿ., ಮಾಜಿ ಸಚಿವರು, ಮಾಜಿ ಸಭಾಪತಿ
ಮೂರ್ತಿ ಮಾತು
ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದರೆ ದೇಶಬಿಟ್ಟು ಹೋಗುವುದಾಗಿ ಹೇಳಿರುವ ಡಾ. ಯು.ಆರ್. ಅನಂತಮೂರ್ತಿಯವರ ಅಭಿಪ್ರಾಯ, ಅವರ ವೈಯಕ್ತಿಕ ರಾಜಕೀಯ ಆಲೋಚನೆ ಆಗಿರಬಹುದು. ಆದರೆ ಈ ರೀತಿಯ ವಿವಾದಾಸ್ಪದ ಹೇಳಿಕೆಯ ಔಚಿತ್ಯವೇ ಇಲ್ಲ. ಈಗಂತೂ ನರೇಂದ್ರ ಮೋದಿ ಪ್ರಧಾನಮಂತ್ರಿ ಸ್ಥಾನಕ್ಕೇರುವುದನ್ನು ತಡೆಗಟ್ಟುವುದು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾರು ಪ್ರಧಾನಿ ಆಗಬೇಕು, ಯಾರು ಆಗಬಾರದೆಂಬ ವಿಷಯ ನಿರ್ಣಯವಾಗುವುದು ಮತದಾರರ ಮತದಾನ ಪಡೆದ ಜನಪ್ರತಿನಿಧಿಗಳಿಂದ. ಆದರೆ, ನರೇಂದ್ರ ಮೋದಿ ಪ್ರಧಾನಿ ಆದರೆ ದೇಶಬಿಟ್ಟು ಹೋಗುತ್ತೇನೆ ಎಂಬ ಅನಂತಮೂರ್ತಿಯವರ ಮಾತಿನ ಅರ್ಥ ಮತ್ತು ಉದ್ದೇಶವೇನು? ದೇಶದ ಪಾರ್ಲಿಮೆಂಟ್ ಇವರಂಥ ಲೇಖಕರು ಮತ್ತು ವಿದ್ವಾಂಸರ ಅಭಿಪ್ರಾಯದಂತೆ ನಡೆಯಬೇಕು ಎಂತಲೆ? ನಮ್ಮ ಸಂವಿಧಾನದ ಸಿದ್ಧಾಂತದ ಪ್ರಕಾರ ಅದೆಂದಿಗೂ ಸಾಧ್ಯವಿಲ್ಲ. ಆದರೆ ಅನಂತಮೂರ್ತಿಯರ ಹೇಳಿಕೆಯ ವಿರುದ್ಧ ಅವರ ಮನೆ ಮುಂದೆ ಪ್ರತಿಭಟಿಸಿ, ಭಯ ಮತ್ತು ಕಾನೂನು ಸುವ್ಯವಸ್ಥೆಗೆ ಅಪಾಯ ಉಂಟು ಮಾಡುವುದು ಸೂಕ್ತವಲ್ಲ.
-ಡಾ. ಮ.ನ. ಜವರಯ್ಯ, ಮೈಸೂರು.
ಕಾಂಗ್ರೆಸ್ ಆತ್ಮವಿಮರ್ಶೆ ಮಾಡಿಕೊಳ್ಳಲಿ
ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ದೇಶದೆಲ್ಲೆಡೆ ಕಾಂಗ್ರೆಸ್ ಹೀನಾಯವಾಗಿ ಸೋತು ಹೋಗಿದೆ. ಸಮೀಕ್ಷೆಗಳನ್ನೆಲ್ಲಾ ತಲೆಕೆಳಗು ಮಾಡಿರುವ ಮತದಾರ ಬದಲಾವಣೆ ಬಯಸಿದ್ದಾನೆ. ಅದರಲ್ಲೂ ಕರ್ನಾಟಕದಲ್ಲಿನ ಕಾಂಗ್ರೆಸ್‌ನ ಸ್ಥಿತಿ ಹೇಳತೀರದಾಗಿದೆ. ಅನ್ನ ಭಾಗ್ಯ ಕೈಹಿಡಿಯಲಿಲ್ಲ. ಕ್ಷೀರ ಭಾಗ್ಯ , ಶಾದಿಭಾಗ್ಯ ಯಶ ಕಾಣಲಿಲ್ಲ. ಅಷ್ಟಕ್ಕೂ ಮುಖ್ಯಮಂತ್ರಿಗಳು ಕೇವಲ ಒಂದು ವರ್ಗದವರಿಗೆ ಅನುಕೂಲವಾಗುವ ಅನ್ನಭಾಗ್ಯದಿಂದ ಉಳಿದ ವರ್ಗದವರನ್ನು ನಿರ್ಲಕ್ಷಿಸಿದ್ದು. ಕೇವಲ ಎಸ್ಸಿ, ಎಸ್ಟಿ ಸಾಲ ಮನ್ನಾ ಇವು ಬರಿ ಗಿಮಿಕ್ ಅಷ್ಟೆ. ಅಲ್ಲದೇ ಇಡೀ ಕಾಂಗ್ರೆಸ್ ಪ್ರಚಾರದಲ್ಲಿ ಯಾವಾಗಲೂ  ಮೋದಿಯವರ ಮತ್ತು ಬಿಜೆಪಿಯ ದೂಷಣೆ, ನಿಂದನೆ, ಅವಾಚ್ಯ ಶಬ್ದಗಳಿಗೆ ನಿರತರಾಗಿದ್ದು ಮತದಾರನಿಗೆ ಅಸಹ್ಯ ಹುಟ್ಟಿಸಿತು. ಜೊತೆಗೆ ಪ್ರಚಾರಕ್ಕೆ ಸಾಹಿತಿಗಳನ್ನು ಕೂಡ ಸೇರಿಸಿಕೊಂಡಿದ್ದು, ಇಲ್ಲಸಲ್ಲದ ಆರೋಪ ಮಾಡಿದ್ದು ಕಾಂಗ್ರೆಸ್ ಸೋಲಿಗೆ ಕಾರಣವಾಯಿತು. ಹೊಂದಾಣಿಕೆ ಕೊರತೆ ಬಹಳವಾಗಿದ್ದು ಅದನ್ನು ಸರಿಪಡಿಸಿಕೊಂಡಿದ್ದರೆ 100 ಸೀಟುಗಳನ್ನಾದರೂ ಪಡೆಯಬಹುದಿತ್ತು. ಕಾಂಗ್ರೆಸ್‌ನವರು ಬೇರೆಯವರನ್ನು ದೂರುವುದನ್ನು ಬಿಟ್ಟು ತಮ್ಮ ಮನೆಯನ್ನು ಸರಿಪಡಿಸಿಕೊಳ್ಳಲಿ. ಮುಂದಿನ ಚುನಾವಣೆಗೆ ಮತದಾರನ ಒಲಿಸಿಕೊಳ್ಳಲು ಪ್ರಯತ್ನಿಸಿ ಮುಖ್ಯಮಂತ್ರಿಗಳೇ.
-ಕೋರಾ ವಿಜಯಕುಮಾರ್, ತುಮಕೂರು


ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement