ಬೆಂಗಳೂರು: ನಾನು ಕಳೆದ 32 ವರ್ಷಗಳಿಂದ ಮತವನ್ನೇ ಚಲಾಯಿಸಿಲ್ಲ..! ಇದು ಯಾವುದೇ ಸಾಮಾನ್ಯ ವ್ಯಕ್ತಿಯಲ್ಲ. ಬದಲಿಗೆ, ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್) ಪೊಲೀಸ್ ಮಹಾನಿರ್ದೇಶಕ ಗಿರಿ ಪ್ರಸಾದ್ ಹೇಳಿದ ಮಾತು.
ದೇಶದ ಗಡಿ ಭಾಗ ಹಾಗೂ ಕಠಿಣ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸೇನಾ ಯೋಧರು ಹಾಗೂ ಸಿಆರ್ ಪಿಎಫ್ ಪಡೆಯ ಸಿಬ್ಬಂದಿ ಸದಾ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುತ್ತಾರೆ. ಮತದಾನ ಮಾಡಲು ಅವರಿಗೆ ಅವಕಾಶವೇ ಸಿಗುತ್ತಿರಲಿಲ್ಲ. ಅಂಚೆ ಮತದಾನ ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಮರೀಚಿಕೆಯಾಗಿತ್ತು. ಆದರೆ, 2018ರಲ್ಲಿ ಸಶಸ್ತ್ರ ಪಡೆಗಳ ಸಿಬ್ಬಂದಿಗೂ ಸೇವಾ ಮತದಾನ ಕಲ್ಪಿಸಿದ ಪರಿಣಾಮ ಇದೀಗ ತಮ್ಮ ಆಯ್ಕೆಯ ಅಭ್ಯರ್ಥಿಗೆ ಮತಚಲಾಯಿಸುವ ಅವಕಾಶ ದೊರೆತಿದೆ. ಚುನಾವಣಾ ಕರ್ತವ್ಯದ ಜೊತೆಗೆ ಮತದಾನ ಮಾಡಿದ ಧನ್ಯತಾ ಭಾವವು ಈ ಸಿಬ್ಬಂದಿ ವರ್ಗದಲ್ಲಿ ಕಂಡುಬರುತ್ತಿದೆ.
ಈ ಕುರಿತು ರಾಜ್ಯ ಚುನಾವಣಾ ಆಯೋಗ ಸೇವಾ ಮತದಾರರಿಗೆ ಅರಿವು ಮೂಡಿಸಲು ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಗಿರಿ ಪ್ರಸಾದ್, ಪ್ರತಿ ಚುನಾವಣೆಯಲ್ಲೂ ತಾವು ತಮ್ಮ ಕ್ಷೇತ್ರದಿಂದ ದೂರದ ಪ್ರದೇಶದಲ್ಲಿ ಕರ್ತವ್ಯದಲ್ಲಿರುತ್ತಿದ್ದೆವು. ಆದ್ದರಿಂದ ಒಮ್ಮೆ ಕೂಡ ಮತದಾನಕ್ಕೆ ಅವಕಾಶ ದೊರೆತಿಲ್ಲ. ಕಳೆದ 32 ವರ್ಷಗಳಿಂದ ತಮ್ಮ ಹಕ್ಕನ್ನೇ ಚಲಾಯಿಸಿಲ್ಲ. ಈಗ ಚುನಾವಣಾ ಆಯೋಗ ಅಂಚೆ ಮತದಾನ ವಿಧಾನ ಜಾರಿಗೊಳಿಸಿರುವುದು ಅನುಕೂಲಕರವಾಗಿದೆ ಎಂದು ಶ್ಲಾಘಿಸಿದರು.
ಆದರೆ, ಈ ಅಂಚೆ ಮತದಾನ ಸುಲಭವೇನಲ್ಲ. ಇದು ದೇಶದ ಭದ್ರತೆಗೆ ಸಂಬಂಧಿಸಿದ ವಿಷಯವಾದ್ದರಿಂದ ಸೇನಾ ಯೋಧರು ಕಠಿಣ ಪ್ರಕ್ರಿಯೆಗಳನ್ನು ಪಾಲಿಸಿ ಅಂಚೆ ಮೂಲಕ ಮತದಾನ ಮಾಡಬೇಕಾಗುತ್ತದೆ. ಇದರಿಂದ ಅನೇಕ ಮತದಾರರು ಮತದಾನದಿಂದ ದೂರವುಳಿಯುವ ಸಾಧ್ಯತೆಯಿದೆ. ಇಲ್ಲವೇ, ತಾಂತ್ರಿಕ ಸಮಸ್ಯೆಗಳಿಂದ ಮತದಾನ ತಿರಸ್ಕೃತಗೊಳ್ಳುವ ಸಂಭವವೂ ಹೆಚ್ಚಿರುತ್ತವೆ. ಹಾಗೆಂದು, ನಿಯಮಗಳನ್ನು ಸಡಿಲಗೊಳಿಸಲು ಸಾಧ್ಯವಿಲ್ಲ ಎಂದು ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಅಂಚೆ ಅಥವಾ ಸೇವಾ ಮತದಾರರು ಯಾರು
ಪ್ರಜಾಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 20ರ ಉಪ ಸೆಕ್ಷನ್ (8)ರ ಅನ್ವಯ ಕೇಂದ್ರ ಶಸಸ್ತ್ರ ಪಡೆಗಳ ಸಿಬ್ಬಂದಿ, ಅಧಿಕಾರಿಗಳು. ಸೇನಾ ಕಾಯ್ದೆ 1950ರ ಸೆಕ್ಷನ್ 46 ಅನ್ವಯವಾಗುವ ಸೇನಾ ಸಿಬ್ಬಂದಿ. ರಾಜ್ಯದ ಹೊರ ಭಾಗಗಳಲ್ಲಿ ಪೊಲೀಸ್ ಶಸಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯದವರು ಹಾಗೂ ಕೇಂದ್ರ ಸರ್ಕಾರದ ಸೇವೆ ಮೇರೆಗೆ ವಿದೇಶಗಳಲ್ಲಿ ರಾಯಭಾರಿ ಕಚೇರಿಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸೇವಾ ಮತದಾರರು ಎಂದು ಹೇಳಲಾಗುತ್ತದೆ.
ಸೇವಾ ಮತದಾರರಾಗಿ ನೋಂದಾಯಿಸಿಕೊಳ್ಳಲು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ಫಾರಂ-2ರಲ್ಲಿ ಶಸಸ್ತ್ರ ಪಡೆಗಳಲ್ಲಿ ಬೇರೆ ರಾಜ್ಯಗಳಲ್ಲಿ ಸೇವೆಯಲ್ಲಿರುವವರು ಫಾರಂ-2ಎರಲ್ಲಿ ಹಾಗೂ ವಿದೇಶಗಳಲ್ಲಿ ಕೇಂದ್ರ ಸರ್ಕಾರದ ಸೇವೆಯಲ್ಲಿರುವವರು ಫಾರಂ-3 ಭರ್ತಿ ಮಾಡಿ ಆನ್‍ಲೈನ್‍ನಲ್ಲಿ ನೋಂದಾಯಿಸಿಕೊಳ್ಳಬೇಕು.
ಸೇವಾ ಮತದಾರರು ಮತದಾನ ಮಾಡಲು ಸಿ-ಡಾಕ್ ನೆರವಿನೊಂದಿಗೆ ಕೇಂದ್ರ ಚುನಾವಣಾ ಆಯೋಗವು `ಇಲೆಕ್ಟ್ರಾನಿಕ್ ಟ್ರಾನ್ಸ್‍ಮಿಟೆಡ್ ಬ್ಯಾಲೆಟ್' (ಇಟಿಪಿಬಿಎಸ್) ವ್ಯವಸ್ಥೆ ರೂಪಿಸಿದೆ. ಸೇವಾ ಮತದಾರರಾಗಿ ನೋಂದಾಯಿಸಿಕೊಂಡವರಿಗೆ ತಮ್ಮ ಕ್ಷೇತ್ರದ ಹೊರ ಭಾಗದಿಂದಲೂ ಮತದಾನ ಮಾಡಲು ಇದರಿಂದ ಅವಕಾಶವಾಗಲಿದೆ. ನೋಂದಣಿ ಮಾಡಿಕೊಂಡ ಸೇವಾ ಮತದಾರರ ಎಲೆಕ್ಟ್ರಾನಿಕ್ ಬ್ಯಾಲೆಟ್‍ನ್ನು ಸಂಬಂಧಪಟ್ಟ ರೆಕಾರ್ಡ್ ಅಧಿಕಾರಿ ಮತ್ತು ಯೂನಿಟ್ ಅಧಿಕಾರಿಗೆ ಕಳಿಸಲಾಗುತ್ತದೆ. ಅವರು ಒಟಿಪಿ ಹಾಕಿ ಅದನ್ನು ಡೌನ್‍ಲೋಡ್ ಮಾಡಿ ಸಂಬಂಧಪಟ್ಟ ಸೇವಾ ಮತದಾರನಿಗೆ ಕೊಡಬೇಕು. ಅದನ್ನು ಭರ್ತಿ ಮಾಡಿ ಸೇವಾ ಮತದಾರರು ಲಕೋಟೆಯಲ್ಲಿ ಸಂಬಂಧಪಟ್ಟ ಚುನಾವಣಾಧಿಕಾರಿಗೆ ಕಳುಹಿಸಬೇಕು.
ಸೇವಾ ಮತದಾರರು ಇಟಿಪಿಬಿಎಸ್ ಮೂಲಕ ಮತದಾನ ಮಾಡಬಹುದು. ಇದಲ್ಲದೇ ಅವರು `ಪ್ರಾಕ್ಸಿ'ಯನ್ನು ನೇಮಿಸಬಹುದು. ಅಂದರೆ, ತಮ್ಮ ಬದಲಿಗೆ ಸೇವಾ ಮತದಾರರು ತಮ್ಮ ಆಪ್ತರು, ಹೆಂಡತಿ, ತಂದೆ-ತಾಯಿಯನ್ನು ಬದಲಿ ಪ್ರತಿನಿಧಿ (ಪ್ರಾಕ್ಸಿ) ಎಂದು ಗುರುತಿಸಬೇಕು. ಆ ಬದಲಿ ಪ್ರತಿನಿಧಿ ವಕೀಲರಿಂದ ನೋಟರಿ ಮಾಡಿಸಿಕೊಂಡು ಮತಗಟ್ಟೆಗೆ ಹೋಗಿ ಸೇವಾ ಮತದಾರರ ಪರ ಮತ ಹಾಕಬಹುದು. ಸೇವಾ ಮತದಾರರಾಗಿ ನೊಂದಾಯಿಸಿಕೊಂಡವರು ಸಾಮಾನ್ಯ ಮತದಾರರಂತೆ ಮತಗಟ್ಟೆಗೆ ಹೋಗಿ ಮತ ಹಾಕಲು ಅವಕಾಶವಿರುವುದಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos