ದೇಶ

ಪ್ರಧಾನಿ ಮೋದಿ ದಿನದ 18 ಗಂಟೆ ಕೆಲಸ ಮಾಡುತ್ತಾರೆ, ರಾಹುಲ್ ಏನು ಮಾಡ್ತಾರೆ ? ಅಮಿತ್ ಶಾ

Nagaraja AB

ಪಲಾಮು:ಪ್ರಧಾನಿ ನರೇಂದ್ರ ಮೋದಿ ಅವರು ದಿನದ 18 ಗಂಟೆ ಕೆಲಸ ಮಾಡುತ್ತಾರೆ. ಆದರೆ, ಕಾಂಗ್ರೆಸ್  ಅಧ್ಯಕ್ಷ ರಾಹುಲ್ ಗಾಂಧಿ ಎರಡು ಮೂರು ತಿಂಗಳಿಗೊಮ್ಮೆ ರಜೆಯ ಮಜಾ ಮಾಡಲು ಹೋಗುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್  ಶಾ ಹೇಳಿದ್ದಾರೆ.

ಜಾರ್ಖಂಡ್ ನ ಪಲಾಮುನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ನಾನು ಕಳೆದ 20 ವರ್ಷಗಳಿಂದ  ಗುಜರಾತಿನಲ್ಲಿ ಇದ್ದಾಗಿನಿಂದಲೂ ಮೋದಿ ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ.ಅವರು ಕೆಲಸ ಮಾಡುವಾಗ ರಜೆ ತೆಗೆದುಕೊಂಡಿಲ್ಲ. ಆದರೆ, ರಾಹುಲ್ ಬಾಬಾ, ತಮ್ಮ ಪಕ್ಷದ ಕಾರ್ಯಕರ್ತರು, ನೇತಾರರು ಅಷ್ಟೇ ಅಲ್ಲದೇ ಅಮ್ಮನನ್ನು ಬಿಟ್ಟು ಮೂರು ತಿಂಗಳಿಗೊಮ್ಮೆ ವಿದೇಶದಲ್ಲಿ ರಜೆಯ ಮಾಜಾ ಮಾಡಲು ಹೋಗುತ್ತಾರೆ ಎಂದರು.

ಕಾಂಗ್ರೆಸ್ ಅಧಿಕಾರವಧಿಯಲ್ಲಿ ಯಾವಾತ್ತೂ ಕೂಡಾ ಪಾಕಿಸ್ತಾನಕ್ಕೆ ತಿರುಗೇಟು ನೀಡಿರಲಿಲ್ಲ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭಾರತದ ಯೋಧ ಹೇಮರಾಜ್ ಅವರ ದೇಹವನ್ನು ಪಾಕ್ ಯೋಧರು ಛಿದ್ರಗೊಳಿಸಿದ್ಧ ಘಟನೆಯನ್ನು ನೆನೆಪಿಸಿಕೊಂಡರೆ ಈಗಲೂ ಮನಸ್ಸಿಗೆ ತುಂಬಾ ನೋವಾಗುತ್ತದೆ. ಹೀಗಿರುವಾಗಲೂ ಯುಪಿಎ ಏನೂ ಮಾಡಲಿಲ್ಲ, ಎಂದಿನಂತೆ ಮನಮೋಹನ್ ಸಿಂಗ್ ಮೌನವಾಗಿದ್ದರು ಎಂದ ಅಮಿತ್ ಸಾ, ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಕಾಶ್ಮೀರದಲ್ಲಿ 370 ವಿಧಿಯನ್ನು ರದ್ದು ಮಾಡಲು ಬಯಸುವುದಿಲ್ಲ. ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ರಾಷ್ಟ್ರೀಯ ಜನತಾದಳ ಈ ವಿಚಾರದಲ್ಲಿ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. ಆದರೆ, ನಮ್ಮ ನಿಲುವು ಸ್ಪಷ್ಟವಾಗಿದೆ.ದೇಶದೆಲ್ಲೆಡೆ ಮೋದಿ ಪರ ಅಲೆಯಿದ್ದು, ಮತ್ತೆ ಅವರೇ ಪ್ರಧಾನಿಯಾಗಲಿದ್ದಾರೆ ಎಂದು ಅಮಿತ್ ಶಾ ತಿಳಿಸಿದರು.

SCROLL FOR NEXT