ದೇಶ

ವಾರಣಾಸಿ: ಮೋದಿ ವಿರುದ್ಧ ಬಿಎಸ್ಎಫ್ ಮಾಜಿ ಯೋಧನನ್ನು ಕಣಕ್ಕಿಳಿಸಿದ ಸಮಾಜವಾದಿ ಪಕ್ಷ

Lingaraj Badiger
ಲಖನೌ: ಅಚ್ಚರಿಯ ಬೆಳವಣಿಗೆಯಲ್ಲಿ, ಸಮಾಜವಾದಿ ಪಕ್ಷ ವಾರಣಾಸಿ ಲೋಕಸಭಾ ಕ್ಷೇತ್ರದ ತನ್ನ ಅಭ್ಯರ್ಥಿಯನ್ನು ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಿದ್ದು, ಗಡಿ ಭದ್ರತಾ ಪಡೆ ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತದೆ ಎಂದು ಆರೋಪಿಸಿದ್ದ ಬಿಎಸ್ಎಫ್ ಮಾಜಿ ಯೋಧ ತೇಜ್‌ ಬಹದ್ದೂರ್‌ ಯಾದವ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಣಕ್ಕಿಳಿಸಿದೆ.
ಸಮಾಜವಾದಿ ಪಕ್ಷ ಈ ಮುಂಚೆ ಶಾಲಿನಿ ಯಾದವ್ ವಾರಣಾಸಿ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿತ್ತು. ಆದರೆ ಇಂದು ದಿಢೀರ್ ಅಭ್ಯರ್ಥಿಯನ್ನು ಬದಲಾವಣೆ ಮಾಡಿದ್ದು, ಹರಿಯಾಣದ ರೆವಾರಿ ನಿವಾಸಿ ಮಾಜಿ ಬಿಎಸ್ಎಫ್ ಯೋಧ ತೇಜ್‌ ಬಹದ್ದೂರ್‌ ಯಾದವ್‌ ತನ್ನ ಅಧಿಕೃತ ಅಭ್ಯರ್ಥಿ ಎಂದು ಪ್ರಕಟಿಸಿದೆ.
ಗಡಿ ಭದ್ರತಾ ಪಡೆ ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತದೆ ಎಂದು ಸೆಲ್ಫಿ ವಿಡಿಯೊ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದ ತೇಜ್‌ ಬಹದ್ದೂರ್‌ ಯಾದವ್‌, ಪ್ರಧಾನಿ ಮೋದಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. 
ಬಿಎಸ್‌ಎಫ್‌ ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ವಿಡಿಯೊ ಬಹಿರಂಗಪಡಿಸಿದಾಗ ಯಾದವ್‌ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.
SCROLL FOR NEXT