ನವದೆಹಲಿ: ಬಡವರಿಗೆ ವಾರ್ಷಿಕ ಕನಿಷ್ಠ 72 ಸಾವಿರ ಆದಾಯ ಖಾತ್ರಿ ಯೋಜನೆ ಜಾರಿಗೊಳಿಸುವ ಭರವಸೆ ನೀಡಿದ ನಂತರ ಬಿಜೆಪಿ ಸೋಲು ಖಚಿತವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ಹೇಳಿದ್ದಾರೆ.
ಇಂದು ಪಕ್ಷದ ಒಬಿಸಿ ಘಟಕದ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕಳೆದ ಐದು ವರ್ಷಗಳ ಬಿಜೆಪಿ ಆಡಳಿತದಲ್ಲಿ ಕೋಟ್ಯಾಧಿಪತಿ ಉದ್ಯಮಿಗಳಿಗೆ ಲಕ್ಷಾಂತರ ಕೋಟಿ ರುಪಾಯಿ ನೀಡಲಾಗಿದೆ. ಆದರೆ ದೇಶದ ಬಡ ಜನರಿಗೆ 15 ಲಕ್ಷ ರುಪಾಯಿ ನೀಡುವುದಾಗಿ ಸುಳ್ಳು ಭರವಸೆ ನೀಡಿದ್ದರು ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ನಿಮ್ಮ ಖಾತೆಗೆ 15 ಲಕ್ಷ ರುಪಾಯಿ ಹಾಕಲು ಸಾಧ್ಯವಿಲ್ಲ. ಆದರೆ ದೇಶದ ಶೇ.20ರಷ್ಟು ಬಡವರಿಗೆ ವಾರ್ಷಿಕ 72 ಸಾವಿ ರು. ನೀಡುತ್ತೇವೆ. ಇದರಿಂದ 25 ಕೋಟಿ ಜನರನ್ನು ಬಡತನ ಮುಕ್ತಗೊಳಿಸಬಹುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನಾನು ಮೋದಿಯಲ್ಲ. ಹೀಗಾಗಿ 15 ಲಕ್ಷ ಕೊಡುತ್ತೇನೆ ಎಂಬ ಸುಳ್ಳು ಭರವಸೆ ನೀಡುವುದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 72 ಸಾವಿರ ರುಪಾಯಿ ನೀಡುವುದು ಖಚಿತ ಎಂದರು.
ಕಾಂಗ್ರೆಸ್ ಈ ಹೊಸ ಯೋಜನೆಯಿಂದ ಪ್ರಧಾನಿ ಮೋದಿಗೆ ಭಯ ಶುರುವಾಗಿದೆ. ನೀವು ಇಂದು ಅವರ ಮುಖ ನೋಡಿದ್ದೀರಾ? ನಾನು ನೋಡಿದೆ. ಅವರ ಮುಖದಲ್ಲಿ ಭಯ ಇತ್ತು. ಮೋದಿ ಸರ್ಕಾರ ಈ ಲೋಕಸಭೆ ಚುನಾವಣೆಯ ನಂತರ ಅಧಿಕಾರ ಕಳೆದುಕೊಳ್ಳಲಿದೆ ಎಂದರು.