ನವದೆಹಲಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಪ್ರಧಾನಿ ಮೋದಿಗೆ ಮತ್ತೊಂದು ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿದೆ.
ಹಾಲಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ದಾಖಲಾಗಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣಗಳ ಪೈಕಿ ಪ್ರಧಾನಿ ಮೋದಿ ಅವರಿಗೆ ಚುನಾವಣಾ ಆಯೋಗ ಮತ್ತೊಂದು ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿದೆ.
ಚೌಕಿದಾರ್ ಚೋರ್ ಹೈ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಉತ್ತರ ಪ್ರದೇಶದಲ್ಲಿ ನಡೆದ ರ್ಯಾಲಿಯಲ್ಲಿ ತಿರುಗೇಟು ನೀಡಿದ್ದ ಪ್ರಧಾನಿ ಮೋದಿ, ರಾಜೀವ್ ಗಾಂಧಿ ಭ್ರಷ್ಟಾಚಾರಿ ನಂಬರ್ ಒನ್ ಎಂದು ತಿರುಗೇಟು ನೀಡಿದ್ದರು. ಈ ಸಂಬಂಧ ಮೇ 6 ರಂದು ಕಾಂಗ್ರೆಸ್ ನಾಯಕರಾಗ ಅಭಿಷೇಕ್ ಮನು ಸಿಂಘ್ವಿ, ರಾಜೀವ್ ಶುಕ್ಲಾ, ಸಲ್ಮಾನ್ ಖುರ್ಷೀದ್ ನೇತೃತ್ವದ ನಿಯೋಗ ಕೇಂದ್ರ ಚುನಾವಣಾ ಆಯೋಗಕ್ಕೆ ನೀತಿ ಸಂಹಿತೆ ಉಲ್ಲಂಘನೆ ದೂರು ನೀಡಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ಆಯೋಗ ಮಂಗಳವಾರ ಪ್ರಧಾನಿ ಮೋದಿ ನೀತಿ ಸಂಹಿತೆ ಉಲ್ಲಂಘಿಸಿಲ್ಲ ಎಂದು ಕ್ಲೀನ್ ಚಿಟ್ ನೀಡಿದೆ. 'ಮೋದಿ ಭಾಷಣದಲ್ಲಿ ಯಾವುದೇ ರೀತಿಯ ಅವಹೇಳನಕಾರಿ ಪದ ಬಳಕೆಯಾಗಿಲ್ಲ. ಅಲ್ಲದೆ ಆಯೋಗ ವಿಧಿಸಿರುವ ನೀತಿ ಸಂಹಿತೆಯ ಉಲ್ಲಂಘನೆ ಕೂಡ ಕಂಡುಬಂದಿಲ್ಲ. ಹೀಗಾಗಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಅದರೊಂದಿಗೆ ಪ್ರಧಾನಿ ಮೋದಿ ವಿರುದ್ಧ ದಾಖಲಾಗಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಪೈಕಿ ಒಟ್ಟು 9 ಪ್ರಕರಣಗಳಲ್ಲಿ ಅವರಿಗೆ ಕ್ಲೀನ್ ಚಿಟ್ ದೊರೆತಂತಾಗಿದೆ. ಈ ಹಿಂದೆ ಮಹಾರಾಷ್ಟ್ರದ ಲಾತುರ್ ಜಿಲ್ಲೆಯಲ್ಲಿ ನಡೆದಿದ್ದ ಭಾಷಣದಲ್ಲೂ ಪ್ರಧಾನಿ ಮೋದಿ ಬಾಲಾಕೋಟ್ ವಾಯುದಾಳಿಯನ್ನು ಪ್ರಸ್ತಾಪಿಸಿದ್ದರು. ಈ ಪ್ರಕರಣದಲ್ಲೂ ಈ ಹಿಂದೆ ಮೋದಿಗೆ ಆಯೋಗ ಕ್ಲೀನ್ ಚಿಟ್ ನೀಡಿತ್ತು. ನಿನ್ನೆಯಷ್ಟೇ ಏಪ್ರಿಲ್ 23ರಂದು ಪ್ರಧಾನಿ ಮೋದಿ ಅಹ್ಮದಾಬಾದ್ ನಲ್ಲಿ ನಡೆದಿದ್ದ ರೋಡ್ ಷೋ ಸಂದರ್ಭದ ಭಾಷಣ ಮತ್ತು ಏಪ್ರಿಲ್ 9ರಂದು ಕರ್ನಾಟಕದ ಚಿತ್ರದುರ್ಗದ ಭಾಷಣಗಳಿಗೆ ಸಂಬಂಧಿಸಿದಂತೆ ಆಯೋಗ ಕ್ಲೀನ್ ಚಿಟ್ ನೀಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics