ದೇಶ

ಬಿಜೆಪಿಗೆ ಆರ್ಶೀವಾದ ಮಾಡದ ಅಯ್ಯಪ್ಪಸ್ವಾಮಿ, ಕೇರಳದಲ್ಲಿ ಅರಳಲಿಲ್ಲ 'ಕಮಲ'

Lingaraj Badiger
ತಿರುವನಂತಪುರ: 2019 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೇಶಾದ್ಯಂತ ಭರ್ಜರಿ ಗೆಲುವು ಸಾಧಿಸಿದೆ. ಆದರೆ ದೇವರ ನಾಡು ಕೇರಳದಲ್ಲಿ ಮಾತ್ರ ಬಿಜೆಪಿ ಖಾತೆ ತೆರೆಯುವಲ್ಲಿ ವಿಫಲವಾಗಿದೆ.
ಶಬರಿಮಲೆ ಅಯ್ಯಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ ಡಿಎಫ್ ಸರ್ಕಾರ ಜಾರಿಗೆ ತಂದಾಗ ಕೇರಳ ಬಿಜೆಪಿ ಅದನ್ನು ತೀವ್ರ ವಿರೋಧಿಸಿತ್ತು. ಅಲ್ಲದೆ ಸುಪ್ರೀಂ ನಿರ್ಧಾರದಿಂದ ಹಿಂದೂ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ ಎಂದು ಹೇಳಿತ್ತು. ಹಿಂದೂಗಳ ಮತ ಸೆಳೆದು ಕೇರಳದಲ್ಲಿ ಕಮಲ ಅರಳಿಸುವ ಕೇಸರಿ ಪಡೆಯ ಯತ್ನ ಮತದಾರ ಪ್ರಭು ಮನ್ನಣೆ ನೀಡಿಲ್ಲ.
ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅಲೆ ಇದ್ದರೂ ಕೇರಳದಲ್ಲಿ ಮಾತ್ರ ಈ ಬಾರಿಯೂ ಖಾತೆ ತೆರೆಯುವಲ್ಲಿ ಎನ್‌ಡಿಎ ವಿಫಲವಾಗಿದೆ. ಇದರೊಂದಿಗೆ ನರೇಂದ್ರ ಮೋದಿ ಸರ್ಕಾರ ವಿರುದ್ಧವಾಗಿ ಅಲೆಯೆಬ್ಬಿಸಿದ ಕೆಲವೇ ಕೆಲವು ರಾಜ್ಯಗಳಲ್ಲಿ ಕೇರಳ ಕಾಣಿಸಿಕೊಂಡಿದೆ. 
ಈ ಬಾರಿ ಕೇರಳದಲ್ಲಿ ಆಡಳಿತಾರೂಢ ಎಲ್‌ಡಿಎಫ್ ಸರ್ಕಾರದ ವಿರುದ್ಧ ಯುಡಿಎಫ್ ಅಲೆ ಅಬ್ಬರಿಸಿದ್ದು, 20 ಲೋಕಸಭಾ ಕ್ಷೇತ್ರಗಳ ಪೈಕಿ ಯುಡಿಎಫ್ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಪೈಕಿ ಕಾಂಗ್ರೆಸ್ 15, ಎರಡು ಕ್ಷೇತ್ರಗಳಲ್ಲಿ ಮುಸ್ಲಿಂ ಲೀಗ್ ಹಾಗೂ ಕೇರಳ ಕಾಂಗ್ರೆಸ್, ಮತ್ತು ಆರ್ ಎಸ್ ಪಿ ತಲಾ ಒಂದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.
ಇನ್ನು ಅಮೇಠಿಯಲ್ಲಿ ಸೋಲಿನ ಮುಖಭಂಗ ಅನುಭವಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೇರಳದ ವಯನಾಡಿನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದಾರೆ.
SCROLL FOR NEXT