ದೇಶ

16ನೇ ಲೋಕಸಭೆ ವಿಸರ್ಜನೆಗೆ ಕೇಂದ್ರ ಸಂಪುಟ ಸಭೆ ನಿರ್ಣಯ ಅಂಗೀಕಾರ

Nagaraja AB

ನವದೆಹಲಿ: ಲೋಕಸಭಾ ಚುನಾವಣೆ ಮುಗಿದ ನಂತರ ಹೊಸ ಸರ್ಕಾರ ರಚನೆಯ ಪ್ರಕ್ರಿಯೆಗಳು ನಡೆಯುತ್ತಿದ್ದು, 16ನೇ ಲೋಕಸಭೆ ವಿಸರ್ಜನೆಗೆ ಕೇಂದ್ರ ಸಚಿವ ಸಂಪುಟ  ಇಂದು ನಿರ್ಣಯ ಅಂಗೀಕರಿಸಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಗಿದೆ.ನಂತರ ತಮ್ಮ ಸಂಪುಟದ ಸಹೋದ್ಯೋಗಿಗಳೊಂದಿಗೆ ರಾಷ್ಟ್ರಪತಿಗಳನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ರಾಜೀನಾಮೆಯನ್ನು ಅಂಗೀಕರಿಸಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್,  ಹೊಸ ಸರ್ಕಾರ ರಚನೆಯಾಗುವರೆಗೂ ನೀವೆ ಮುಂದುವರೆಯುವಂತೆ ಮೋದಿಗೆ ಸೂಚಿಸಿದ್ದಾರೆ ಎಂದು ರಾಷ್ಟ್ರಪತಿ ಭವನದ ಮೂಲಗಳಿಂದ ತಿಳಿದುಬಂದಿದೆ.
ಮೇ 30 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎರಡನೇ ಬಾರಿಗೆ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ. ಈ ಮಧ್ಯೆ  ಮೇ 25 ರಂದು ಎನ್ ಡಿಎ ಸಭೆ ನಡೆಯಲಿದೆ.ಈ ಸಭೆಯಲ್ಲಿ  ಎನ್ ಡಿಎ ಮೈತ್ರಿಕೂಟದ ನೂತನ ಸಂಸದರು ಔಪಚಾರಿಕವಾಗಿ ಮೋದಿ ಅವರನ್ನು ನಾಯಕನಾಗಿ ಆಯ್ಕೆ ಮಾಡಲಿದ್ದಾರೆ ನಂತರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸರ್ಕಾರ ರಚನೆಗೆ ಮೋದಿ ಅವರನ್ನು ಆಹ್ವಾನಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ನೂತನ ಸಚಿವರ ಪದಗ್ರಹಣ ಸಮಾರಂಭದ ದಿನ ಇನ್ನೂ ನಿಗದಿಯಾಗಿಲ್ಲ ಎಂದು ಸರ್ಕಾರದ ವಕ್ತಾರ ಸಿತನ್ಶು ಕೌರ್  ಟ್ವೀಟ್ ಮಾಡಿದ್ದಾರೆ.
ಚುನಾವಣಾ ಆಯೋಗದ ಅಧಿಕೃತ ಮಾಹಿತಿ ಪ್ರಕಾರ ಬಿಜೆಪಿ 303 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಎನ್ ಡಿಎ ಮೈತ್ರಿಕೂಟ 352  ಸದಸ್ಯರನ್ನು ಹೊಂದಿದೆ.
SCROLL FOR NEXT