ದೇಶ

ಬಿಜೆಪಿ, ಎನ್‍ಡಿಎ ಸಂಸದೀಯ ಪಕ್ಷದ ನಾಯಕನಾಗಿ ನರೇಂದ್ರ ಮೋದಿ ಆಯ್ಕೆಗೆ ಸಿದ್ಧತೆ

Nagaraja AB

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಎನ್‍ಡಿಎ ಸಂಸದೀಯ ಪಕ್ಷದ ನಾಯಕನಾಗಿ ಆಯ್ಕೆ ಮಾಡಲು ವೇದಿಕೆ ಸಿದ್ಧಗೊಂಡಿದೆ.ಹೊಸದಾಗಿ ಆಯ್ಕೆಯಾಗಿರುವ ಬಿಜೆಪಿ ನೇತೃತ್ವದ ಎನ್‍ಡಿಎ ಸಂಸದರು  ಇಂದು ರಾಷ್ಟ್ರ ರಾಜಧಾನಿಯಲ್ಲಿ ಸಭೆ ಸೇರಿ ಸಂಸದೀಯ ನಾಯಕನನ್ನು ಆಯ್ಕೆ ಮಾಡಲಿದ್ದಾರೆ.

ಇಂದು  ಸಂಜೆ ಸಂಸತ್‍ನ ಸೆಂಟ್ರಲ್‍ ಹಾಲ್‍ನಲ್ಲಿ ಸಭೆ ನಡೆಯಲಿದೆ. ಎನ್‍ಡಿಎ ಸಂಸದರು, ಬಿಜೆಪಿ ಸಂಸದರು ಪ್ರತ್ಯೇಕವಾಗಿ ಸಭೆ ಸೇರಿ 2014ರಲ್ಲಿ ನಡೆದಂತೆ ಸಂಸದೀಯ ಪಕ್ಷದ ನಾಯಕನಾಗಿ ಪ್ರಧಾನಿ ಮೋದಿ ಅವರನ್ನು ಮರು ಆಯ್ಕೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

2014ರಲ್ಲಿ ಮೋದಿ ಸೆಂಟ್ರಲ್‍ ಹಾಲ್‍ನಲ್ಲಿ ಸಂಸದರನ್ನು ಉದ್ದೇಶಿಸಿ ಭಾಷಣ ಮಾಡುವಾಗ ಭಾವನಾತ್ಮಕವಾಗಿ ಮಾತನಾಡಿದ್ದರು. ದೇವಸ್ಥಾನದ ಮುಂದೆ ತಲೆ ಇಟ್ಟು ಗೌರವ ಸಲ್ಲಿಸುವಂತೆ ಸಂಸತ್‍ನ ಮೆಟ್ಟಿಲಿಗೆ ಶಿರಬಾಗಿ ಗೌರವ ಸಲ್ಲಿಸಿದ್ದರು.

ಈ ಬಾರಿಯೂ ಸಂಸದೀಯ ನಾಯಕನಾಗಿ ಆಯ್ಕೆಯಾದ ಬಳಿಕ ಮೋದಿ ಭಾಷಣ ಮಾಡುವ ಸಾಧ್ಯತೆ ಇದೆ.ಎನ್‍ಡಿಎಯ 350ಕ್ಕೂ ಹೆಚ್ಚು ಸಂಸದರು ಈ ಬಾರಿ ಆಯ್ಕೆಯಾಗಿದ್ದಾರೆ. ಬಿಜೆಪಿ 303 ಸಂಸದರನ್ನು ಹೊಂದಿದೆ.ಎನ್‍ಡಿಎ ಮಿತ್ರ ಪಕ್ಷಗಳಾದ ಶಿವಸೇನೆ 18, ಜೆಡಿಯು 16, ಎಲ್‍ಜೆಪಿ 6 ಮತ್ತು ಅಕಾಲಿದಳ ಇಬ್ಬರು ಸಂಸದರನ್ನು ಹೊಂದಿದೆ.

ನಂತರ ಸಂಜೆ  7 ಗಂಟೆ ಸುಮಾರಿಗೆ ಎನ್ ಡಿಎ ನಾಯಕರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಇದಾದ ಬಳಿಕ ರಾತ್ರಿ 8 ಗಂಟೆ ಸುಮಾರಿಗೆ ನೂತನ ಸರ್ಕಾರ ರಚನೆಗೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬಳಿ ಹಕ್ಕೊತ್ತಾಯ ಮಂಡಿಸಲಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡುವ ಮುನ್ನ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲಿದ್ದಾರೆ. ರಾತ್ರಿ 8-30 ರ ಸುಮಾರಿಗೆ ಮಾಧ್ಯಮಗಳೊಂದಿಗೆ ಮೋದಿ ಮಾತನಾಡುವ ಸಾಧ್ಯತೆ ಇದೆ.

SCROLL FOR NEXT