ಕರ್ನಾಟಕ

ಅಡ್ವಾಣಿಯವರಿಗೆ ಆದ ಗತಿಯೇ ಯಡಿಯೂರಪ್ಪ ಅವರಿಗಾಗಲಿದೆ: ಡಿ.ಕೆ.ಸುರೇಶ್

Sumana Upadhyaya
ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ್‌ ಜೋಷಿ ಅವರಿಗೆ ಆದ ಪರಿಸ್ಥಿತಿಯೇ ಚುನಾವಣೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೂ ಆಗಲಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್‌ ಭವಿಷ್ಯ ನುಡಿದಿದ್ದಾರೆ.
ಕನಕಪುರ ತಾಲೂಕಿನ ದೊಡ್ಡಾಲಹಳ್ಳಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರನೇ ಬಾರಿಗೆ ಈ ಕ್ಷೇತ್ರದಿಂದ ಕಣಕ್ಕಿಳಿದಿದ್ದೇನೆ. ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ತಮ್ಮ ಕ್ಷೇತ್ರದ ಮತದಾರರು. ರಾಜ್ಯ ಸಮ್ಮಿಶ್ರ ಸರ್ಕಾರ, ಹಿಂದಿನ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳು ತಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆಯ ಬಳಿಕ ಬಿಜೆಪಿ ಸರ್ಕಾರ ಬರಲಿದೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರು ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ. ಕಳೆದ 9 ತಿಂಗಳುಗಳಿಂದಲೂ ಇದೇ ರೀತಿ ಹೇಳುತ್ತಿದ್ದಾರೆ. ಬಹುಶಃ ಚುನಾವಣೆಯ ಬಳಿಕ ಬಿ.ಎಸ್‌.ಯಡಿಯೂರಪ್ಪ ಅವರು ಅದೇ ಸ್ಥಾನದಲ್ಲಿ ಇರುತ್ತಾರೆ ಎಂಬ ನಂಬಿಕೆ ತಮಗಿಲ್ಲ. ಅಡ್ವಾಣಿ ಹಾಗೂ  ಮುರಳಿ ಮನೋಹರ ಜೋಷಿ ಅವರಿಗೆ ಆದ ಪರಿಸ್ಥಿತಿಯೇ ಯಡಿಯೂರಪ್ಪ ಅವರಿಗೂ ಆಗಲಿದೆ ಎಂದು ಹೇಳಿದರು.
ಅವರ ಸಹೋದರ ಸಚಿವ ಡಿ.ಕೆ.ಶಿವಕುಮಾರ್ ಕೂಡ ಇದೇ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿ, ಹಿಂದಿನಿಂದಲೂ ಶುದ್ಧ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ಜನರು ನಮ್ಮ ಮೇಲೆ ಉಪಕಾರ ಸ್ಮರಣೆ ಇಟ್ಟುಕೊಂಡಿದ್ದಾರೆ. ಕಣ್ಣಿಗೆ ಕಾಣುವ ಅಭಿವೃದ್ಧಿ ಮಾಡಿದ್ದೇವೆ. ಜನ ನಮ್ಮನ್ನು ಕೈಬಿಡುವುದಿಲ್ಲ, ಸಹೋದರ ಡಿ.ಕೆ.ಸುರೇಶ್ ಪರವಾಗಿ ತಾವು ಪ್ರಚಾರಕ್ಕೆ ಹೋಗಿಲ್ಲ, ಇಲ್ಲಿನ ಕಾರ್ಯಕರ್ತರು, ಮುಖಂಡರೇ ಪ್ರಚಾರ ನಡೆಸಿದ್ದಾರೆ ಎಂದು ಹೇಳಿದರು.
SCROLL FOR NEXT