ಕರ್ನಾಟಕ

ಮೊದಲ ಹಂತದ ಚುನಾವಣೆ: 340 ಅಭ್ಯರ್ಥಿಗಳಿಂದ 452 ನಾಮಪತ್ರ, ಸಲ್ಲಿಕೆ

Raghavendra Adiga
ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಗೆ ಇಂದು (ಮಂಗಳವಾರ) ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದೆ. ಈ ವೇಳೆ ಮೊದಲ ಹಂತದಲ್ಲಿ 14 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು ಇದಕ್ಕಾಗಿ 340 ಅಭ್ಯರ್ಥಿಗಳು 452 ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.
ಇಂದಿನಿಂದ ನಾಮಪತ್ರ ಪರಿಶೀಲನೆ ನಡೆಯಲಿದೆ, ಮಾರ್ಚ್ 29ಕ್ಕೆ ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಮೊದಲ ಹಂತದ ಚುನಾವಣೆ ಮತದಾನ ಏಪ್ರಿಲ್ 18ರಂದು ಮತದಾನ ನಡೆಯಲಿದೆ.
ಬೆಂಗಳೂರು ವಾರ್ತಾಸೌಧದಲ್ಲಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಜೀವ್ ಕುಮಾರ್ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಅತ್ಯಧಿಕ ನಾಮಪತ್ರಗಳು ಸಲ್ಲಿಕೆಯಾಗಿದೆ.ಹಾಸನ ಕ್ಷೇತ್ರದಲ್ಲಿ ಅತಿ ಕಡಿಮೆ ಸಂಖ್ಯೆಯ ನಾಮಪತ್ರ ಸಲ್ಲಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹಾಸನದಲ್ಲಿ 10 ಅಭ್ಯರ್ಥಿಗಳಿಂದ 18 ನಾಮಪತ್ರ ಸಲ್ಲಿಕೆಯಾಗಿದೆ. ಬೆಂಗಳೂರು ದಕ್ಷಿಣದಲ್ಲಿ 37 ಅಭ್ಯರ್ಥಿಗಳಿಂಡ 46 ನಾಮಪತ್ರ ಸಲ್ಲಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 
ಇನ್ನು ರಾಜ್ಯದ ಹೈವೋಲ್ಟೇಜ್ ಕ್ಷೇತ್ರವೆಂದೇ ಹೇಳಲಾಗಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುತ್ರ ಸ್ಪರ್ಧಿಸಿರುವ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚುವರಿ ಭದ್ರತೆ ಒದಗಿಸಲು ಚಿಂತನೆ ನಡೆಸುವುದಾಗಿ ಕುಮಾರ್ ಹೇಳೀದ್ದಾರೆ.
ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾದ ದಿನದಿಂದ ಇಂದಿನವರೆಗೆ 6.80 ಕೋಟಿ ನಗದು, 4.99 ಕೋಟಿ ಲೀಟರ್‍ಗೂ ಅಧಿಕ ಮದ್ಯ, 120 ಕೆ.ಜಿ ಮಾದಕ ವಸ್ತು, ಗಾಂಜಾ, 162 ಗ್ರಾಂ ತೂಕದ ಸುಮಾರು 3.5 ಕೋಟಿ ಮೌಲ್ಯದ ಚಿನ್ನಾಭರಣ, 34 ಕೆ.ಜಿ ಮೌಲ್ಯದ ಬೆಳ್ಳಿ, 43 ಲಕ್ಷದ  ಇತರೆ ಗೃಹೋಪಯೋಗಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದುವರೆಗೆ 26,700 ಜಾಮೀನು ರಹಿತ ಪ್ರಕರಣಗಳು ವರದಿಯಾಗಿದೆ ಎಂದು ಕುಮಾರ್ ವಿವರಿಸಿದ್ದಾರೆ.
SCROLL FOR NEXT