ಎಚ್ ಡಿ ಕುಮಾರಸ್ವಾಮಿ - ದರ್ಶನ್
ಬೆಂಗಳೂರು: "ಯಾರೋ ನಾಲ್ಕೈದು ಮಂದಿ ಅಭಿಮಾನಿಗಳು ಸೇರಿ ' ಡಿ ಬಾಸ್ ' ಅಂದ ಕೂಡಲೇ ಅದು ರಾಜ್ಯದ ಆರೋವರೆ ಕೋಟಿ ಜನ ನೀಡಿದ ಬಿರುದು ಎಂದು ಬೀಗುವುದು ಸರಿಯಲ್ಲ" ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ, ನಟ ದರ್ಶನ್ ವಿರುದ್ಧ ಕಿಡಿ ಕಾರಿದ್ದಾರೆ.
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ಅವರ ಪರವಾಗಿ ಪ್ರಚಾರ ನಡೆಸುತ್ತಿರುವ ದರ್ಶನ್, "ಡಿ ಬಾಸ್ ಬಿರುದು ಅಭಿಮಾನಿಗಳು ಕೊಟ್ಟಿರುವ ಭಿಕ್ಷೆ" ಎಂದು ಹೇಳಿದ್ದರು.
ಚಿತ್ರನಟರ ವಿರುದ್ಧ ತಮ್ಮ ಟೀಕಾಪ್ರಹಾರ ಮುಂದುವರೆಸಿರುವ ಕುಮಾರಸ್ವಾಮಿ ಇಂದು ಜೆಪಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, "ನನ್ನ ಮಗನಿಗೂ ಕೂಡ ಯುವರಾಜ ಎಂದು ಬಿರುದು ಕೊಟ್ಟಿದ್ದಾರೆ. ಅವನು ಈಗ ಯುವರಾಜನಾ? ಅವನಿಗೆ ಯಾರೋ ನಾಲ್ಕು ಜನ ಅಭಿಮಾನಿಗಳು ಬಿರುದುಕೊಟ್ಟಿದ್ದಾರೆ. ಹಾಗೆಂದು ನಾವು ದೊಡ್ಡದಾಗಿ ಮೆರೆಯಲು ಆಗುತ್ತದೆಯೇ" ಎಂದು ದರ್ಶನ್ ಗೆ ಪ್ರಶ್ನಿಸಿದ್ದಾರೆ.
ಸುಮಲತಾ ಅವರು ಮಂಡ್ಯದಲ್ಲಿ ಅಂಬರೀಶ್ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ತಾವು ಅಂಬರೀಷ್ ಹೆಸರನ್ನು ಎಲ್ಲಿಯೂ ಬಳಸಿಲ್ಲ. ನಾನು ದುಡಿಮೆಯ ಹೆಸರಿನಲ್ಲಿ ಮತ ಕೇಳುತ್ತಿದ್ದೇನೆ. ಎಲ್ಲಿಯೂ ಅಂಬರೀಶ್ ಹೆಸರು ಬಳಸಿಲ್ಲ ಎಂದು ಹೇಳಿದರು.
ಸಕ್ರಿಯ ಉಪಗ್ರಹವೊಂದನ್ನು ಬಾಹ್ಯಾಕಾಶದಲ್ಲಿ ಲೈವ್ ಆಗಿ ಹೊಡೆದುರುಳಿಸುವ ಮೂಲಕ ಭಾರತ ಅತ್ಯಂತ ಅಪರೂಪದ ಸಾಧನೆ ಮಾಡಿರುವುದನ್ನು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ನಡೆಯನ್ನು ಟೀಕಿಸಿದ ಕುಮಾರಸ್ವಾಮಿ, ಇದು ವಿಜ್ಞಾನಿಗಳ ಸಾಧನೆ. ಅದಕ್ಕಾಗಿಯೇ ವಿಜ್ಞಾನಿಗಳ ಪಡೆ ಇದೆ. ಅವರು ತಮ್ಮ ಕೆಲಸವನ್ನು ಯಾವುದೇ ಸರ್ಕಾರ ಇದ್ದರೂ ಸಮರ್ಥವಾಗಿ ನಿಭಾಯಿಸುತ್ತಾರೆ. ಇದನ್ನು ಹೇಳಿಕೊಂಡು ಲೋಕಸಭೆ ಚುನಾವಣೆಗೆ ಲಾಭ ಪಡೆದುಕೊಳ್ಳಬೇಕೆ? ಎಂದು ಪ್ರಶ್ನಿಸಿದರು.
ಐವತ್ತು ವರ್ಷಗಳ ಹಿಂದೆ ಚಾಲನೆ ಸಿಕ್ಕಿರುವುದನ್ನು ಮೋದಿ ಅವರು ತಮ್ಮದೇ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಇದು ಮಹತ್ವಕೊಡುವಂತದ್ದೆನಲ್ಲ. ಪ್ರಧಾನಿ ಮೋದಿ ಹೇಳಿದ್ದನ್ನೆಲ್ಲಾ ಮಾಧ್ಯಮಗಳು ಬಿಂಬಿಸುವುದು ಸೂಕ್ತವಲ್ಲ ಎಂದು ಕುಮಾರಸ್ವಾಮಿ ಹೇಳಿದರು.