ಕರ್ನಾಟಕ

ನಿಖಿಲ್ ನಾಮಪತ್ರ ಕಾನೂನು ಬದ್ಧವಾಗಿಲ್ಲ, ಸಿಎಂ ಅಧಿಕಾರ ದುರ್ಬಳಕೆ- ಸುಮಲತಾ ಆರೋಪ

Nagaraja AB

ಮದ್ದೂರು:ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ - ಜೆಡಿಎಸ್ ಮೈತ್ರಿ  ಅಭ್ಯರ್ಥಿ ನಿಖಿಲ್ ನಾಮಪತ್ರ ಕಾನೂನು ಬದ್ಧವಾಗಿಲ್ಲ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಪ್ರಯತ್ನ ನಡೆದಿದೆ. ಮುಖ್ಯಮಂತ್ರಿ  ಎಚ್. ಡಿ. ಕುಮಾರಸ್ವಾಮಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಆರೋಪಿಸಿದ್ದಾರೆ.

ಹೆಮ್ಮನಹಳ್ಳಿಯ ಚೌಡೇಶ್ವರಿ ದೇವಿಯ ದರ್ಶನ ಪಡೆದ ನಂತರ ಮಾತನಾಡಿದ ಸುಮಲತಾ, ನಿಖಿಲ್ ನಾಮಪತ್ರ ಗೊಂದಲ ವಿಚಾರದಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮುಖ್ಯಮಂತ್ರಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.ಕುಮಾರಸ್ವಾಮಿ ಅವರೇ ಜಿಲ್ಲಾಧಿಕಾರಿಯನ್ನು ಮನೆಗೆ ಕರೆಯಿಸಿಕೊಂಡು ಖುದ್ದು ಅವರೇ ಮಾತನಾಡಿದ್ದಾರೆ ಎನ್ನಲಾಗಿದೆ. ಈ ವಿಚಾರದಲ್ಲಿ ನಾವು ಹೋರಾಟ ಮಂದುವರೆಸುತ್ತೇವೆ ಎಂದು ಹೇಳಿದರು.

ಐಟಿ ದಾಳಿ ವಿಚಾರವಾಗಿ ಮಾತನಾಡಿದ ಸುಮಲತಾ, ನಾನೇನು ಅಧಿಕಾರದಲ್ಲಿಲ್ಲ, ಐಟಿ ಇಲಾಖೆಯಲ್ಲಿ ನಾನೇನು ಆಗಿಲ್ಲ. ಅಂದು ನಾಮಪತ್ರ ಸಲ್ಲಿಕೆ ದಿನ ಅವರು ದುಡ್ಡು ಹಂಚುತ್ತಿದ್ದನ್ನು ನೋಡಿ ಐಟಿಯವರು ದಾಳಿ ಮಾಡಿದ್ದಾರೆ ಅದಕ್ಕೆ ನಾನು ಹೇಗೆ ಕಾರಣವಾಗ್ತೀನಿ ಎಂದು ಪ್ರಶ್ನಿಸಿದರು.

ಐಟಿ  ರೇಡ್ ಮಾಡಲು ಮೂರು ತಿಂಗಳಿನಿಂದ ಒಂದು ವರ್ಷದವರೆಗೂ  ನಿಗಾ ಇಟ್ಟು ದಾಳಿ ಮಾಡಲಾಗುತ್ತದೆ.  ಸಿನಿಮಾ ನಟರ ಮೇಲೆ ದಾಳಿಯಾದಾಗ ಅವರು ಸಹಕಾರ ನೀಡಲಿಲ್ಲವೇ ? ನಿಮಗೆ ಮಾತ್ರ ಐಟಿ ರಿಯಾಯಿತಿ ಕೊಡಬೇಕೆ   ಆ ಮಟ್ಟಕ್ಕೆ ನಾನು ಹೋಗಲ್ಲ, ಆ ದಾರಿಗೆ ನಾನು ಹೋಗಲ್ಲ, ಬೇಕಾದ್ರೆ ಅವರೇ ನನ್ನ ದಾರಿಗೆ ಬರಲಿ  ಎಂದು ಸವಾಲು ಹಾಕಿದರು.

ಅಂಬರೀಷ್ ಅನ್ನುವ ಶಕ್ತಿ ನನ್ನೊಂದಿಗೆ ಇಲ್ಲ ಎನ್ನುವ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ.ಇತ್ತೀಚಿನ ದಿನಗಳಲ್ಲಿ ಮಾತು ಮಿತಿ ಮೀರಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಆದಿಯಾಗಿ ಎಲ್ಲರೂ ನನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಅಂಬರೀಷ್ ಇದ್ದಾಗ ಎಲ್ಲರೂ ಸುಮ್ಮನಿದ್ದರು. ಅವರು ಎಷ್ಟು ಚುನಾವಣೆಗಳನ್ನು ನಡೆಸಿದ್ದಾರೆ.  ಆಗ ಇವರೆಲ್ಲಾ ಏನೂ ಮಾತನಾಡುತ್ತಿರಲಿಲ್ಲ. ಈಗ  ಆ ಒಂದು ಶಕ್ತಿ ನನ್ನೊಂದಿಗಿಲ್ಲ ಅನ್ನೋ ಕಾರಣಕ್ಕೆ ಮಹಿಳೆ ಅನ್ನೋದು ನೋಡದೆ ಮಾತನಾಡುತ್ತಿದ್ದಾರೆ ಎಂದು ಸುಮಲತಾ  ಟೀಕೆ ಮಾಡಿದರು.

SCROLL FOR NEXT