ಕರ್ನಾಟಕ

ಸೋಲಿನ ಆತ್ಮಾವಲೋಕನ: ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕೈ ನಾಯಕರ ಕಸರತ್ತು

Shilpa D
ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶದ ಸೋಲಿನಿಂದ ತೀವ್ರ ಕಂಗಾಲಾಗಿರುವ ಕಾಂಗ್ರೆಸ್‌ ನಾಯಕರು ಈಗ ಹೇಗಾದರೂ ಮಾಡಿ ಸರ್ಕಾರ ಉಳಿಸಿಕೊಳ್ಳಲು ಮತ್ತು ಅಸಮಾಧಾನಿತ ಶಾಸಕರನ್ನು ಸಮಾಧಾನ ಪಡಿಸಲು ಕಸರತ್ತು ಆರಂಭಿಸಿದ್ದಾರೆ. 
ಉಪಮುಖ್ಯಮಂತ್ರಿ  ಡಾ ಜಿ ಪರಮೇಶ್ವರ್ ನಿವಾಸದಲ್ಲಿ  ಕೈ ನಾಯಕರ ಆತ್ಮಾವಲೋಕನ ಸಭೆ ಇಂದು ನಡೆಸಲಾಗಿದ್ದು, ಸಭೆಯಲ್ಲಿ ಸಚಿವರು ಮತ್ತು ಹಲವು ಮುಖಂಡರು ಭಾಗಿಯಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಹಲವು ಕ್ಷೇತ್ರಗಳಲ್ಲಿ  ಆದ ರಾಜಕೀಯ ಹಿನ್ನಡೆ ಬಗ್ಗೆ  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌, ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಮಾಹಿತಿ ಪಡೆದುಕೊಂಡಿದ್ದು, ಸೋಲಿಗೆ ಸಚಿವರು ತಮ್ಮದೇ ಆದ ಕಾರಣ ಕೊಟ್ಟಿದ್ದಾರೆ ಎನ್ನಲಾಗಿದೆ. 
ಮೋದಿ ಅಲೆ ಎಲ್ಲ ಕಡೆ ಕೆಲಸ ಮಾಡಿದ್ದರಿಂದ ನಾವು ಹೀನಾಯವಾಗಿ ಸೋಲಬೇಕಾಯಿತು ಎಂದು ಸಚಿವರು ಹೇಳಿದ್ದಾರೆ ಎನ್ನಲಾಗಿದೆ. ರೋಷನ್‌ ಬೇಗ್ ಬಹಿರಂಗ ಬಂಡಾಯ, ಅಸಮಾಧಾನದ ಬಗ್ಗೆಯೂ ಚರ್ಚೆ ನಡೆಯಿತು. 
ಬೆಂಗಳೂರು ಉತ್ತರದಲ್ಲಿ ಕೃಷ್ಣಬೈರೇಗೌಡ  ಅವರಿಗಿಂತಲೂ ಉತ್ತಮ‌ ಅಭ್ಯರ್ಥಿ ಯಾರು ? ಈ ಸೋಲಿನಲ್ಲಿ ನಮ್ಮವರ ಅತಿಯಾದ ವಿಶ್ವಾಸವೇ ಮುಳುವಾಯಿತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ.  ಮಲ್ಲಿಕಾರ್ಜುನ ಖರ್ಗೆ ಸೋಲಿಗೆ ಸಭೆಯಲ್ಲಿ ನಾಯಕರು ಬೇಸರ ವ್ಯಕ್ತಪಡಿಸಿದರು. ಅಲ್ಲಿ ನಮ್ಮ ನಾಯಕರಿಂದಲೇ ತಪ್ಪಾಗಿದೆ ಎಂಬ ಮಾತು ಸಭೆಯಲ್ಲಿ ಕೇಳಿಬಂದಿದೆ. 
ವೀರಪ್ಪ ಮೊಯ್ಲಿ ಸೋಲಿಗೆ ಅವರ ನಿಲುವೇ  ಕಾರಣ, ಕೋಲಾರದಲ್ಲಿ ಜೆಡಿಎಸ್ ಜತೆಗೆ ಕಾಂಗ್ರೆಸ್ ನಾಯಕರು ವಿರೋಧಿ ಕೆಲಸ ಮಾಡಿ ಸೋಲಿಸಿದರು ಎಂದು ಚರ್ಚೆಯ ವೇಳೆ ಪ್ರಸ್ತಾಪವಾಗಿದೆ ಎನ್ನಲಾಗಿದೆ.
ಬಳ್ಳಾರಿ ಸೋಲಿನ ಹಿನ್ನೆಲೆಯಲ್ಲಿ ಸಚಿವರಾದ  ಇ ತುಕಾರಾಂ, ಪಿ ಟಿ ಪರಮೇಶ್ವರ್ ನಾಯ್ಕ್ ಅವರನ್ನು  ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ತರಾಟೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.    ಸಚಿವ ಡಿ ಕೆ ಶಿವಕುಮಾರ್ ಎರಡು ದಿನ ಬಳ್ಳಾರಿಯಲ್ಲೇ ಬಿಡಾರ ಹೂಡಿದ್ದರೆ ನಮಗೆ ಅನುಕೂಲ ಆಗುತ್ತಿತ್ತು, ಬರೀ 50 ಸಾವಿರ ಮತದಲ್ಲಿ ಸೋಲಾಗಿದೆ. ಶಿವಕುಮಾರ್ ಶಿವಮೊಗ್ಗದಲ್ಲಿ ಹೆಚ್ಚು ಸಮಯ ಕಳೆದಿದ್ದು ತಪ್ಪಾಯಿತು ಎಂದು ನಾಯಕರು ವಿವರಣೆ ಕೊಟ್ಟರು ಎನ್ನಲಾಗಿದೆ.
ಇವೆಲ್ಲದರ ನಡುವೆ ಬೆಂಗಳೂರು ಗ್ರಾಮಾಂತರ  ಕ್ಷೇತ್ರದಲ್ಲಿ ಗೆದ್ದ ಡಿ ಕೆ ಸುರೇಶ್ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸಿದರು. ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ಅನಿವಾರ್ಯ ಜೆಡಿಎಸ್ ಕಾಂಗ್ರೆಸ್ ಎರಡೂ ಪಕ್ಷಕ್ಕೂ ಇದೆ. ಆಪರೇಷನ್ ಕಮಲ ಮಾಡುವುದು ಪಕ್ಕಾ. ಹೀಗಾಗಿ ಶಾಸಕರನ್ನು ಉಳಿಸಿಕೊಳ್ಳಲು ಎಲ್ಲರೂ ಶ್ರಮ ಹಾಕಬೇಕು ಎಂದು ನಾಯಕರು ಹೇಳಿದರು ಎನ್ನಲಾಗಿದೆ. 
ಉತ್ತರ ಕನ್ನಡ, ಬಿಜಾಪುರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದು ನಮಗೆ ಬಹಳ ಹಿನ್ನಡೆಯಾಯಿತು ಎಂಬ ಅಸಮಾಧಾನ ಸಭೆಯಲ್ಲಿ ವ್ಯಕ್ತವಾಯಿತು ಎಂದು ತಿಳಿದು ಬಂದಿದೆ.
SCROLL FOR NEXT