ಕರ್ನಾಟಕ

ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಗೆ ಸಿದ್ಧರಾಮಯ್ಯರನ್ನು ದೂರುವುದು ಸರಿಯಲ್ಲ; ಖರ್ಗೆ

Srinivasamurthy VN
ಕಲಬುರಗಿ: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಸಿದ್ದರಾಮಯ್ಯ ಅವರನ್ನು ದೂರುವುದು ಸರಿಯಲ್ಲ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ತಮ್ಮ ತವರು ಜಿಲ್ಲೆ  ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ  ಮಾಜಿ ಶಿಷ್ಯ, ಬಿಜೆಪಿಯ ಡಾ. ಉಮೇಶ್ ಜಾಧವ್  ಎದುರು  ಪರಾಭವಗೊಂಡ  ದಿನದ ನಂತರ  ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, 'ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ  ಕಾರಣಗಳನ್ನು ಪರಾಮರ್ಶಿಸಲು ನಾಳೆ ದೆಹಲಿಯಲ್ಲಿ  ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಪಕ್ಷದ ಗತ ವೈಭವ ಮರುಕಳಿಸಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
'ದೇಶದ ಅತಿ ಹಳೆಯ ಪಕ್ಷ ವಾಗಿರುವ ಕಾಂಗ್ರೆಸ್  ಕೆಟ್ಟ ದಿನಗಳನ್ನು ಅನುಭವಿಸುತ್ತಿದ್ದು, ಪಕ್ಷದ ಕಳಪೆ ಸಾಧನೆಗೆ ಯಾರೊಬ್ಬರನ್ನು ದೂರುವುದರಲ್ಲಿ ಪ್ರಯೋಜನವಿಲ್ಲ. ಅದರ ಬದಲು  ಬೇರು ಮಟ್ಟದಿಂದ ಪಕ್ಷವನ್ನು ಕಟ್ಟುವ ಹಾಗೂ  ಮುಂದಿನ ಬಾರಿ ಅಧಿಕಾರಕ್ಕೆ ಬರುವಂತೆ ಮಾಡುವ ಕ್ರಮಗಳನ್ನು ಆರಂಭಿಸಬೇಕು. ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದೆ ಎಂದು ವಿಶ್ವಾಸ ಕಳೆದುಕೊಳ್ಳುವುದಿಲ್ಲ, ಪಕ್ಷದ ತತ್ವ ಸಿದ್ಧಾಂತಗಳೊಂದಿಗೆ ಮುಂದೆ ಸಾಗಲಿದ್ದೇವೆ. ನಾಳಿನ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಸೋಲಿಗೆ ಕಾರಣಗಳೇನು ಎಂಬುದನ್ನು ಪರಾಮರ್ಶಿಸಿ, ಪಕ್ಷದ ಕಾರ್ಯಕರ್ತರಿಗೆ ಸಕಾರಾತ್ಮಕ ಸಂದೇಶ ರವಾನಿಸಲಿದ್ದೇವೆ ಎಂದರು.
ಅಂತೆಯೇ ರಾಜ್ಯದಲ್ಲಿ ಚುನಾವಣಾ ಸೋಲಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ ಅವರನ್ನು ದೂರುವುದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಖರ್ಗೆ ಉತ್ತರಿಸಿದರು.
ಅಭಿವೃದ್ಧಿ ಕುರಿತ ಪಕ್ಷದ ನಿಲುವನ್ನು ರಾಹುಲ್ ಗಾಂಧಿ ಸುಸ್ಪಷ್ಟವಾಗಿ ದೇಶದ ಮುಂದೆ ಮನವರಿಕೆ ಮಾಡಿಕೊಟ್ಟಿದ್ದರು, ಆದರೆ ಜನರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ. ಮತದಾರರು ನೀಡಿರುವ ತೀರ್ಪನ್ನು ಗೌರವಿಸಿ, ಒಪ್ಪಿಕೊಳ್ಳುತ್ತೇವೆ ಎಂದರು.
ಪ್ರಧಾನಿ ನರೇಂದ್ರ ಮೋದಿ  ದೇಶದ ಅಭಿವೃದ್ಧಿ ವಿಷಯದಲ್ಲಿ ಒಳ್ಳೆಯ ಸಾಧನೆಯೇನು ಮಾಡಿಲ್ಲ. ಆದರೆ, ಚುನಾವಣಾ ವೇಳೆ ಭಾವನಾತ್ಮಕ ವಿಷಯಗಳನ್ನು ಜನರ ಮುಂದಿಟ್ಟು ಮತ ಕೋರಿದ್ದರು ಎಂದು ಖರ್ಗೆ ವಿಶ್ಲೇಷಿಸಿದರು.
SCROLL FOR NEXT