ಕರ್ನಾಟಕ

ಮಂಡ್ಯ ರಣಕಣ; ಸುಮಲತಾ ಹೆಸರಿನ ಅಭ್ಯರ್ಥಿಗಳು ಗಳಿಸಿದ ಮತಗಳೆಷ್ಟು?

Srinivasamurthy VN
ಮಂಡ್ಯ: ತೀವ್ರ ಕುತೂಹಲ ಕೆರಳಿಸಿದ್ದ ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಸಾಕಷ್ಟು ಅಚ್ಚರಿ ಫಲಿತಾಂಶಗಳು ಹೊರಬಂದಿವೆ. ಈ ಪೈಕಿ ಅತೀ ಹೆಚ್ಚು ಸುದ್ದಿಗೆ ಗ್ರಾಸವಾಗಿದ್ದ ಮತ್ತು ತೀವ್ರ ಜಿದ್ದಾ ಜಿದ್ದಿನಿಂದ ಕೂಡಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿಯೂ ಕೆಲ ಅಚ್ಚರಿ ಬೆಳವಣಿಗೆಗಳಾಗಿವೆ.
ಸುಮಲತಾ ಅಂಬರೀಷ್ ಮತ್ತು ಸಿಎಂ ಎಚ್ ಡಿಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮೂಲಕ ವ್ಯಾಪಕ ಚರ್ಚೆಗೆ ಕಾರಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ರನ್ನು ಮಣಿಸಲು ಸಾಕಷ್ಟು ಕಸರತ್ತು ನಡೆದಿತ್ತು. ಇದಕ್ಕೆ ಇಂಬು ನೀಡುವಂತೆ ಸುಮಲತಾ ಅಂಬರೀಷ್ ಅವರ ವಿರುದ್ಧ ನಾಲ್ಕು ಮಂದಿ ಸುಮಲತಾ ಎಂಬ ಹೆಸರಿನ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅಲ್ಲದೆ ಈ ಹೆಸರುಗಳ ನಡುವೆಯೇ ಸುಮಲತಾ ಅಂಬರೀಷ್ ಅವರ ಹೆಸರು ಕೂಡ ಇವಿಎಂನಲ್ಲಿ ಇದ್ದದ್ದು, ಮತದಾರರಲ್ಲಿ ಗೊಂದಲಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿತ್ತು.
ಆದರೆ ಈ ಎಲ್ಲ ಗೊಂದಲಗಳನ್ನು ನಿವಾರಿಸಿಕೊಂಡು ಸುಮಲತಾ ಅಂಬರೀಷ್ ಅವರು ಬರೊಬ್ಬರಿ 60 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ನಿಖಿಲ್ ರನ್ನು ಮಣಿಸಿ ತಮ್ಮ ಮೊದಲ ಪ್ರಯತ್ನದಲ್ಲೇ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಆದರೆ ಇಷ್ಟಕ್ಕೂ ಸುಮಲತಾ ಅಂಬರೀಷ್ ಅವರ ವಿರುದ್ಧ ಸ್ಪರ್ಧಿಸಿದ್ದ ಇತರೆ ಸುಮಲತಾ ಎಂಬ ಹೆಸರಿನ ಅಭ್ಯರ್ಥಿಗಳು ಗಳಿಸಿದ ಮತಗಳೆಷ್ಟು ಗೊತ್ತೇ..?
ಹೌದು.. ಮತದಾನ ಮುಕ್ತಾಯವಾಗಿ ಫಲಿತಾಂಶ ಪ್ರಕಟಗೊಂಡಿದ್ದರೂ, ಮಂಡ್ಯ ಮತದಾರಲ್ಲಿ ಇಂತಹುದೊಂದು ಪ್ರಶ್ನೆ ಕಾಡುತ್ತಿದ್ದು ಇದಕ್ಕೆ ಉತ್ತರ ಇಲ್ಲಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಷ್ ವಿರುದ್ಧ ಒಟ್ಟು ಮೂರು ಮಂದಿ ಸುಮಲತಾ ಹೆಸರಿನ ಮಹಿಳೆಯರು ಸ್ಪರ್ಧಿಸಿದ್ದರು. ಸುಮಲತಾ (ಕ್ರಮ ಸಂಖ್ಯೆ 19), ಎಂ ಸುಮಲತಾ (ಕ್ರಮ ಸಂಖ್ಯೆ 21) ಮತ್ತು ಸುಮಲತಾ (ಕ್ರಮ ಸಂಖ್ಯೆ 22) ಎಂಬುವವರು ಸ್ಪರ್ಧಿಸಿದ್ದರು. ಈ ಪೈಕಿ ಸುಮಲತಾ (ಕ್ರಮ ಸಂಖ್ಯೆ 19) ಅವರಿಗೆ ಒಟ್ಟು 8902 ಮತಗಳು ಬಿದ್ದಿದ್ದು, ಎಂ ಸುಮಲತಾ (ಕ್ರಮ ಸಂಖ್ಯೆ 21) ಅವರಿಗೆ 8542 ಮತಗಳು ಬಿದ್ದಿವೆ. ಅಂತೆಯೇ ಸುಮಲತಾ (ಕ್ರಮ ಸಂಖ್ಯೆ 22)  ಅವರಿಗೆ 3119 ಮತಗಳು ಬಿದ್ದಿವೆ. ಆ ಮೂಲಕ ಮೂವರು ಸುಮಲತಾ ಎಂಬ ಅಭ್ಯರ್ಥಿಗಳಿಗೆ ಒಟ್ಟು 20,563 ಮತಗಳು ಬಿದ್ದಂತಾಗಿದೆ.
SCROLL FOR NEXT