ಕರ್ನಾಟಕ

ಲೋಕಸಭಾ ಚುನಾವಣೆ ಫಲಿತಾಂಶ ರಾಜ್ಯದ ಜನತೆ ಚಾಟಿಯೇಟು ಕೊಟ್ಟಂತಾಗಿದೆ: ಜಿ.ಟಿ. ದೇವೇಗೌಡ

Sumana Upadhyaya
ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯದ ಜನತೆ ಚಾಟಿಯೇಟು ಕೊಟ್ಟಂತಾಗಿದೆ. ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪು ಅಂತಿಮ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಸಿಇಟಿ ಫಲಿತಾಂಶ ಪ್ರಕಟಿಸಿದ ಬಳಿಕ ಮಾತನಾಡಿದ ಅವರು, ಮೈತ್ರಿ ಅಭ್ಯರ್ಥಿಗಳಿಗೆ ಸೋಲಾಗಿರುವುದು, ಒಂದು ವರ್ಷದ ಆಡಳಿತಕ್ಕೆ ಜನರು ನೀಡಿದ ಚಾಟಿಯೇಟಾಗಿದೆ. ಇನ್ನು ನಾಲ್ಕು ವರ್ಷ ಉತ್ತಮ ಕೆಲಸ ಮಾಡಿ ಅನ್ನುವ ಉತ್ತರ ಇದಾಗಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಸುಭದ್ರವಾಗಿದ್ದು ಐದು ವರ್ಷ ಪೂರೈಸಲಿದೆ ಎಂಬ ವಿಶ್ವಾಸವಿದೆ ಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸೋಲು ಜನರ ತೀರ್ಮಾನವಾಗಿದೆ. ಪ್ರಜ್ವಲ್ ರೇವಣ್ಣ ರಾಜೀನಾಮೆ ಕೊಡ್ತಾರೆಂಬ ವಿಚಾರಕ್ಕೆ ಸಂಬಂಧಿಸಿದಂತೆ ದೇವೇಗೌಡರು ಆಶೀರ್ವಾದ ಮಾಡಿ ಹಾಸನ ಬಿಟ್ಟು ಕೊಟ್ಟಿದ್ದಾರೆ. ಮತ್ತೆ ಅವರು ಅಲ್ಲಿ ಸ್ಪರ್ಧಿಸುವುದಿಲ್ಲವೆಂದು ಹೇಳಿದ್ದಾರೆ. ಪ್ರಜ್ವಲ್​ ರೇವಣ್ಣ ಅವರೇ ಮುಂದುವರಿಯಬೇಕೆಂದು ಆಶೀರ್ವಾದ ಮಾಡಿದ್ದಾರೆ. ದೇವೇಗೌಡರು ಸೋತರು ಮತ್ತೆ ಅವರ ಕೆಲಸಗಳನ್ನು ಮುಂದುವರಿಸುತ್ತಾರೆ ಎಂದರು.
SCROLL FOR NEXT