ಕರ್ನಾಟಕ

ಲೋಕಸಭೆ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು: ಕಮಲ ಬೆಂಬಲಿಸಿದ ಎಸ್‌ಸಿ, ಎಸ್‌ಟಿ ಮತದಾರರು!

Shilpa D
ಬೆಂಗಳೂರು: ಬಹಳ ಹಿಂದಿನಿಂದಲೂ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ಮತದಾರರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ನಿಷ್ಠೆಯನ್ನು ಬಿಜೆಪಿ ಕಡೆಗೆ ಹರಿಸಿರುವುದು ಚುನಾವಣಾ ಫಲಿತಾಂಶದಿಂದ  ಸ್ಪಷ್ಟವಾಗುತ್ತಿದೆ. 
ರಾಜ್ಯದ ಎಲ್ಲಾ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳೇ ಗೆದ್ದಿರುವುದು ಇದಕ್ಕೆ ಸಾಕ್ಷಿ. 2014ರ  ಲೋಕಸಭಾ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಮೀಸಲು ಕ್ಷೇತ್ರಗಳ ಪೈಕಿ ಕಾಂಗ್ರೆಸ್  5 ಸ್ಥಾನಗಳನ್ನು ಗೆದ್ದಿತ್ತು. ಆದರೆ ಈ ಬಾರಿ  ಕಾಂಗ್ರೆಸ್‌ನ ಹಿರಿಯ ನಾಯಕರಾದ  ಮಲ್ಲಿಕಾರ್ಜುನ ಖರ್ಗೆ (ಕಲಬುರಗಿ), ಕೆ.ಎಚ್. ಮುನಿಯಪ್ಪ (ಕೋಲಾರ) ಅವರು ಬಿಜೆಪಿಯ ಡಾ.  ಉಮೇಶ್ ಜಾಧವ್ ಮತ್ತು ಮುನಿಸ್ವಾಮಿ ಅವರ ಎದುರು ಕ್ರಮವಾಗಿ ಸೋತಿದ್ದಾರೆ. ಇವೆರಡೂ ಮೀಸಲು  ಕ್ಷೇತ್ರಗಳಾಗಿವೆ.
2014ರಲ್ಲಿ ಗೆದ್ದ ಮೀಸಲು  ಕ್ಷೇತ್ರಗಳನ್ನೂ ಈ ಬಾರಿ  ಕಾಂಗ್ರೆಸ್ ಕಳೆದುಕೊಂಡಿದೆ. ಧ್ರುವನಾರಾಯಣ (ಚಾಮರಾಜನಗರ), ಚಂದ್ರಪ್ಪ (ಚಿತ್ರದುರ್ಗ),  ಬಿ.ವಿ.ನಾಯಕ್ (ರಾಯಚೂರು-ಎಸ್‌ಟಿ) ಈ ಬಾರಿ ಸೋತಿದ್ದು, ಈ ಕ್ಷೇತ್ರಗಳಲ್ಲಿ ಬಿಜೆಪಿ  ಅಭ್ಯರ್ಥಿಗಳು ಭರ್ಜರಿ ಜಯಸಾಧಿಸಿದ್ದಾರೆ.
2014ರಲ್ಲಿ ಬಿಜೆಪಿ, ಬಿಜಾಪುರ ಮತ್ತು ಬಳ್ಳಾರಿ ಮೀಸಲು ಕ್ಷೇತ್ರಗಳನ್ನು ಮಾತ್ರ ಗೆದ್ದಿತ್ತು. ಆದರೆ ಈ ಬಾರಿ ಎಲ್ಲಾ ಏಳು  ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿದೆ. ಬಿಜಾಪುರ ಕ್ಷೇತ್ರದಿಂದ ರಮೇಶ್ ಜಿಗಜಿಣಗಿ,  ಚಿತ್ರದುರ್ಗದಿಂದ ಎ ನಾರಾಯಣ ಸ್ವಾಮಿ, ಚಾಮರಾಜನಗರದಿಂದ ವಿ ಶ್ರೀನಿವಾಸಪ್ರಸಾದ್,  ಕೋಲಾರದಿಂದ ಮುನಿಸ್ವಾಮಿ, ಕಲಬುರಗಿಯಿಂದ ಡಾ ಉಮೇಶ್ ಜಾಧವ್ ಗೆದ್ದಿದ್ದು, ಇವೆಲ್ಲವೂ  ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಾಗಿವೆ. 
ಇನ್ನು ಪರಿಶಿಷ್ಟ ಪಂಗಡ ಕ್ಷೇತ್ರಗಳಾದ  ರಾಯಚೂರಿನಿಂದ ರಾಜಅಮರೇಶ್ ನಾಯಕ್, ಬಳ್ಳಾರಿಯಿಂದ ದೇವೇಂದ್ರಪ್ಪ ಜಯಗಳಿಸಿದ್ದಾರೆ.  ಇವರೆಲ್ಲೂ ಬಿಜೆಪಿ ಅಭ್ಯರ್ಥಿಗಳಾಗಿದ್ದಾರೆ.
SCROLL FOR NEXT