ತುಮಕೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕಾಕದೃಷ್ಟಿ, ಕಾಂಗ್ರೆಸ್- ಜೆಡಿಎಸ್ ಒಳ ಒಪ್ಪಂದ, ನಮ್ಮದೇ ಪಕ್ಷದ ಕೆಲವು ನೀಚರ ಪಿತೂರಿಯಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಬೇಕಾಯಿತು ಎಂದು ತುಮಕೂರು ಮಾಜಿ ಸಂಸದ ಜಿ.ಎಸ್. ಬಸವರಾಜ್ ವಿಶ್ಲೇಷಿಸಿದರು.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆ 2- 3 ದಿನ ಇರುವ ಸಂದರ್ಭದಲ್ಲಿ ನನಗೆ ಈ ವಿಷಯ ತಿಳಿದಿದೆ. ಚುನಾವಣೆ ನಂತರ ದೇವೇಗೌಡರ ಕುತಂತ್ರ, ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದ ವಿಷಯ ತಿಳಿದ ಎ. ಕೃಷ್ಣಪ್ಪ ಅವರು ಅದೇ ಕೊರಗಿನಲ್ಲಿ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿದರು.
ಸೋಲಿಗೆ ನಮ್ಮ ಪಕ್ಷದಲ್ಲಿರುವ ಕೆಲವರ ಪಿತೂರಿಯೂ ಕಾರಣವಾಗಿದ್ದು, ಆ ನೀಚರ ಹೆಸರನ್ನು ಶೀಘ್ರದಲ್ಲೇ ಬಹಿರಂಗಪಡಿಸುವೆ. ತನಿಖೆ ಮಾಡಿ, ಸ್ಪಷ್ಟಪಡಿಸುವೆ. ಈಗಲೇ ಹೇಳಲಾರೆ ಎಂದು ಪ್ರಶ್ನೆಯೊಂದಕ್ಕೆ ಜಿಎಸ್‌ಬಿ ಉತ್ತರಿಸಿದರು.