ಬೆಂಗಳೂರು: ನರೇಂದ್ರ ಮೋದಿ ಅವರು ದೇಶದ 14ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭವನ್ನು ವಿಶಿಷ್ಟವಾಗಿ ನೇರ ಪ್ರಸಾರ ಮಾಡಲು ದೂರದರ್ಶನ ಸಕಲ ಸಿದ್ಧತೆ ನಡೆಸಿದೆ.
ನವದೆಹಲಿಯ ರಾಷ್ಟ್ರಪತಿ ಭವನದ ಬಳಿಯ ಕೋಟೆಯಲ್ಲಿ ಪ್ರತಿಜ್ಞಾವಿಧಿ ಸಮಾರಂಭ ನಡೆಯಲಿದ್ದು, ದೂರದರ್ಶನ ಸುಮಾರು 9 ಕ್ಯಾಮೆರಾಗಳನ್ನು ಬಳಸಿ ನೇರ ಪ್ರಸಾರ ಕಾರ್ಯ ಕೈಗೊಳ್ಳಲಿದೆ. ಇದಕ್ಕಾಗಿ 60 ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ. ಮೇ 26ರ ಸಂಜೆ 5.30ರ ವೇಳೆಗೆ ನೇರ ಪ್ರಸಾರ ಪ್ರಾರಂಭವಾಗಲಿದ್ದು, ಕಾರ್ಯಕ್ರಮ ಮುಗಿಯುವವರೆಗೆ ನೇರವಾಗಿ ದೃಶ್ಯಾವಳಿಗಳನ್ನು ಬಿತ್ತರಿಸಲಾಗುತ್ತದೆ.
ದೂರದರ್ಶನದ ನ್ಯಾಷನಲ್, ಸ್ಪೋರ್ಟ್ಸ್, ಇಂಡಿಯಾ ಸೇರಿದಂತೆ ಆರು ಹಾಗೂ ಚಂದನ ಸೇರಿದಂತೆ ಎಲ್ಲ ಪ್ರಾದೇಶಿಕ ಚಾನೆಲ್‌ಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಇರಲಿದೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ನೇರ ಪ್ರಸಾರಕ್ಕೆ ಅಸಂಖ್ಯ ಮೆಚ್ಚುಗೆ ಗಳಿಸಿದ್ದ ದೂರದರ್ಶನ, ಇದೀಗ ಅಂತಹದ್ದೇ ಸಿದ್ಧತೆಯನ್ನು ಹೆಚ್ಚುವರಿ ಮಹಾನಿರ್ದೇಶಕ ಡಾ. ಮಹೇಶ್ ಜೋಷಿ ನೇತೃತ್ವದಲ್ಲಿ ನಡೆಸಿದೆ.
'ಹೌದು, ದೂರದರ್ಶನದ ಎಲ್ಲ ಚಾನೆಲ್‌ಗಳಲ್ಲೂ ನೇರ ಪ್ರಸಾರ ಕಾರ್ಯಕ್ಕೆ ಸಿದ್ಧತೆ ನಡೆದಿದೆ. ಕನ್ನಡಿಗನಾಗಿ ನನಗೆ ಸಿಕ್ಕ ದೊಡ್ಡ ಅವಕಾಶ ಇದಾಗಿದೆ' ಎಂದು ನವದೆಹಲಿ ದೂರದರ್ಶನದ ಹೆಚ್ಚುವರಿ ಮಹಾನಿರ್ದೇಶಕ ನಾಡೋಜ ಡಾ.ಮಹೇಶ್ ಜೋಷಿ ಅವರು ಪ್ರತಿಕ್ರಿಯಿಸಿದ್ದಾರೆ.