ಶ್ರೀ ಗಣೇಶ ಮೂರ್ತಿಯನ್ನು ತರುವುದು ಹೇಗೆ?
ಗಣೇಶ ಚತುರ್ಥಿ ಹಿಂದುಗಳ ಪವಿತ್ರ ಹಬ್ಬ ಎಂದೇ ಖ್ಯಾತಿ ಹೊಂದಿದ್ದು, ದೇಶ ವಿದೇಶಗಳಲ್ಲಿ ಜನಪ್ರಿಯಗೊಂಡಿರುವ ಗಣೇಶ ಚತುರ್ಥಿ ಇಂದು ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ತುಂಬಾ ಮಹತ್ವವನ್ನು ಪಡೆದುಕೊಂಡಿದೆ. ಭಾದ್ರಪದ ಮಾಸದ ಶುಕ್ಲ ಚತುರ್ಥಿಯು ಶ್ರೀ ಗಣೇಶನ ಜನ್ಮದಿನ ಎನ್ನಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಎಲ್ಲಾ ದೇಶಗಳಲ್ಲೂ ಖ್ಯಾತಿ ಹೊಂದಿರುವ ಈ ಗಣೇಶ ಹಬ್ಬವನ್ನು ಪ್ರತೀಯೊಬ್ಬರು ಆಚರಿಸುತ್ತಿದ್ದು, ಹಬ್ಬಕ್ಕೆ ಒಂದು ತಿಂಗಳು ಇರುವಾಗವಾಗಲೇ ಚಂದಾ ವಸೂಲಿ ಮಾಡಲು ಪ್ರಾರಂಭಿಸುತ್ತಾರೆ. ಹಬ್ಬ ಬಂದ ಕೂಡಲೇ ಪದ್ಧತಿ ಇಲ್ಲದೆಯೇ ಯಾವುದೋ ಒಂದು ವಾಹನವೊಂದನ್ನು ತೆಗೆದುಕೊಂಡು ಹೋಗಿ ಗಣಪನನ್ನು ತಂದು ಕೂರಿಸಿ ಎಲ್ಲರೂ ಮಾಡುತ್ತಿದ್ದಾರೆ. ನಾವು ಮಾಡೋಣ ಎಂದು ಮಾಡುವವರೇ ಹೆಚ್ಚು. ಪದ್ಧತಿಯಿಂದ ಗಣಪನನ್ನು ಕೂರಿಸಿ ಪೂಜಿಸುವವರ ಸಂಖ್ಯೆ ಕಡಿಮೆಯಾಗಿಬಿಟ್ಟಿದೆ.
ಎಲ್ಲಾ ದೇವರನ್ನು ಪೂಜಿಸುವ ಹಾಗೆಯೇ ಗಣಪನಿಗೂ ಪದ್ಧತಿ, ನಿಯಮಗಳಿದ್ದು ಅವುಗಳನ್ನು ಅನುಸರಿಸಿದರೇ ಉತ್ತಮ ಫಲಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಹಾಗದರೆ ಗಣೇಶನ ಮೂರ್ತಿಯನ್ನು ಹೇಗೆ ತರಬೇಕು...ಗಣಪನನ್ನು ತರಲು ಇರುವ ನಿಯಮಗಳೇನು ಎಂಬುದಕ್ಕೆ ಇಲ್ಲಿದೆ ಮಾಹಿತಿ...
- ಗಣಪನ ಮೂರ್ತಿಯನ್ನು ತರಲು ಮನೆಯ ಹಿರಿಯಕರು ಹೋಗಬೇಕು.
- ಯಾವುದೇ ಮೈಲಿಗೆ ಇಲ್ಲದೆ ಶುದ್ಧ ನೀರಿನಲ್ಲಿ ಸ್ನಾನ ಮಾಡಿ, ಪಂಜೆ ಹಾಗೂ ಖಾದಿಯ ಸ್ವಚ್ಛ ಬಟ್ಟೆಯನ್ನು ಧರಿಸಬೇಕು.
- ಗಣೇಶ ಮೂರ್ತಿಯನ್ನು ತೆಗೆದುಕೊಂಡಾಗ ಮೂರ್ತಿಯನ್ನು ಎತ್ತಿಕೊಂಡಿರುವವರು ವಿನಾಯಕನ ಮುಖವನ್ನು ತಮ್ಮೆಡೆಗಿರುವಂತೆ ಎತ್ತಿಕೊಳ್ಳಬೇಕು. ಅಂದರೆ ಮೂರ್ತಿ ತರುವವನ ಕಡೆಗೆ ವಿನಾಯಕನ ಮುಖ ಮತ್ತು ಬೆನ್ನ ಮುಂದಿನ ಬದಿಗಿರಬೇಕು.
- ಈ ವೇಳೆ ಮೂರ್ತಿಯನ್ನು ಎತ್ತಿಕೊಳ್ಳುವವನು ಪೂಜಕನಾಗಿರುತ್ತಾನೆ. ಮೂರ್ತಿ ಮುಖವನ್ನು ಆತನೆಡೆಗೆ ಮಾಡಿಕೊಳ್ಳುವುದರಿಂದ ಸುಗುಣ ತತ್ತ್ವದ ಲಾಭವಾಗುತ್ತದೆ.
- ಗಣೇಶ ಮೂರ್ತಿಯನ್ನು ತೆಗೆದುಕೊಂಡು ಬರುವಾಗ ಗಣೇಶನ ಗುಣಗಾನ ಮಾಡಿ ಜಯಕಾರ ಮತ್ತು ನಾಮಜಪ ಮಾಡುತ್ತಾ ಮನೆಗೆ ಮೂರ್ತಿಯನ್ನು ತೆಗೆದುಕೊಂಡು ಬರಬೇಕು.
- ಮೂರ್ತಿಯನ್ನು ಮನೆಯ ಬಾಗಿಲಿಗೆ ತಂದ ಕೂಡಲೇ ಮನೆಯ ಸ್ತ್ರೀಯರು ಮೂರ್ತಿ ಎತ್ತಿಕೊಂಡಿರುವವರ ಕಾಲಿನ ಮೇಲೆ ಮೊದಲು ಹಾಲು, ನಂತರ ನೀರನ್ನು ಹಾಕಬೇಕು.
- ನಂತರ ಮೂರ್ತಿ ಎತ್ತಿಕೊಂಡಿರುವವರು ನಿಧಾನಗತಿಯಲ್ಲಿ ವಿನಾಯಕನ ಮುಖವನ್ನು ಮುಂಭಾಗಕ್ಕೆ ತಿರುಗಿಸಬೇಕು.
- ವಿನಾಯಕನ ಮೂರ್ತಿಯನ್ನು ಕೂರಿಸುವ ಮಣೆಯ ಮೇಲೆ ಸ್ವಲ್ಪ ಅಕ್ಕಿಯನ್ನು ಹಾಕಿ ನಂತರ ಮೂರ್ತಿಯನ್ನು ಕೂರಿಸಬೇಕು.
-ಮಂಜುಳ.ವಿ.ಎನ್