ಗೌರಿ 
ಗಣೇಶ ಚತುರ್ಥಿ

ಬಡವನ ಮನೆಗೆ ಮುದುಕಿ ರೂಪದಲ್ಲಿ ಬಂದ ಗೌರಮ್ಮ!

ಬಡತನದ ಎದುರು ಯಾವುದೇ ಪರಿಹಾರ ಸಿಗುವುದಿಲ್ಲ, ಭಿಕ್ಷೆ ಬೇಡಲು ಹೋದರೂ ಏನೂ ಸಿಗುವುದಿಲ್ಲ ಇವೆಲ್ಲದಕ್ಕಿಂತ ಸಾಯುವುದೇ ಲೇಸು...

ಒಂದು ವಿಶಾಲವಾದ ಊರಿನಲ್ಲಿ ಓರ್ವ ಬಡ ಬ್ರಾಹ್ಮಣನಿದ್ದನು. ಭಾದ್ರಪದ ತಿಂಗಳು ಬಂದಾಗ ಮನೆ ಮನೆಯಲ್ಲಿ ಜನರು ಗೌರಿಯನ್ನು ತಂದು ಪೂಜಾ ಸಡಗರದಲ್ಲಿ ಇದ್ದರು. ಬೀದಿಗಳಲ್ಲಿ ಸುಮಂಗಲಿಯರು ಓಡಾಟ, ಮನೆ ಮನೆಗಳಲ್ಲಿ ಗಂಟೆಯನಾದ ಕೇಳಿಸುತ್ತಿತ್ತು.

ಇದೆಲ್ಲವನ್ನು ನೋಡುತ್ತಿದ್ದ ಬಡ ಬ್ರಾಹ್ಮಣನ ಮಕ್ಕಳು, ಮನೆಗೆ ಬಂದು ಅಮ್ಮ ನಮ್ಮ ಮನೆಗೂ ಗೌರಿ ತನ್ನಿ ಎಂದು ತಾಯಿಯನ್ನು ಪೀಡಿಸಿದರು. ಆಗ ತಾಯಿ ಮಕ್ಕಳೇ, ಗೌರಿಯನ್ನು ತಂದು ನಾನೇನು ಮಾಡಲಿ, ಗೌರಿಯನ್ನು ತಂದರೆ ಪೂಜೆ ಮಾಡಬೇಕು, ಹೋಳಿಗೆ ಪಾಯಸ ನೈವೇದ್ಯ ಅರ್ಪಿಸಬೇಕು. ಆದರೆ ನಮ್ಮ ಮನೆಯಲ್ಲಿ ಏನೂ ಇಲ್ಲ. ನೀವು ಅಪ್ಪನಿಗೆ ಪೇಟೆಗೆ ಹೋಗಿ ಸಾಮಾನು ತರಲು ಹೇಳಿ, ಅಪ್ಪ ಸಾಮಾನು ತಂದರೆ ನಾನು ಗೌರಿಯನ್ನು ತರುತ್ತೇನೆ ಎಂದು ಹೇಳಿದಳು. ಆಗ ಮಕ್ಕಳು ತಂದೆಯ ಬಳಿ ಬಂದು ಅಪ್ಪ ಪೇಟೆಗೆ ಹೋಗಿ ಹೋಳಿಗೆ ಪಾಯಸಕ್ಕೆ ಬೇಕಾದ ಸಾಮಾನು ತನ್ನಿರಿ ಏಕೆಂದರೆ ಅಮ್ಮ ಗೌರಿ ತರುತ್ತಾಳೆ ಎಂದು ಹೇಳಿದರು.

ಮಕ್ಕಳ ಕೋರಿಕೆಯನ್ನು ಕೇಳಿದ ಬ್ರಾಹ್ಮಣನ ಮನಸ್ಸಿಗೆ ಬೇಸರವಾಯಿತು. ಮಕ್ಕಳ ಆಸೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಬಡತನದ ಎದುರು ಯಾವುದೇ ಪರಿಹಾರ ಸಿಗುವುದಿಲ್ಲ, ಭಿಕ್ಷೆ ಬೇಡಲು ಹೋದರೂ ಏನೂ ಸಿಗುವುದಿಲ್ಲ ಇವೆಲ್ಲದಕ್ಕಿಂತ ಸಾಯುವುದೇ ಲೇಸು ಎಂದು ದೇವರನ್ನು ನೆನೆದು ಕೆರೆಯ ದಿಕ್ಕಿನಲ್ಲಿ ಹೋದನು. ಅರ್ಧ ದಾರಿಯನ್ನು ತಲುಪುವಾಗಲೇ ಸಂಜೆಯಾಯಿತು.

ಅಲ್ಲಿಯೇ ಹತ್ತಿರದಲ್ಲಿ ಓರ್ವ ಸುಮಂಗಲೆಯಾದ ಮುದುಕಿಯನ್ನು ಭೇಟಿಯಾದನು. ಮುದುಕಿಯು ಇವನನ್ನು ನೋಡಿ ನೀನು ಯಾರು ಎಂದು ಕೇಳಿದಳು. ಬ್ರಾಹ್ಮಣನು ತನ್ನ ಹಾಗೂ ತನ್ನ ಬಡತನ ಬಗ್ಗೆ ಹೇಳಿಕೊಂಡನು. ಆಗ ಆ ಮುದುಕಿ ಸಮಾಧಾನ ಮಾಡಿ ಬುದ್ಧಿವಾದ ಹೇಳಿದಳು. ಬಡ ಬ್ರಾಹ್ಮಣನು ಮುದುಕಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದನು.

ಬ್ರಾಹ್ಮಣನ ಹೆಂಡತಿಯು ದೀಪವನ್ನು ಹಚ್ಚಿ 'ಇವರು ಯಾರು' ಎಂದು ಕೇಳಿದಳು ಆಗ ಬ್ರಾಹ್ಮಣನು 'ಅಜ್ಜಿ' ಎಂದು ಉತ್ತರಿಸಿದನು. ಬಂದ ಅಜ್ಜಿ ಮತ್ತು ಪತಿಗೆ ಗಂಜಿ ಮಾಡಲು ಹೆಂಡತಿಯು ಮನೆಯ ಒಳಗೆ ಹೋಗಿ ನುಚ್ಚನ್ನು ನೋಡಿದಳು. ಆಹ ನುಚ್ಚಿನ ಮಡಿಕೆ ತುಂಬಿತ್ತು. ಇದನ್ನು ಕಂಡ ಆಕೆಗೆ ಆಶ್ಚರ್ಯವಾಗಿ ತನ್ನ ಗಂಡನನ್ನು ಕರೆದು ವಿಷಯವನ್ನು ತಿಳಿಸಿದಳು.

ಅವನಿಗೂ ಬಹಳ ಆನಂದವಾಯಿತು. ಎಲ್ಲರಿಗೂ ಹೊಟ್ಟೆ ತುಂಬುವಷ್ಟು ಗಂಜಿಯನ್ನು ತಯಾರಿಸಿ ಸೇವಿಸಿದರು. ಬೆಳಗಾದ ತಕ್ಷಣ ಮುದುಕಿಯು ಬ್ರಾಹ್ಮಣನನ್ನು ಕರೆದು, ಮಗ, ನಿನ್ನ ಹೆಂಡತಿಯನ್ನು ನನಗೆ ಸ್ನಾನ ಮಾಡಿಸಲು ಹೇಳು ಎಂದು ಹೇಳಿದಳು. 'ದೇವರಿಗಾಗಿ ಹೋಳಿಗೆ ಪಾಯಸ ಮಾಡು, ಏನೂ ಇಲ್ಲ ಎಂದು ಹೇಳಬೇಡ, ಬೇಸರಪಡಬೇಡ' ಎಂದಳು.

ಹಾಗೆಯೇ ಬ್ರಾಹ್ಮಣನು ಎದ್ದು ಮನೆಯೊಳಗೆ ಹೋಗಿ ಹೆಂಡತಿಯನ್ನು ಕರೆದು ‘ಕೇಳಿಸಿಕೊಂಡೆಯಾ? ಅಜ್ಜಿಗೆ ಸ್ನಾನ ಮಾಡಿಸು‘ ಎಂದು ಹೇಳಿ ತಾನು ಭಿಕ್ಷೆ ಬೇಡಲು ಹೋದನು. ಬಹಳಷ್ಟು ಭಿಕ್ಷೆ ದೊರೆಯಿತು. ಬೇಕಾದಷ್ಟು ಬೆಲ್ಲ ಹಾಗೂ ಉಳಿದ ಸಾಮಾನುಗಳೂ ದೊರೆತವು. ಬ್ರಾಹ್ಮಣನಿಗೆ ಆನಂದವಾಯಿತು. ಹೆಂಡತಿ ಅಡುಗೆ ಮಾಡಿದಳು. ಮಕ್ಕಳೆಲ್ಲರೂ ಸೇರಿ ಹೊಟ್ಟೆ ತುಂಬಾ ಊಟಮಾಡಿದರು.

ಮುದುಕಿಯು ಬ್ರಾಹ್ಮಣನನ್ನು ಕರೆದು ಮರುದಿನದ ಅಡುಗೆಗೆ ಪಾಯಸ ಮಾಡಲು ಹೇಳಿದಳು. ಬ್ರಾಹ್ಮಣನು ಅಜ್ಜಿ, ಹಾಲನ್ನು ಎಲ್ಲಿಂದ ತರಲಿ? ಎಂದು ಕೇಳಿದನು. ಆಗ ಮುದುಕಿಯು ನೀನು ಏನೂ ಚಿಂತೆ ಮಾಡಬೇಡ, ಈಗಲೇ ಎದ್ದು ನಿನಗೆ ಎಷ್ಟು ಎಮ್ಮೆ ಮತ್ತು ದನ ಬೇಕೊ ಅಷ್ಟು ಕಂಬವನ್ನು ನೆಟ್ಟು ಅವೆಲ್ಲದಕ್ಕೂ ಹಗ್ಗ ಕಟ್ಟಿಡು. ಸಾಯಂಕಾಲ ಗೋಧೂಳಿ ಮೂಹೂರ್ತದಲ್ಲಿ ಹಸು-ಎಮ್ಮೆಗಳಿಗೆ ಅವುಗಳ ಹೆಸರಿನಿಂದ ಕೂಗಿದರೆ ಅವು ಬರುತ್ತವೆ, ಹಾಗೇ ನಿನ್ನ ಕೊಟ್ಟಿಗೆಯು ತುಂಬುವುದು. ಅವುಗಳ ಹಾಲನ್ನು ಕರೆ ಎಂದು ಹೇಳಿದಳು. ಬ್ರಾಹ್ಮಣನು ಅದೇ ರೀತಿ ಮಾಡಿದನು. ದನ-ಎಮ್ಮೆಯನ್ನು ಅವುಗಳ ಹೆಸರಿನಿಂದ ಕರೆದಾಗ ಅವು ತಮ್ಮ ಕರುಗಳೊಂದಿಗೆ ಓಡಿ ಬಂದವು. ಬ್ರಾಹ್ಮಣನ ಕೊಟ್ಟಿಗೆಯು ಎಮ್ಮೆ ದನಗಳಿಂದ ತುಂಬಿ ಹೋಯಿತು. ಬ್ರಾಹ್ಮಣನು ಅವುಗಳ ಹಾಲು ಕರೆದನು.

ಮರುದಿನ ಪಾಯಿಸ ಮಾಡಿದರು. ಮುದುಕಿಯು ಸಂಜೆಯಾದ ತಕ್ಷಣ ಬ್ರಾಹ್ಮಣನಿಗೆ ಮಗ, ನನ್ನನ್ನು ಕಳಿಸಿಕೊಡು ಎಂದು ಹೇಳಿದಳು. ಬ್ರಾಹ್ಮಣನು ಅಜ್ಜಿ, ನಿಮ್ಮ ದಯೆಯಿಂದ ನಮಗೆ ಎಲ್ಲವೂ ದೊರೆಯಿತು ಈಗ ನಾನು ನಿಮ್ಮನ್ನು ಹೇಗೆ ಕಳಿಸಿಕೊಡಲಿ? ನೀವು ಹೋದರೆ ಎಲ್ಲವೂ ಇಲ್ಲದಂತಾಗುವುದು ಎಂದು ಹೇಳಿದನು.

ಆಗ ಮುದುಕಿಯು ನೀನೇನೂ ಭಯಪಡಬೇಡ ನನ್ನ ಆಶೀರ್ವಾದದಿಂದ ನಿನಗೆ ಏನೂ ಕಡಿಮೆಯಾಗುವುದಿಲ್ಲ. ಜ್ಯೇಷ್ಠ ಗೌರಿ ಎಂದರೆ ನಾನೇ! ಈಗ ನನ್ನನ್ನು ಕಳಿಸಿಕೊಡು ಎಂದು ಹೇಳಿದಳು. ಬ್ರಾಹ್ಮಣನು ತಾಯಿ ನೀನು ಕೊಟ್ಟಿರುವುದು ಹೀಗೇ ವೃದ್ಧಿಯಾಗಲು ಎನಾದರೂ ಉಪಾಯ ಹೇಳು ಎಂದು ಕೇಳಿಕೊಂಡನು.

ಆಗ ಗೌರಿಯು, ನೀನು ಬರುವಾಗ ಮರಳು ಕೊಡುತ್ತೇನೆ. ಅದನ್ನು ನೀನು ಮನೆಯಲ್ಲಿ, ಹಂಡೆಯ ಮೇಲೆ, ಕೊಟ್ಟಿಗೆಯಲ್ಲಿ ಬೀಸು. ಹೀಗೆ ಮಾಡಿದ ನಂತರ ನಿನಗೆ ಯಾವುದರ ಕೊರತೆಯೂ ಆಗುವುದಿಲ್ಲ ಎಂದಳು. ಆಗ ಬ್ರಾಹ್ಮಣನು ಅದಕ್ಕೆ ಒಪ್ಪಿ ಗೌರಿ ಪೂಜೆ ಮಾಡಿದನು. ಗೌರಿಯು ಪ್ರಸನ್ನಳಾದಳು. ಅವಳು ತನ್ನ ವ್ರತವನ್ನು ಹೇಳಿದಳು. 'ಭಾದ್ರಪದ ತಿಂಗಳಿನಲ್ಲಿ ಕೆರೆಯ ದಂಡೆಗೆ ಹೋಗಿ ಎರಡು ಕಲ್ಲುಗಳನ್ನು ಮನೆಗೆ ತಂದು ಅವುಗಳನ್ನು ಬಿಸಿನೀರಿನಿಂದ ತೊಳೆಯಬೇಕು.

ಜ್ಯೇಷ್ಠ ಗೌರಿ ಮತ್ತು ಕನಿಷ್ಠ ಗೌರಿ ಎಂದು ಅವುಗಳನ್ನು ಸ್ಥಾಪಿಸಿ ಪೂಜೆ ಮಾಡಬೇಕು. ಎರಡನೆಯ ದಿನ ಹೋಳಿಗೆ ಮತ್ತು ಮೂರನೆ ದಿನ ಪಾಯಸದ ನೈವೇದ್ಯವನ್ನು ಅರ್ಪಿಸಬೇಕು. ಸುಮಂಗಲೆಯರ ಉಡಿ ತುಂಬಬೇಕು. ಊಟ ಹಾಕಿಸಬೇಕು. ನಂತರ ಅರಿಶಿನ ಕುಂಕುಮ ಇಟ್ಟು ದೇವಿಯನ್ನು ಆಹ್ವಾನಿಸಿದರೆ, ಮನೆ ಸುಖ ಸಂತೋಷ ಭರಿತವಾಗಿರುತ್ತದೆ ಎಂದು ಗೌರಮ್ಮ ಹೇಳಿದಳು. ಇದೇ ರೀತಿಯಲ್ಲಿ ಬ್ರಾಹ್ಮಣನು ಗೌರಿ ಪೂಜೆ ಮಾಡಿ, ತಾಯಿ ಕೃಪೆಗೆ ಪಾತ್ರನಾದನು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Idre Nemdiyaag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

SCROLL FOR NEXT