ನಿರಾಕಾರ ಸ್ವರೂಪವನ್ನೇ ಆರಾಧಿಸುವುದು ಭಾರತೀಯರ ಮೂಲ ಸಂಸ್ಕೃತಿಯಾಗಿದ್ದರೂ, ನಿರಾಕಾರ ಸ್ವರೂಪದ ಆರಾಧನೆಗೆ ನೀಡುವಷ್ಟೇ ಮಹತ್ವವವನ್ನು ಮೂರ್ತ ಸ್ವರೂಪಕ್ಕೂ ನೀಡಲಾಗಿದೆ. ಮನೆಮನೆಗಳಲ್ಲೂ ಮೂರ್ತ ಸ್ವರೂಪದ ದೇವರನ್ನು ಪ್ರತಿಷ್ಠಾಪಿಸಿ ಪೂಜಿಸುವುದೆಂದರೆ ಅದು ಗಣೇಶ ಹಬ್ಬವೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಭಾರತೀಯ ಸಂಸ್ಕೃತಿಯಲ್ಲಿ ಪ್ರಕೃತಿಯನ್ನೇ ಮೂರ್ತ ರೂಪವಾಗಿ ಪೂಜಿಸಿದರೂ, ಅದರೊಂದಿಗೆ ಪಂಚಭೂತಗಳ ತತ್ವ ಬೆಸೆದಿರುತ್ತದೆ. ಗಣೇಶ ಪಾರ್ವತಿಯ ಮೈ ಮಣ್ಣಿನಿಂದ ಸೃಷ್ಠಿಯಾದ ಎಂಬ ಕಾರಣಕ್ಕೋ ಏನೋ ಮಣ್ಣಿನಿಂದಲೇ ಮಾಡಿದ ಗಣೇಶನನ್ನು ಹೆಚ್ಚು ಪೂಜಿಸುತ್ತಾರೆ. ಇದು ಭಾರತೀಯ ಸಂಪ್ರದಾಯದ ಅವಿಭಾಜ್ಯ ಅಂಗವಾಗಿದೆ. ಆದರೆ ಪುರಾತನ ಕಾಲದಲ್ಲಿ(ಈಗಲೂ ಕೆಲವರು ಈ ಪದ್ಧತಿಯನ್ನು ಪಾಲಿಸುತ್ತಾರೆ) ಮತ್ತೊಂದು ಬಗೆಯ ಗಣೇಶನನ್ನು ತಯಾರು ಮಾಡಿ ಅದಕ್ಕೆ ಪೂಜಿಸುತ್ತಿದ್ದರು. ಮಣ್ಣಿನಿಂದ ಮಾಡಿದ ಗಣೇಶನ ಬಗ್ಗೆ ಗೊತ್ತೇ ಇದೆ. ಪಿಒಪಿ ಗಣೇಶನ ಬಗ್ಗೆಯೂ ಕೇಳಿದ್ದೀರಿ, ಪರಿಸರಕ್ಕೆ ಹಾನಿಯುಂಟಾಗುವುದನ್ನು ತಡೆಯುವುದಕ್ಕೋಸ್ಕರ ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಹತ್ವ ಪಡೆಯುತ್ತಿರುವ ಪೇಪರ್ ಗಣೇಶನನ್ನೂ ನೋಡಿಯಾಗಿದೆ. ಆದರೆ ಪಿಳ್ಳಾರಿ ಗಣಪತಿಯ ಬಗ್ಗೆ ಕೇಳಿದ್ದೀರಾ?
ಪರಿಸರಕ್ಕೆ ಹಾನಿ ಉಂಟುಮಾಡದ ಪರಿಸರದೊಂದಿಗೇ ಲೀನವಾಗುವ ಗೋವಿನ ಸಗಣಿ ಹಾಗೂ ಗರಿಕೆಯನ್ನು ಬಳಸಿಕೊಂಡು ಮಾಡುವುದನ್ನೇ ಪಿಳ್ಳಾರಿ ಗಣಪತಿ ಎಂದೂ ಹೇಳುತ್ತಾರೆ. ಮಣ್ಣಿನ ಗಣಪತಿಯ ಪೂಜೆ ಆರಂಭವಾಗುವುದಕ್ಕೂ ಮೊದಲು ಸಗಣಿಯಲ್ಲಿ ಗರಿಕೆ ಹುಲ್ಲನ್ನ ಇಟ್ಟು ಪೂಜೆ ಮಾಡಲಾಗುತ್ತಿತ್ತು. ಈಗಲೂ ಸಹ ನೀವು ಎಷ್ಟೇ ದೊಡ್ಡ ಗಾತ್ರದ ಗಣೇಶನ ಮೂರ್ತಿ ತಂದರೂ ಅದರ ಪಕ್ಕ ಸಗಣಿ ಮತ್ತು ಗರಿಕೆ ಹುಲ್ಲಿನ ಗಣಪನನ್ನ ಪೂಜೆ ಮಾಡಲಾಗುತ್ತದೆ. ಪ್ರಕೃತಿ ಪ್ರಿಯ ಗಣೇಶನನ್ನ ಪ್ರಕೃತಿ ಸ್ನೇಹಿ ಮಣ್ಣು ಮತ್ತು ಗೋವಿನ ಸಗಣಿಯಿಂದ ಪೂಜಿಸಿದರೇನೆ ಶ್ರೇಷ್ಠ ಎನ್ನುವುದು ದಾರ್ಮಿಕ ಕ್ಷೇತ್ರದ ಹಿರಿಯರ ನಂಬಿಕೆ. ಗಣೇಶನಲ್ಲಿ ಬ್ರಹ್ಮಾಂಡವೇ ಅಡಗಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಲು ಆನೆಯ ರೂಪವನ್ನು ನೀಡಲಾಗಿದೆ, ವಾಸ್ತವದಲ್ಲಿ ಗಣೇಶನಿಗೆ ಆಕಾರವಿಲ್ಲ, ಗಣೇಶ ಶಬ್ದ ಸ್ವರೂಪಿ ಎಂಬುದು ಇನ್ನು ಕೆಲವು ಆಧ್ಯಾತ್ಮಿಕ ಚಿಂತಕರ ಅಭಿಪ್ರಾಯ.
ಹಾಗೆ ನೋಡಿದರೆ ಬೃಹತ್ ಗಾತ್ರದ ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸಿ ಪೂಜಿಸುವುದು ವ್ಯಾಪಕವಾಗಿ ಪ್ರಾರಂಭವಾಗಿದ್ದು ಮಧ್ಯಕಾಲೀನ ಭಾರತದಲ್ಲಿ, ಅದರಲ್ಲೂ ಸ್ವಾತಂತ್ರ್ಯ ಹೋರಾಟಕ್ಕೆ ತಿಲಕರು ಗಣೇಶೋತ್ಸವವನ್ನು ಸಮರ್ಥವಾಗಿ ಬಳಸಿಕೊಳ್ಳಲು ಪ್ರಾರಂಭಿಸಿದ ಮೇಲೆ. ಎಲ್ಲಾ ಪ್ರದೇಶದಲ್ಲೂ, ಎಲ್ಲಾ ಸಮಯದಲ್ಲೂ ಗೋವಿನ ಸಗಣಿ ಸಿಗುವುದು ಕಷ್ಟವಾದ್ದರಿಂದ ಸಗಣಿ ಬದಲು ಅಷ್ಟೇ ಪವಿತ್ರ ಎಂದು ಭಾವಿಸಲಾಗಿರುವ ಮಣ್ಣು ಹಾಗೂ ಗರಿಕೆಯನ್ನಿಟ್ಟು ಗಣೇಶನನ್ನು ಪೂಜಿಸುವ ಪದ್ಧತಿಯೂ ರೂಡಿಯಲ್ಲಿತ್ತು. ಕ್ರಮೇಣ ಮಣ್ಣಿನಲ್ಲಿ ತರಹೆವಾರಿ ಗಣಪತಿಗಳನ್ನು ಮಾಡಲು ಪ್ರಾರಂಭಿಸಿದರು. ಕ್ರಿಕೆಟ್ ಆಡುತ್ತಿರುವ ಭಂಗಿ, ಆಧುನಿಕ ಶೈಲಿಯ ಗಣೇಶ, ಹೀಗೆ ತಮ್ಮ ತಮ್ಮ ಭಾವನೆಗಳಿಗೆ ತಕ್ಕಂತೆ ಗಣೇಶನನ್ನು ತಯಾರಿಸಲು ಪ್ರಾರಂಭಿಸಿದರು. ಗಣೇಶನ ವಿಗ್ರಹಗಳ ತಯಾರಿಕೆ ವಿಕಾಸಗೊಂಡಿದ್ದು ಸಾರ್ವಜನಿಕವಾಗಿ ಗಣೇಶೋತ್ಸವಗಳು ಪ್ರಾರಂಭವಾದಮೇಲೆಯೇ ಎಂದು ಹೇಳಬಹುದು. ಆಕಾರವೇ ಇಲ್ಲದ ಪಿಳ್ಳಾರಿ ಗಣಪತಿಯಿಂದ ಹಿಡಿದು, ಬೃಹದಾಕಾರವಾದ ಇತ್ತೀಚಿನ ಬಾಹುಬಲಿ ಮಾದರಿಯ ಗಣಪತಿ ವರೆಗೂ ಗಣೇಶನ ವಿಗ್ರಹಗಳು ವಿಕಾಸಗೊಂಡಿದೆ. ವಿಕಾಸಗೊಂಡಷ್ಟೂ ಗಣೇಶ ಹಬ್ಬದ ಚತುರ್ಥಿಯ ಮೆರುಗು, ಸಂಭ್ರಮ ಹೆಚ್ಚುತ್ತಿದೆ. ಹಾಗೆಯೇ ಪರಿಸರ ಕಾಳಜಿಯೂ ಜಾಗೃತಗೊಂಡಿದ್ದು ಎಂದಿಗಿಂತ ಈ ಬಾರಿ ಪರಿಸರ ಸ್ನೇಹಿ ಗಣೇಶನ ವಿಗ್ರಹಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ.