ಬೆಳಗ್ಗೆ ಎದ್ದ ಕೂಡಲೇ ನೀರನ್ನು ಕುಡಿಯುವ ಪದ್ಧತಿಯನ್ನು ನಮ್ಮ ಪೂರ್ವಿಕರು ಉಷಃಪಾನ ಎನ್ನುತ್ತಿದ್ದರು.
ಮಾನವನ ಮೂಲ ಅಗತ್ಯಗಳಲ್ಲಿ ಗಾಳಿಗೆ ಮೊದಲನೇ ಸ್ಥಾನ, ನೀರು ಹಾಗೂ ಆಹಾರ ಎರಡು ಮತ್ತು ಮೂರನೇ ಸ್ಥಾನಗಳನ್ನು ಪಡೆಯುತ್ತವೆ.
ನೀರನ್ನು ಸೇವಿಸುವುದರಿಂದ ದೇಹದ ಧಾತುಗಳಿಗೆ ಪ್ರವಾಂಶ ಪೂರೈಕೆಯಾಗುವುದಲ್ಲದೆ, ಜೀರ್ಣಾಂಗಗಳನ್ನು ಶುದ್ಧೀಕರಿಸುತ್ತದೆ. 'ಊಟದ ನಂತರ ಮಜ್ಜಿಗೆ, ರಾತ್ರಿ ಮಲಗುವಾಗ ಹಾಲು ಮತ್ತು ಬೆಳಗಿನ ಜಾವ ನೀರನ್ನು ಕುಡಿಯುವುದು ಅಭ್ಯಾಸ ಮಾಡಿಕೊಂಡರೆ ವೈದ್ಯರ ಅವಶ್ಯಕತೆಯಿಲ್ಲ' ಎಂಬ ಸುಭಾಷಿತವೊಂದಿದೆ. ಈ ಅಭ್ಯಾಸದಿಂದ ಮಲಬದ್ಧತೆ, ಆಮ್ಲತೆ, ಮೂಲವ್ಯಾಧಿ, ರಕ್ತ ಕೆಡುವುದು ಮುಂತಾದ ತೊಂದರೆಗಳು ನಿವಾರಣೆಯಾಗುವುದು. ರಾತ್ರಿ ಮಲಗುವ ಮುನ್ನ ಕಾಲು ಲೀಟರಿನಷ್ಟು ನೀರನ್ನು ಕುದಿಸಿ ಆರಿಸಿ, ಚೆನ್ನಾಗಿ ತೊಳೆದ ತಾಮ್ರದ ಪಾತ್ರೆಯಲ್ಲಿಟ್ಟು ಬೆಳಗ್ಗೆ ಆ ನೀರನ್ನು ಕುಡಿದರೆ ಒಳ್ಳೆಯದು. ಅವರವರ ವೈಯಕ್ತಿಕ ಆರೋಗ್ಯದಂತೆ ಈ ಕ್ರಮವನ್ನು ತುಸು ಬದಲಿಸಿಕೊಳ್ಳಬಹುದು. ತಾಮ್ರದ ಪಾತ್ರೆಯಲ್ಲಿಟ್ಟು ನೀರನ್ನು ಕುಡಿಯುವುದರಿಂದ ತೊನ್ನು ರೋಗಿಗಳಿಗೆ ಒಳ್ಳೆಯದು. ಅರ್ಧ ಹಿಡಿಯಷ್ಟು ಕೆಂಪು ಹೊನ್ನೆ ಚಕ್ಕೆಯನ್ನು ಎರಡು ಲೋಟ ತಣ್ಣೀರಿನಲ್ಲಿ ನೆನೆಸಿಟ್ಟರೆ ಬೆಳಗ್ಗೆ ನೀರು ಕೆಂಪಾಗಾಗಿರುತ್ತದೆ. ಇದನ್ನು ಪ್ರತಿ ದಿನವೂ ಕುಡಿದರೆ ಮಧುಮೇಹಿಗಳಿಗೆ ರಕ್ತ ಹಾಗೂ ಮೂತ್ರದಲ್ಲಿ ಸಕ್ಕರೆ ಅಂಶ ಕಡಿಮೆಯಾಗುತ್ತದೆ.
- ಶಿವರಾಮ ಭಟ್ ಹತ್ತೊಕ್ಕಲು