ಆರು ವರ್ಷದ ಹರ್ಷನನ್ನು ಆತನ ಪೋಷಕರು ನನ್ನ ಬಳಿ ಕರೆ ತಂದಿದ್ದರು. ಆ ಮಗು ಅರೆ ಕ್ಷಣವೂ ಸುಮ್ಮನೆ ಕೂರದೇ, ಸಿಕ್ಕಸಿಕ್ಕ ವಸ್ತುಗಳನ್ನು ತೆಗೆದುಕೊಳ್ಳುವುದು, ಎಸೆಯುವುದು ಮಾಡುತ್ತಿದ್ದ. ಹೊರಕ್ಕೆ ಹೋಗುವುದು, ಒಳ ಬರುವುದೂ ಮಾಡುತ್ತಲೇ ಇದ್ದ.
ಅಬ್ಬಾ, ಕ್ಷಣ ಮಾತ್ರದಲ್ಲಿ ಆತನ ಚೇಷ್ಟೆ ಅಸಾಧ್ಯ. ಕಾಟ ತಾಳಲಾರದೇ ತಾಯಿ ಏಟು ಕೊಟ್ಟಳು. ಶಾಲೆಯಲ್ಲೂ ಕೂತಲ್ಲಿ ಕೂರೋಲ್ಲ ಎಂಬುದು ಟೀಚರ್ ದೂರು. ಸಾಲದಿದ್ದಕ್ಕೆ ಬೇರೆ ಮಕ್ಕಳಿಗೂ ತೊಂದರೆ ಕೊಡ್ತಾನೆ.
ಒಂದೈದು ನಿಮಿಷಗಳು ಹರ್ಷನನ್ನು ಗಮನಿಸಿದರೆ ಸಾಕಿತ್ತು, ಆತ ಅತಿ ಚಟುವಟಿಕೆ ಅಥವಾ "Attention deficit hyperactivity disorder/ ADHD' ಇದೆ ಎಂದು. ಶೇ.6-12 ಮಕ್ಕಳಲ್ಲಿ ಈ ತೊಂದರೆ ಇರುತ್ತದೆ. 'ಅತಿ ಚಟುವಟಿಕೆ' ಬಗ್ಗೆ ಬಹಳಷ್ಟು ಮಂದಿಗೆ ಮಾಹಿತಿಯೇ ಇರುವುದಿಲ್ಲ. ಪೋಷಕರಿಗೆ ಇರಲಿ, ಸ್ಕೂಲ್ ಟೀಚರ್ಸೂ ಈ ಸಮಸ್ಯೆ ಬಗ್ಗೆ ಜಾಗೃತರಾಗಿರೋಲ್ಲ. ಅದಕ್ಕೆ ಇಂಥ ಮಕ್ಕಳು ಶಾಲೆಯಲ್ಲಿ ಯಾವಾಗಲೂ ಶಿಕ್ಷೆ ಅನುಭವಿಸುತ್ತಲೇ ಇರುತ್ತಾರೆ. ಶಿಕ್ಷೆಯಿಂದಲೂ ತುಂಟತನ ಕಡಿಮೆಯಾಗುವುದಿಲ್ಲ. ಪರೀಕ್ಷೆಯಲ್ಲೂ ಉತ್ತಮ ಅಂಕಗಳು ಬರುವುದಿಲ್ಲ. ಆಗ ವೈದ್ಯರನ್ನು ಕಾಣಲು ಸಲಹೆ ನೀಡುತ್ತಾರೆ. ಈ ತೊಂದರೆಯನ್ನು ಬೇಗ ಗುರುತಿಸಿ ಚಿಕಿತ್ಸೆ ನೀಡಿದರೆ ಇದರಿಂದ ಆಗಬಹುದಾದ ಮಾನಸಿಕ ಸಮಸ್ಯೆಗಳನ್ನು ತಡೆಗಟ್ಟಬಹುದು.
ಏಕೆ ಹೀಗೆ, ಏಕೆ ಹೀಗೆ?
ಮಕ್ಕಳು ಹೈಪರ್ ಆ್ಯಕ್ಟಿವ್ ಆಗಲು ಇಂಥದ್ದೇ ಕಾರಣಗಳು ಎಂದು ಹೇಳಲಾಗದಿದ್ದರೂ, ವಂಶವಾಹಿನಿಗಳಾದ 'ಉಖಉ4' 'ಉಖಉ1' ಗಳಿದ್ದರೆ, ವಂಶಪಾರಂಪರ್ಯವಾಗಿ, ಪೋಷಕರ ವೈವಾಹಿಕ ಜೀವನದಲ್ಲಿ ವಿರಸವಿದ್ದಾಗ, ಪ್ರಸವದ ವೇಳೆ ತೊಂದರೆಗಳಾದರೆ ಮಗುವಿಗೆ ಈ ಸಮಸ್ಯೆ ಕಾಡಬಹುದು.
ತೀವ್ರತೆ ಮೇಲೆ ಚಿಕಿತ್ಸೆ
ಸಮಸ್ಯೆಯ ತೀವ್ರತೆ ಮೇಲೆ ಚಿಕಿತ್ಸೆ ನಿರ್ಧಾರವಾಗುತ್ತದೆ. ಸಮಸ್ಯೆ ಅತೀವವಾಗಿದ್ದರೆ ಒಳ್ಳೆ ಮಾತ್ರೆಗಳು ಫಲಕಾರಿ. ಕಡಿಮೆ ತೀವ್ರತೆಯಿದ್ದರೆ, ಕೇವಲ ನಡವಳಿಕೆ ಮೂಲಕವೇ ಚಿಕಿತ್ಸೆ ಸಾಕು. ಎಲ್ಲಕ್ಕಿಂತ ಹೆಚ್ಚಾಗಿ ಪೋಷಕರ ಜವಾಬ್ದಾರಿ ದೊಡ್ಡದು.
ಮನೆಯಲ್ಲಿ ಮಗುವಿಗೆ ಶಿಸ್ತನ್ನು ರೂಢಿಸಬೇಕು, ದೈನಂದಿನ ಚಟುವಟಿಕೆಗಳನ್ನು ಒಂದು ವೇಳಾಪಟ್ಟಿಗನುಗುಣವಾಗಿ ನಡೆಯುವಂತೆ (Planning and Organisational Skills) ನೋಡಿಕೊಳ್ಳಬೇಕು. ಮಗು ಒಳ್ಳೆ ಕೆಲಸ ಮಾಡಿದರೆ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು. ತಪ್ಪೆಸಗಿದಾಗ ಖಂಡಿಸಿ. ಏಕಾಗ್ರತೆ ಹೆಚ್ಚಲು, ವಯಸ್ಸಿಗೆ ತಕ್ಕಂತೆ ಕೆಲವು ಚಟುವಟಿಕೆಗಳನ್ನು ಮಕ್ಕಳಿಂದ ಮಾಡಿಸಬೇಕು.
ಉದಾ: ದಾರದಲ್ಲಿ ಮಣಿಗಳನ್ನು (ಬೇರೆ ಬೇರೆ ಬಣ್ಣದ್ದು) ಪೋಣಿಸುವುದು, ಚಿತ್ರಗಳಿಗೆ ಬಣ್ಣ ತುಂಬುವುದು, ಲೆಟರ್ ಕ್ಯಾನ್ಸಲೇಷನ್ ಟಾಸ್ಕ್, ಶಾಲೆಯಲ್ಲಿ ಮಗುವನ್ನು ಮುಂದಿನ ಬೆಂಚ್‌ನಲ್ಲಿ ಕೂರಿಸುವುದು. ಮಗುವಿನ ಗಮನ ಬೇರೆಡೆ ಹೋಗದಂತೆ ಕಡಿಮೆ ವಸ್ತುಗಳನ್ನು ಇಟ್ಟರೆ (Less distractions)ಹೈಪರ್ ಆ್ಯಕ್ಟಿವಿಟಿ ತೊಂದರೆಯಿಂದ ಮಕ್ಕಳನ್ನು ಮುಕ್ತಗೊಳಿಸಬಹುದು.
ಪತ್ತೆ ಹೇಗೆ?
ಈ ಕೆಳಗಿನ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೆ, ಮಗುವಿಗೆ ಅತಿ ಚಟುವಟಿಕೆ ಇದೆ ಎಂದರ್ಥ.
4 ಸ್ಕೂಲಿನ ನೋಟ್ಸ್, ಹೋಮ್‌ವರ್ಕ್ ಬರೆಯುವಾಗ, ಸರಿಯಾಗಿ ಗಮನ ಕೊಡದೇ, ಅಜಾಗರೂಕತೆಯಿಂದ ತಪ್ಪು ಮಾಡುವುದು.
4 ಒಂದು ಆಟ ಆಡುತ್ತಿದ್ದರೆ, ಕೆಲವೇ ಕ್ಷಣಗಳಲ್ಲಿ ಅದನ್ನು ಬಿಟ್ಟು ಬಿಡುವುದು.
4 ಮಾತನಾಡಿಸಿದರೆ, ಅದಕ್ಕೆ ಗಮನ ಕೊಡದೇ ಬೇರೆ ವಿಷಯಗಳಲ್ಲಿ ಆಸಕ್ತಿ ತೋರುವುದು.
4 ನಮ್ಮ ಸೂಚನೆಗಳನ್ನು ಪಾಲಿಸದಿರುವುದು ಮತ್ತು ಕೆಲಸ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸದಿರುವುದು.
4 ಕೆಲಸ ಕಾರ್ಯಗಳನ್ನು ಸುವ್ಯಸ್ಥಿತವಾಗಿ ಮಾಡದಿರುವುದು.
4 ಸ್ಕೂಲ್ ಹೋಂವರ್ಕ್ ಮಾಡದಿರುವುದು.
4 ಕೆಲಸಕ್ಕೆ ಬೇಕಾದ ವಸ್ತುಗಳನ್ನು ಪದೆಪದೇ ಕಳೆದುಕೊಳ್ಳುವುದು.
4 ಏಕಾಗ್ರತೆ ಕೊರತೆ.
4 ಯಾವಾಗಲೂ ಗಡಿಬಿಡಿಯಿಂದ ಇರುವುದು ಮತ್ತು ಓಡಾಡುತ್ತಿರುವುದು.
4 ವಿರಾಮದ ವೇಳೆಯಲ್ಲೂ ಬ್ಯುಸಿಯಾಗಿರುವುದು.
4 ಅವಶ್ಯಕತೆಗಿಂತ ಹೆಚ್ಚಿಗೆ ಮಾತನಾಡುವುದು.
4 ಪ್ರಶ್ನೆ ಪೂರ್ತಿಯಾಗುವುದಕ್ಕೆ ಮುಂಚೆಯೇ ಉತ್ತರಿಸುವುದು.
4 ಸರದಿ ಸಾಲಿನಲ್ಲಿ ನಿಲ್ಲಲು ತೊಂದರೆಪಡುವುದು.
4 ಬೇರೆಯವರು ಮಾತನಾಡುವಾಗ, ಮಧ್ಯೆ ಬಾಯಿ ಹಾಕುವುದು.
-ಡಾ. ಕೆ.ಎಸ್. ಶುಭ್ರತಾ