ಆರೋಗ್ಯ-ಜೀವನಶೈಲಿ

ಸಂಕೋಚದ ಮುದ್ದೆಗಳೇ...

ಎಲ್ಲಿಗೋ ತುರ್ತು ಕೆಲಸದ ನಿಮಿತ್ತ ಅವಸರವಾಗಿ ಹೊರಡಲು ಅಣಿಯಾಗಿರುತ್ತೀರಿ. ದಿಢೀರ್ ಎಂದು ಪಕ್ಕದ ಮನೆಯ ಆಸಾಮಿ ನಿಮ್ಮನೆಗೆ ಬಂದು ಕೂತು ಬಿಡುತ್ತಾನೆ. ನಿಮಗೆ ತುರ್ತು ಕೆಲಸ ಇರುವ ಬಗ್ಗೆ ಅವರಿಗೆ ಹೇಳಿದರೆ ಎಲ್ಲಿ ಬೇಜಾರು ಮಾಡಿಕೊಳ್ಳುತ್ತಾರೋ ಎಂದುಕೊಂಡು ಮನಸ್ಸಲ್ಲೇ ಕೊರಗುತ್ತಾ ನೀವೂ ಕೂತು ಬಿಡುತ್ತಿರಿ.
ಯಾರದೋ ಮನೆಗೆ ಹೋಗಿರುತ್ತೀರಿ. ನಿಮಗೆ ಹಸಿವಾಗಿರುತ್ತದೆ. ಮನೆ ಮಂದಿ ಊಟ ಮಾಡಲು ಕರೆಯುತ್ತಾರೆ. ನಿಮಗೆ ಹಸಿವಿದ್ದರೂ ಅಡುಗೆ ಇದೆಯೋ ಇಲ್ಲವೋ ಎಂಬ ಅನುಮಾನ. ಹೀಗಾಗಿ, 'ನಂಗೆ ಬೇಡ, ನಂದೂಟ ಆಯ್ತು' ಎನ್ನುತ್ತೀರಿ. ಏಕೆಂದರೆ 'ಸಂಕೋಚ'ದ ಪ್ರತಿನಿಧಿ ನೀವು.
ಜೀವನದಲ್ಲಿ ಒಬ್ಬ ವ್ಯಕ್ತಿಗೆ ಏನೇ ಕ್ರಿಯಾಶೀಲತೆ, ಬುದ್ಧಿವಂತಿಕೆ, ಜ್ಞಾನವಿದ್ದು ಅದರ ಜತೆಗೆ ಕೊಂಚ  'ಸಂಕೋಚ'ವಿದ್ದರೆ ಸಾಕು, ಅಷ್ಟೂ ಉತ್ತಮ ಗುಣಗಳನ್ನು ಅದು ಮಕಾಡೆ ಮಲಗಿಸಿ ಬಿಡುತ್ತದೆ. ನಮ್ಮೆಲ್ಲ ಹತಾಶೆ, ಕೊರಗು, ಅಸಹಾಯಕತೆ, ಚಡಪಡಿಕೆ ಹಿಂದೆ 'ಸಂಕೋಚ'ವೆಂಬುದು ಸದ್ದಿಲ್ಲದೆ ಮನೆ ಮಾಡಿರುತ್ತದೆ. ಕೆಲವರಿಗಂತೂ ಸಂಕೋಚದಿಂದ ಹೊರಬರಲು ಸಾಧ್ಯವೇ ಆಗುವುದಿಲ್ಲ.
ಹಾಗೆಂದ ಮಾತ್ರಕ್ಕೆ ಸಂಕೋಚ ಬೇಡವೇ ಬೇಡವೆಂದಲ್ಲ. ಅದು ಇತಿಮಿತಿಯಲ್ಲಿದ್ದರೆ ಚೆನ್ನ. ಸಂಕೋಚ ಅತಿಯಾದರೆ ಸಮಾಜದಲ್ಲಿ ಇತರರೊಡನೆ ಸಂಪೂರ್ಣ ಬೆರೆಯಲು ಆಗದೆ, ಸಂವಹನ ಸಾಮರ್ಥ್ಯವೂ ಕುಗ್ಗಿ, ಏಕಾಂಗಿಯಾಗುವತ್ತ ಮನಸ್ಸು ವಾಲುತ್ತದೆ. ಸಂಕೋಚದ ಜತೆಗೆ 'ದಾಕ್ಷಿಣ್ಯ'ವಿದ್ದರಂತೂ ಮುಗಿದೇ ಹೋಯ್ತು. ಎಲ್ಲೆಂದರಲ್ಲಿ ಮುಲಾಜಿಗೆ ಸಿಲುಕಿ ನಿಮ್ಮಷ್ಟಕ್ಕೆ ನೀವೇ ಅಥವಾ ಇತರರಿಗೆ ಸಹಾಯ ಮಾಡಲು ಹೋಗಿ ತಾವೇ ಸಮಸ್ಯೆಗೆ ಸಿಲುಕುವಂತೆ ಮಾಡಿಬಿಡುತ್ತವೆ.
ಒಂದೇ ಬಾರಿಗೆ ಈ ಸಂಕೋಚಕ್ಕೆ ಗುಡ್‌ಬೈ ಹೇಳಲು ಸಾಧ್ಯವಾಗದಿದ್ದರೂ ನಮ್ಮ ನಿತ್ಯದ ಜೀವನದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿಕೊಂಡರೆ ಸಂಕೋಚದಿಂದ ಮೈಕೊಡವಿ ಮೇಲೇಳಬಹುದು.

ಅದು ಹೇಗೆಂದರೆ...

  • ಪ್ರತಿಯೊಬ್ಬರಿಗೂ ಕೊಂಚ ಸಂಕೋಚ ಅಗತ್ಯ. ಅದರೆ, ಅದನ್ನು ಸುಳ್ಳು ಹೇಳುವಾಗ, ತಪ್ಪು ಮಾಡುವಾಗ ಮಾತ್ರ ಬಳಸಿ. ಬದುಕಲ್ಲಿ ಸಂಕೋಚವಿರಲಿ. ಆದರೆ, ಅದೇ ಬದುಕಾಗದಿರಲಿ.
  • ಇಲ್ಲಿ ಯಾರೂ ಪರಿಪೂರ್ಣರಲ್ಲ. ಇತರರೊಡನೆ ಮುಕ್ತಮನಸ್ಸಿನಿಂದ ಬೆರೆಯಲು ಪ್ರಯತ್ನಿಸಿ. ನನಗೇನೂ ಗೊತ್ತಿಲ್ಲ. ಯಾರೇನು ಅಂದುಕೊಳ್ಳುತ್ತಾರೋ ಎಂಬ ಹಿಂಜರಿಕೆ ಬೇಡವೇ ಬೇಡ.
  • ಯಾರೊಂದಿಗಾದರೂ ಮಾತನಾಡುವಾಗ, ನಡೆಯುವಾಗ ನೇರವಾಗಿ ನಿಂತುಕೊಳ್ಳುವ, ದೃಢವಾಗಿ ನಡೆಯುವ ಆತ್ಮವಿಶ್ವಾಸ ಬೆಳೆಸಿಕೊಳ್ಳಿ.
  • ಸಂಕೋಚವೆಂಬುದು 'ಸಂಪನ್ನ ಗುಣ' ಎಂದು ಬೇರೆಯವರಿಗೆ ತೋರಿಸುವ ಹಪಾಹಪಿ ಬೇಡವೇಬೇಡ. ಅದರಿಂದ ಅನಾನುಕೂಲ ಕಟ್ಟಿಟ್ಟ ಬುತ್ತಿ.
  • ಯಾರದ್ದೋ ಮುಲಾಜಿಗೆ, ಇನ್ನಾರನ್ನೋ ಮೆಚ್ಚಿಸಲು, ಮತ್ತಾರನ್ನೋ ಬೇಸರಗೊಳಿಸದಿರಲು 'ಬಲವಂತಕ್ಕೆ ಬಸ್ ಹತ್ತಲೇಬೇಡಿ'.
  • ಸರಿಯೋ ತಪ್ಪೋ, ಇತರರು ನಿಮ್ಮನ್ನು 'ಕೆಟ್ಟವರು' ಎಂದುಕೊಂಡರೂ ಪರ್ವಾಗಿಲ್ಲ. ಹೇಳಬೇಕಾದ್ದನ್ನು ನೇರವಾಗಿಯೇ ಹೇಳಿ.
  • ಸಂಕೋಚ ನಿಮ್ಮಿಷ್ಟದಂತೆ ನಿಮ್ಮನ್ನು ಇರಲು ಬಿಡುವುದಿಲ್ಲ. ಅದು ನಮ್ಮ ಬಾಯಿಯನ್ನೆ ಕಟ್ಟಿಹಾಕಿಬಿಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ಸಂಕೋಚದಿಂದ ಹೊರಬರಲು ಪ್ರಯತ್ನಿಸಿ.
  • ಸಂಕೋಚದಿಂದ ಸಾಧ್ಯವಾದಷ್ಟು ದೂರವಿರಲು ಸ್ನೇಹಿತರೊಡನೆ ಕಾಲ ಕಳೆಯಿರಿ. ಸಾಧ್ಯವಾದಷ್ಟು ಉತ್ತಮ ಪುಸ್ತಕ ಓದುವ, ಧ್ಯಾನ, ಕ್ರೀಡೆಗಳ ಮೊರೆ ಹೋಗಬಹುದು. ಇದರಿಂದ ದಿಟ್ಟತೆ, ತಪ್ಪು ಮಾಡದಂಥ ಪ್ರವೃತ್ತಿ ಬೆಳೆಯುತ್ತದೆ.
  • ತುಂಬಾ ಸಂಕೋಚ ಸ್ವಭಾವದವರ ಜತೆಗೆ ಸದಾ ಇರಬೇಡಿ. ಸಾಧ್ಯವಾದಷ್ಟು ನೇರ ಸ್ವಭಾವದ ಸ್ನೇಹಿತರೊಡನೆ ಬೆರೆಯಿರಿ. ಅವರೊಟ್ಟಿಗೆ ನಿಮ್ಮ ಸಂಕೋಚದ ಸಮಸ್ಯೆಯನ್ನು ಹೇಳಿಕೊಳ್ಳಿ.
  • ಇತರರೊಡನೆ ಸಂವಹನ ನಡೆಸುವಾಗ ಭಾಷೆಯ ತೊಡಕಾದರೆ, ನಿಮಗೆ ಗೊತ್ತಿದ್ದ ಭಾಷೆಯಲ್ಲಿಯೇ ಸ್ಪಷ್ಟವಾಗಿ, ನಿಖರವಾಗಿ ಮಾತನಾಡಿ. ಜತೆಯವರೊಂದಿಗೆ ಆತ್ಮವಿಶ್ವಾಸದಿಂದ ಮಾತನಾಡಿ. ಯಾರದ್ದೋ ಗುಣ, ನಡತೆ ಇಷ್ಟವಾಗಲಿಲ್ಲವೆಂದು ನಿಮ್ಮಷ್ಟಕ್ಕೆ ನೀವೇ ಮುಖ ತಿರುಗಿಸಿಕೊಳ್ಳಬೇಡಿ.
  • ನಮ್ಮ ಉಡುಗೆ-ತೊಡುಗೆ, ನಡೆ-ನುಡಿ, ಭಾಷೆಯನ್ನು ಇತರರೊಡನೆ ಹೋಲಿಸಿಕೊಂಡಾಗ ಸಹಜವಾಗಿಯೇ ಸಂಕೋಚ ನುಸುಳಿಬಿಡುತ್ತದೆ. ಹಾಗಾಗಿ ಯಾವ್ಯಾವ ಸಂದರ್ಭ, ಸನ್ನಿವೇಶಗಳಲ್ಲಿ ಸಂಕೊಚ ನುಸುಳುತ್ತದೆ ಎಂಬುದನ್ನು ಗುರುತಿಸಿಕೊಂಡು, ಅಂಥ ಸಂದರ್ಭಗಳಲ್ಲಿ 'ಹೇಗಿರಬೇಕು?, ಏನು ತಪ್ಪಾಗುತ್ತದೆ?' ಮುಂದೆ ಹೇಗೆ ನಿಭಾಯಿಸಿಕೊಳ್ಳಬೇಕೆಂಬುದನ್ನು ಯೋಚಿಸಿ, ಅದೇ ರೀತಿ ನಡೆದುಕೊಳ್ಳಲು ಪ್ರಯತ್ನಿಸಿ.
- ಗಣೇಶ್ ಕಮ್ಲಾಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!