ಗರ್ಭಿಣಿಗೆ ಮೆನು
ಸಿಹಿ ಇರಲಿ, ಕಹಿ ಇರಲಿ ಗರ್ಭಿಣಿಯರಿಗೆ ಕಂಡಿದ್ದೆಲ್ಲಾ ತಿನ್ನಬೇಕೆಂಬ ಆಸೆ. ತಿನ್ನಲು ಕುಳಿತರೆ ಏನೂ ಸೇರುವುದಿಲ್ಲ. ಒಂದೆರಡು ತುತ್ತು ತಿಂದು ಮೇಲೇಳುತ್ತಾರೆ. ಆ ಮೇಲೆ ಮತ್ತೊಂದರೆಡೆ ಗಮನಹರಿಸುತ್ತಾರೆ. ಮಾಡರ್ನ್ ಯುಗದಲ್ಲಿ ಮೈಮಾಟ ಚೆನ್ನಾಗಿರಲೆಂದು ಡಯೆಟ್ ಮಾಡಿದವರಿಗಂತೂ ತುಸು ಕಷ್ಟವೇ ಸರಿ. ಅದು ಬೇಡ, ಇದು ಬೇಡ ಎಂಬ ರಗಳೆಯ ಮಧ್ಯೆ 'ಬಯಕೆ' ಬೆಟ್ಟದಷ್ಟಾಗುತ್ತದೆ. 'ಇಷ್ಟ- ಕಷ್ಟ'ದ ಬಯಕೆ ಮಾತ್ರ ತೀರುವುದಿಲ್ಲ. ಹೀಗಾಗಿ ಬದಲಾದ ಜೀವನ ಶೈಲಿಯಲ್ಲಿ ಗರ್ಭಿಣಿಯರಿಗೆ ಉತ್ತಮ ಹಾಗೂ ಆರೋಗ್ಯಕರವಾದ 'ಫಾಸ್ಟ್ ಫುಡ್' ಟಿಪ್ಸ್ ಇಲ್ಲಿವೆ...
- ಹಣ್ಣುಗಳು ಆರೋಗ್ಯಕ್ಕೆ ಉತ್ತಮ. ಸೇಬು, ಹಲಸು, ಬಾಳೇಹಣ್ಣು, ಪೇರಲ, ಕಿತ್ತಳೆ, ಮೊಸಂಬಿ ಸೇರಿದಂತೆ ಇನ್ನಿತರೆ ಹಣ್ಣುಗಳನ್ನು ಜ್ಯೂಸ್ ಮಾಡಿಕೊಂಡು ಪ್ರತಿದಿನ ಕುಡಿಯಿರಿ. ಜ್ಯೂಸ್ ಕುಡಿಯಲು ತೊಂದರೆ ಎನಿಸಿದರೆ ಕತ್ತರಿಸಿ ಆಗಾಗ ತಿನ್ನುತ್ತಿರಿ. ಇದರಿಂದ ಪೌಷ್ಟಿಕಾಂಶದ ಜತೆಗೆ 'ಬಯಕೆ'ಯೂ ಈಡೇರುತ್ತದೆ.
- ಹಸಿ ತರಕಾರಿ ಗರ್ಭಿಣಿಯರಿಗೆ ತುಂಬಾ ಸಹಕಾರಿ. ಟೊಮೇಟೊ, ಕ್ಯಾರೆಟ್, ಸೌತೆಕಾಯಿ, ಸೊಪ್ಪು ಸೇರಿದಂತೆ ಇತರೆ ಹಸಿ ತರಕಾರಿ ತಿನ್ನುವುದರಿಂದ ಆರೋಗ್ಯಕರ ಹೆರಿಗೆಗೆ ಸಹಾಯಕವಾಗುತ್ತದೆ.
- ನಿತ್ಯ ಕನಿಷ್ಠ 6 ಚಮಚದಷ್ಟು ಕೆನೆ ಮೊಸರು ಸೇವಿಸಿ. ಇದರಿಂದ ಜೀರ್ಣಕ್ರಿಯೆಗೆ ಸಹಾಯಕವಾಗುತ್ತದೆ. ಅಲ್ಲದೇ ಪೌಷ್ಟಿಕಾಂಶ ಹಾಗೂ ಖನಿಜಾಂಶಗಳೂ ಹೇರಳವಾಗಿ ಲಭ್ಯವಾಗುತ್ತವೆ.
- ಹಣ್ಣು, ಮೊಸರು ತಿನ್ನುವುದರ ಜತೆಗೆ ಒಣ ದ್ರಾಕ್ಷಿ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ. ಇದರಿಂದ ಪೊಟ್ಯಾಷಿಯಂ, ಖನಿಜಾಂಶಗಳು ದೇಹ ಸೇರುತ್ತವೆ. ಇದು ಹುಟ್ಟಲಿರುವ ಮಕ್ಕಳ ಹಲ್ಲನ್ನು ಗಟ್ಟಿಮುಟ್ಟಾಗಿ ಬೆಳೆಯಲು ಸಹಾಯ ಮಾಡುತ್ತದೆ. ಬಾದಾಮಿ, ಕೇಸರಿ ತಿನ್ನುವುದು ರೂಢಿಸಿಕೊಳ್ಳಿ.
- ಮನೆಯಲ್ಲೇ ಲಭ್ಯವಾಗುವ ದ್ವಿದಳ ಧಾನ್ಯಗಳನ್ನು ನೆನೆಸಿ ಮೊಳಕೆಯೊಡೆಸಿ ನಿತ್ಯ ಒಂದು ಕಪ್ಪಿನಷ್ಟು ತಿನ್ನಿ. ಕಚೇರಿ ಅಥವಾ ಹೊರಗಡೆ ತೆರಳುವಾಗ ಬ್ಯಾಗ್ನಲ್ಲಿಟ್ಟುಕೊಂಡು ಹೋಗಿ. ಬಿಡುವಿದ್ದಾಗ ತಿನ್ನಿ.
- ವಿಟಮಿನ್ 'ಎ' ಹೆಚ್ಚಿಗೆ ಲಭ್ಯವಾಗುವುದು ಕ್ಯಾರೆಟ್ನಲ್ಲಿ. ನಿತ್ಯ ಒಂದು ಅಥವಾ ಎರಡು ಕ್ಯಾರೆಟ್ ತಪ್ಪದೇ ತಿನ್ನಿ. ಕಚೇರಿಗೆ ಹೋಗುವಾಗ ಸಣ್ಣ ತುಂಡುಗಳಾಗಿ ಮಾಡಿಕೊಂಡು ಚಿಕ್ಕ ಬಾಕ್ಸ್ನಲ್ಲಿಟ್ಟುಕೊಂಡು ಹೋಗಿ. ಮಧ್ಯಾಹ್ನ ಊಟ ಅಥವಾ ಟೀ ಸಮಯದಲ್ಲಿ ತಿನ್ನಿ.
- ಒಂದು ಗ್ಲಾಸ್ ಗಿಣ್ಣನ್ನು ಸೇವಿಸಿ. ಒಂದು ಗ್ಲಾಸ್ ಗಿಣ್ಣು, 8 ಗ್ಲಾಸ್ ಹಾಲಿಗೆ ಸಮ.
- ಕಿತ್ತಳೆಹಣ್ಣಿನಲ್ಲಿ ವಿಟಮಿನ್ 'ಡಿ' ಹಾಗೂ ಕ್ಯಾಲ್ಸಿಯಂ ಹೇರಳವಾಗಿ ದೊರೆಯುತ್ತದೆ. ನಿತ್ಯ ಕನಿಷ್ಠ ಎರಡು ಕಿತ್ತಳೆ ಹಣ್ಣು ತಿನ್ನುವ ಅಥವಾ ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿಯಿರಿ.
- ಫೋಲಿಕ್ ಆ್ಯಸಿಡ್ ಲಭ್ಯವಾಗುವ ದ್ವಿದಳ ಧಾನ್ಯ ಹೆಚ್ಚು ಸೇವಿಸಿ. ಕಚೇರಿ ಅಥವಾ ಹೊರಗಡೆ ಹೋಗುವಾಗ ಬಾಕ್ಸ್ನಲ್ಲಿಟ್ಟುಕೊಂಡು ಹೋಗಿ. ಬಿಡುವಿದ್ದಾಗ ತಿನ್ನುವ ರೂಢಿ ಬೆಳೆಸಿಕೊಳ್ಳಿ.
- ಬೊಜ್ಜು ರಹಿತ ಗಟ್ಟಿ ಪದಾರ್ಥ ಹಾಗೂ ಆಹಾರ ಸೇವಿಸಿ. ಇದರಿಂದ ಅನವಶ್ಯಕ ಬೊಜ್ಜು ಬೆಳೆಯುವುದು ತಪ್ಪುತ್ತದೆ. 'ಬಯಕೆ'ಯಾಗುತ್ತಿದೆ ಎಂದು ಕಂಡ ಕಂಡದ್ದನ್ನೆಲ್ಲಾ ತಿನ್ನಬೇಡಿ.
- ಅಶ್ವಿನಿ ಮೂಲಿಮನಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.