ಸಪೂರ ದೇಹ. ವಯಸ್ಸಿಗೆ ತಕ್ಕಷ್ಟು ತೂಕ. ಒಟ್ಟಿನಲ್ಲಿ ಸ್ಲಿಮ್- ಫಿಟ್ ಆಗಿ ಕಾಣಬೇಕು. ಇದು ಎಲ್ಲರ ಕಣ್ಣು ಕುಕ್ಕುವಂತಿರಬೇಕು. ನಡೆದರೆ ಅದು ಕ್ಯಾಟ್‌ವಾಕ್‌ನಂತಿರಬೇಕು. ಹೀಗೆ ಬಾಡಿ ಫಿಟ್ನೆಸ್ ಬಗ್ಗೆ ಬೇಕುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ಈ ಬೇಕುಗಳನ್ನು ಈಡೇರಿಸಿಕೊಳ್ಳೋದು ಹೇಗೆ?
ಎಲ್ಲರೂ ಹೇಳುತ್ತಾರೆ; 'ನಾನು ಹೊಟ್ಟೆ ಕರಗಿಸುತ್ತೇನೆ, ಅದಕ್ಕಾಗಿ ಸಾಕಷ್ಟು ಕಸರತ್ತುಗಳನ್ನೂ ಮಾಡುತ್ತೇನೆ. ಅದಕ್ಕೆ ಯಾಕೆ ಅಲ್ಲಿ, ಇಲ್ಲಿ ಹೋಗಿ ದುಡ್ಡು ಹಾಳುಮಾಡಲಿ? ನಾನೇ ಮಾಡಿಕೊಳ್ಳುತ್ತೇನೆ'. ಹಾಗೆ ಒಂದೇ ಬಾರಿಗೆ ತಮ್ಮ ದೇಹದ ತೂಕ ಇಳಿಸಬೇಕು ಎಂದು ಪಣ ತೊಟ್ಟು ಸಾಮರ್ಥ್ಯ ಮೀರಿ ವರ್ಕೌಟ್ ಮಾಡಿ ಅನಾರೋಗ್ಯಕ್ಕೆ ಬೀಳುತ್ತಾರೆ. ಹಾಗೆಂದ ಮಾತ್ರಕ್ಕೆ ಹೊಟ್ಟೆ ಕರಗಿಸಿ ಸ್ಲಿಮ್ಮಾಗಲು ಸ್ವ-ಪ್ರಯತ್ನದಿಂದ ಸಾಧ್ಯವಿಲ್ಲವೇ? ಸಾಧ್ಯವಿದೆ. ಮೊದಲು ನಿತ್ಯ 20 ನಿಮಿಷ ವಾಕ್ ಮಾಡಿ. ಇದು ನಿಮ್ಮ ಬೊಜ್ಜನ್ನು ಕರಗಿಸುತ್ತದೆ. ಆ ನಂತರ ಈ ಕೆಳಗಿನ 3 ಟಿಪ್ಸ್ ಅನ್ನು ಅಳವಡಿಸಿಕೊಳ್ಳಿ...
ಬೈಸಿಕಲ್ ಕ್ರಂಚ್
ಇದನ್ನು ಕನ್ನಡದಲ್ಲಿ ಹೇಳುವುದಕ್ಕಿಂತ ಇಂಗ್ಲಿಷಿನಲ್ಲಿ ಅರ್ಥೈಸಿಕೊಳ್ಳುವುದೇ ಒಳಿತು. ಇದನ್ನು ಮಾಡಲು ನಿಮಗೇನು ಸೈಕಲ್ ಬೇಕೆಂದೇನೂ ಇಲ್ಲ. ಮೊದಲು ನೆಲದ ಮೇಲೆ ಬಟ್ಟೆ ಹಾಸಿಕೊಳ್ಳಿ, ಅಂಗಾತ (ಮೇಲ್ಮುಖವಾಗಿ ದೇಹ) ಮಲಗಿ. ಈ ಸಂದರ್ಭದಲ್ಲಿ ನಿಮ್ಮ ಎರಡೂ ಕೈಗಳನ್ನು ತಲೆಯ ಹಿಂಬದಿ ಮಡಚಿಟ್ಟುಕೊಳ್ಳಿ. ನಂತರ ಕಾಲುಗಳನ್ನು 45 ಡಿಗ್ರಿ ಆಯಾಮದಲ್ಲಿ ಮಡಚಿಕೊಂಡು ಸೈಕಲ್ ತುಳಿಯುವ ಹಾಗೆ ಕಾಲುಗಳನ್ನು ಚಲಿಸಿ. ಇದು ಸೈಕಲ್ ತುಳಿಯುವ ಮಾದರಿ ಇರಬೇಕು. ಅಂದರೆ ಮೊದಲು ಬಲಗಾಲನ್ನು ಬಳಸಿದಲ್ಲಿ ನಂತರ ಎಡಗಾಲು. ಹೀಗೆ ಒಂದೆರಡು ನಿಮಿಷದಂತೆ ದಿನಕ್ಕೆ ಮೂರು ಬಾರಿ ಮಾಡಿ. ನಿಮ್ಮ ದೇಹ ಪಕ್ಕಾ ಫಿಟ್ ಆಗಿರುತ್ತದೆ. ಆದರೆ ಹಸಿದ ಹೊಟ್ಟೆಯಲ್ಲಿ ಇದನ್ನು ಮಾಡಬೇಕು. ಸಮಯವನ್ನು ನೀವೇ ಹೊಂದಾಣಿಕೆ ಮಾಡಿಕೊಳ್ಳಬೇಕು. ಇದರಿಂದ ನಿಮ್ಮ ಹೊಟ್ಟೆ ಕರಗುವುದರ ಜತೆಗೆ, ಕಾಲು ಹಾಗೂ ತೊಡೆಗಳ ಸ್ನಾಯುಗಳೂ ಬಲಗೊಳ್ಳುತ್ತವೆ.
ಬೋಟ್
ಇದಕ್ಕಾಗಿ ಬೋಟಿಂಗ್ ಹೋಗಬೇಕಾ ಎಂದು ಕೇಳಬೇಡಿ. ನೆಲದ ಮೇಲೆ ಕುಳಿತುಕೊಳ್ಳಿ. ಕಾಲನ್ನು ಹಾಗೂ ತಲೆಯನ್ನು ದೋಣಿಯಾಕಾರದಲ್ಲಿ ಎತ್ತಿ ಹಿಡಿಯಬೇಕು. ಅಂದರೆ, ಇಂಗ್ಲಿಷಿನ 'ವಿ' ಆಕಾರದಲ್ಲಿ. ನಿಮ್ಮ ಹೊಟ್ಟೆಯಿಂದ ಸಮತೋಲನದಲ್ಲಿರಬೇಕು. ಮಂಡಿಯು ಭುಜದ ನೇರ ಇರುವಂತೆ ಮಾಡಿಕೊಂಡ ಮೇಲೆ 5 ಬಾರಿ ನಿಧಾನವಾಗಿ ಉಸಿರಾಡಬೇಕು. ನಂತರ ಸಹಜ ಸ್ಥಿತಿಗೆ ಮರಳಬೇಕು. ಹೀಗೆ ದಿನಕ್ಕೆ 5ರಿಂದ 6 ಬಾರಿ ಮಾಡಿದರೆ ಸಾಕು. ಹೊಟ್ಟೆ ಮುಂದೆ ಬರುವುದೇ ಇಲ್ಲ. ಇದರಿಂದ ಬೆನ್ನೆಲುಬು ನಿಮಗೆ ಬೇಕಾದಂತೆ ಹೊಂದಿಕೊಳ್ಳುತ್ತದೆ. ಮಧ್ಯದ ಹಾಗೂ ಕೆಳಗಿನ ಬೆನ್ನೆಲುಬಿಗೆ ಆರಾಮದಾಯಕವಾಗುತ್ತದೆ.
ಪ್ಲಾಂಕ್
ಅಂಗಾತ (ಮುಖ ಕೆಳಗೆ ಮಾಡಿ) ಮಲಗಿ, ಎರಡೂ ಮುಂಗೈಗಳನ್ನು (ಅಂದರೆ ಮೊಣಕೈಯಿಂದ ಕೈ ವರೆಗಿನ ಭಾಗವನ್ನು ನೆಲದ ಮೇಲೂರಿ, ಕಾಲುಗಳನ್ನು ತುದಿ ಬೆರಳಿನ ಮೇಲೆ ಸಮತೋಲನ ಸಾಧಿಸಬೇಕು. ಈ ಸಂದರ್ಭದಲ್ಲಿ ಮೊಣಕೈ 90 ಡಿಗ್ರಿ ಬಾಗಿರಬೇಕು. ಕಾಲುಗಳು ನೇರವಾಗಿಟ್ಟು 10 ಸೆಕೆಂಡ್ ಹಾಗೆಯೇ ಇರಬೇಕು. ಇದನ್ನು ನಿತ್ಯ ಮಾಡುತ್ತಾ 40 ಸೆಕೆಂಡ್‌ಗಳ ವರೆಗೆ ಹೆಚ್ಚಿಸಿಕೊಳ್ಳಬಹುದು. ಹೀಗೆ ಮಾಡುವುದರಿಂದ ತೆಳ್ಳನೆಯ ದೇಹ, ಹೊಟ್ಟೆ ಕರಗಿಸುವುದು, ಮಾಂಸಖಂಡಗಳ ಫಿಟ್ನೆಸ್‌ಗಳ ಜತೆ ಸಿಕ್ಸ್‌ಪ್ಯಾಕ್ ಹೊಂದಲೂ ಇದು ಸಹಕಾರಿ.
- ಶ್ರೀನಿವಾಸ್ ರಾವ್