ಮಕ್ಕಳಿಗೆ ಅಗತ್ಯ ಆಹಾರ ನೀಡುತ್ತಿದ್ದೇವೆ. ಆದರೂ ವಯಸ್ಸಿಗೆ ತಕ್ಕಂತೆ ಬೆಳೆಯುತ್ತಿಲ್ಲ. ಇದೇಕೆ ಎಂಬ ಚಿಂತೆ ಪ್ರತಿಯೊಬ್ಬ ಪೋಷಕರನ್ನೂ ಕಾಡುವುದು ಸಹಜ. ಎತ್ತರವಾಗುತ್ತಾರೆ. ಆದರೆ, ಸಹಜವಾಗಿ ದಪ್ಪ ಆಗುವುದಿಲ್ಲ. ಮಕ್ಕಳು ದಪ್ಪವಾಗದಿರಲು ಅರೆಜೀರ್ಣತೆಯೂ ಒಂದು ಕಾರಣ. ಆಹಾರ ಜೀರ್ಣವಾಗುತ್ತಿದ್ದರೂ, ಜೀವಸತ್ವಗಳನ್ನು ಹೀರುವಲ್ಲಿ ವಿಫಲವಾಗುವ ಸಮಸ್ಯೆಯಿದು. ಹೊಟ್ಟೆಯಲ್ಲಿರುವ ಹುಳುಗಳು ಎಲ್ಲ ಪೋಷಕಾಂಶಗಳನ್ನು ಹೀರಿ ಮಗುವಿನ ಗಾತ್ರಕ್ಕೆ ಕೊಡಲಿಪೆಟ್ಟು ಹಾಕುತ್ತವೆ. ಇದಕ್ಕೆ ಡಿ-ವಾರ್ಮಿಂಗ್ ಒಂದೇ ಚಿಕಿತ್ಸೆ.
ಯಾವಾಗಲೂ ವರ್ಕ್‌ಔಟ್ ಆಗೋಲ್ಲ
ಎಲ್ಲ ಸಮಯದಲ್ಲೂ ಡಿ-ವಾರ್ಮಿಂಗ್ ಚಿಕಿತ್ಸೆ ಫಲಕಾರಿಯಾಗುವುದಿಲ್ಲ. ರಕ್ತ ಪರೀಕ್ಷೆಯಿಂದ ಸಿಲಿಯೇಕ್ ಡಿಸೀಸ್ ಎಂದರೆ ಸಣ್ಣ ಕರುಳಿನ ಒಳಭಾಗದಲ್ಲಿ ತಿಂದ ಅಥವಾ ನುಂಗಿದ ಆಹಾರದಿಂದ ಗಾಯವಾಗುವ ಸಮಸ್ಯೆಯೂ ಒಮ್ಮೊಮ್ಮೆ ಕಾರಣವಾಗಲಿದೆ. ಇದಿರಂದ ರಕ್ತ ಹೀನತೆ ಹಾಗೂ ಮೂಳೆ ಸಾಂದ್ರತೆ ಸಮಸ್ಯೆ ಮಕ್ಕಳನ್ನು ಕಾಡುತ್ತದೆ. ಹೀಗೆ ಗಾಯವಾದರೂ ನ್ಯೂಟ್ರಿಯಂಟ್ಸ್ ಹೀರುವಲ್ಲಿ ಸಮಸ್ಯೆಯಾಗುತ್ತದೆ. ಗೋದಿ, ಬಾರ್ಲಿಯಂಥ ಆಹಾರ ಪದಾರ್ಥಗಳಲ್ಲಿರುವ ಗ್ಲುಟನ್ ಸೇವನೆಯಿಂದ ಈ ಸಮಸ್ಯೆ ಕಾಡುತ್ತದೆ. ಸಣ್ಣ ಕರುಳಿನಲ್ಲಿರುವ ಬೆರಳಿನಾಕೃತಿಯ ವಿಲ್ಲಿ ಎಂಬ ರಚನೆ ಗ್ಲುಟನ್‌ನಿಂದ ಉಂಟಾಗುವ ವಿಷದಿಂದ ಹಾನಿಗೊಳಗಾಗುತ್ತದೆ. ಫೋಲಿಕ್ ಆ್ಯಸಿಡ್, ಕಬ್ಬಿಣಾಂಶ, ವಿಟಮಿನ್ ಬಿ12 ಮತ್ತು ಡಿ ಪೋಷಕಾಂಶಗಳು ಹೀರಿಕೊಳ್ಳಲು ರಚಿತವಾಗಿರುವ ರಚನೆಗಳಿಗೆ ಹಾನಿಯುಂಟಾದಾಗ ಕೆಲಸ ನಿಲ್ಲಿಸುತ್ತವೆ. ಹೀಗಾಗಿ ದೇಹಕ್ಕೆ ಪೋಷಕಾಂಶಗಳು ಸೂಕ್ತ ಪ್ರಮಾಣದಲ್ಲಿ ತಲುಪದೆ ಬೆಳೆವಣಿಗೆ ಕುಂಠಿತಗೊಳ್ಳುತ್ತದೆ.
ಕೈ ತೊಳೆದು ತಿನ್ನಲಿ
ಆಟವಾಡಿದ ನಂತರ ಕೈ ತೊಳೆಯದಿರುವುದರಿಂದಲೂ ವಾರ್ಮ್ ಇನ್‌ಫೆಸ್ಟೇಷನ್‌ನಿಂದ ಮಕ್ಕಳು ಬಳಲುವಂತಾಗಬಹುದು. ಲ್ಯಾಕ್ಟೋಸ್‌ನ ಕಡೆಗಣನೆಯೂ ಅರೆ ಜೀರ್ಣತೆಗೆ ಕಾರಣ. ಕೆಲವು ಸಂದರ್ಭಗಳಲ್ಲಿ ಸಿಸ್ಟಿಕ್ ಫೈಬ್ರೊಸಿಸ್ ಮತ್ತು ಸ್ವಾಚ್‌ಮನ್ ಡೈಮಂಡ್‌ನ ಸಹ ಲಕ್ಷಣಗಳೂ ಇದಕ್ಕೆ ಕಾರಣವಾಗಬಲ್ಲದು. ಫೋಲಿಕ್ ಆ್ಯಸಿಡ್ ಮತ್ತು ಬಿ12 ಹಾಗೂ ಖನಿಜಾಂಶಗಳನ್ನು ಬ್ಯಾಕ್ಟೀರಿಯಾಗಳು ತಿನ್ನುವುದರಿಂದಲೂ ಮಕ್ಕಳಲ್ಲಿ ಅಪೌಷ್ಟಿಕತೆ ಕಾಡುತ್ತದೆ. ಕೊಬ್ಬಿನಾಂಶ ದೇಹ ಹೀರಿಕೊಳ್ಳಬೇಕು. ಎ, ಡಿ, ಇ ಮತ್ತು ಕೆ ವಿಟಮಿನಗಳೊಂದಿಗೆ ಸೂಕ್ತ ಜೀವಸತ್ವ ಮತ್ತು ಖನಿಜಾಂಶಗಳು ಸಿಗದೆ ದೇಹ ಬಡವಾಗುತ್ತದೆ.
ಚಿಕಿತ್ಸೆಗೆ ನೀಡಿ ಒತ್ತು
ಸಾಮಾನ್ಯವಾಗಿ 9ನೇ ವಯಸ್ಸಿನಲ್ಲಿ ಕಂಡು ಬರುವ ಸಿಲಿಯೇಕ್ ರೋಗ ಕಿಬ್ಬೊಟ್ಟೆಯಲ್ಲಿ ನೋವು, ಉಬ್ಬುವುದು, ಅತಿಸಾರ, ಮಲಬದ್ಧತೆ, ವಾಕರಿಕೆ, ವಾಂತಿ, ಹಸಿವಾಗದಿರುವುದು, ಆಯಾಸ ಹೆಚ್ಚಳ, ದೇಹದ ತೂಕ ಕ್ಷೀಣಿಸುವುದು, ಬೆಳವಣಿಗೆಯಲ್ಲಿ ಹಿನ್ನಡೆ ಹಾಗೂ ಪದೇ ಪದೇ ಬಾಯಿಯಲ್ಲಿ ಹುಣ್ಣಾಗುವ ಲಕ್ಷಣಗಳನ್ನು ಹೊಂದಿರುತ್ತದೆ.
ತಡವಾಗಿ ಪ್ರಾಯಸ್ಥರಾಗುವುದು, ವರ್ತನೆಯಲ್ಲಿ ದೋಷ, ಕಬ್ಬಿಣಾಂಶದ ಕೊರತೆ, ಎಲುಬುಗಳ ರೋಗ, ಹೆಪಟೈಟೀಸ್, ಸಂಧಿವಾತ, ಬಂಜೆತನ, ತೀವ್ರವಾದ ತಲೆ ನೋವು, ತಟಸ್ಥತೆ ಹಾಗೂ ನ್ಯೂರೋಪತಿಯಂಥ ಸಮಸ್ಯೆಗಳೂ ಇದೇ ರೋಗದಿಂದ ಬರಬಹುದು.
ಹೆಪಟೈಟಿಸ್ ಬಿ ಲಸಿಕೆಗೆ ಸಿಲಿಯೇಕ್ ಭಾದೆಯುಳ್ಳವರು ನಿಧಾನವಾಗಿ ಪ್ರತಿಕ್ರಿಯಿಸುತ್ತಾರೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಕ್ಯಾನ್ಸರ್ ಅಥವಾ ಆಟೊಇಮ್ಯೂನ್ ರೋಗಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಮಗುವಿಗೆ ಮೂರು ವರ್ಷಗಳಾದಗ ಒಮ್ಮೆ ಜೀರ್ಣ ಕ್ರಿಯೆಯನ್ನು ಗಮನಿಸುವುದೊಳಿತು.
ಜಾಗೃತರಾಗುವುದೇ ಉತ್ತಮ ಮದ್ದು
ಗ್ಲುಟನ್ ರಹಿತ ಆಹಾರ ಸೇವಿಸುವುದು ಒಳಿತು. ಗ್ಲುಟನ್‌ಯುಕ್ತ ಸಣ್ಣ ಬಿಸ್ಕತ್ ಕೂಡ ಆರೋಗ್ಯವನ್ನು ಹಾಳು ಮಾಡಬಹುದು. ಗೋದಿ ಕೇಕ್, ಪಾಸ್ತ, ಬಿಸ್ಕೆಟ್ಸ್, ಬ್ರೆಡ್ ಮತ್ತು ಬಾರ್ಲಿ ಅವೈಯ್ಡ್ ಮಾಡಿ. ಬದಲಾಗಿ ಹಣ್ಣು, ತರಕಾರಿ, ಅನ್ನ, ಮಾಂಸ, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸೋದು ಆರೋಗ್ಯಕ್ಕೆ ಒಳಿತು. ಗೋದಿಯಲ್ಲಿ ಮಾತ್ರವಲ್ಲ, ಕೆಲವು ಮೆಡಿಸಿನ್, ಸೌಂದರ್ಯವರ್ಧಕಗಳಲ್ಲಿಯೂ ಗ್ಲುಟನ್ ಅಂಶವಿರುತ್ತದೆ.
ಅತಿಸಾರದಿಂದಲೂ ಕೂಸು ಬಡವು
ಅತಿಸಾರ (ಡಯೇರಿಯಾ)ವೂ ಮಗು ತೂಕ ಕಳೆದುಕೊಳ್ಳಲು ಕಾರಣವಾಗಬಲ್ಲದು. ಕ್ರಿಯಾಶೀಲತೆಯಿಂದ, ಲವಲವಿಕೆಯಿಂದ ಓಡಾಡುವ ಮಗುವಿಗೆ ಅತಿಸಾರದಿಂದ ಕ್ರಮೇಣ ದೇಹದ ತೂಕ ಇಳಿಮುಖವಾಗಿರುತ್ತದೆ. ಗ್ಲುಟನ್ ಫ್ರಿ ಆಹಾರ ಸೇವನೆಯಿಂದ ಕ್ರಮೇಣ ಅತಿಸಾರವನ್ನೂ ತಡೆಯಬಹುದು.
- ಮಂಜುನಾಥ್ .ಎಲ್. ಕೆ